ಮಂಗಳವಾರ, ಏಪ್ರಿಲ್ 20, 2021
29 °C

ನೇರ, ನಿಷ್ಠುರವಾದಿ ಅಂಬಿಗರ ಚೌಡಯ್ಯ: ವೈ. ಯಮುನೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಹನ್ನೆರಡನೇ ಶತಮಾನದ ಶರಣರಲ್ಲಿ ಪ್ರಮುಖರಾಗಿರುವ ಅಂಬಿಗರ ಚೌಡಯ್ಯನವರು ನೇರ, ನಿಷ್ಠುರಿಯಾಗಿದ್ದರು. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿ’ ಎಂದು ಗಂಗಾಮತ ಸಮಾಜದ ಹಿರಿಯ ಮುಖಂಡ ವೈ. ಯಮುನೇಶ್ ಹೇಳಿದರು.

ಗುರುವಾರ ನಗರದ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 901ನೇ ಜಯಂತಿ ಉತ್ಸವದಲ್ಲಿ ಮಾತನಾಡಿದರು.

‘ನಾಡಿನ ಚರಿತ್ರೆಯಲ್ಲಿ ಹನ್ನೆರಡನೇ ಶತಮಾನಕ್ಕೆ ವಿಶೇಷ ಮಹತ್ವ ಇದೆ. ಆ ಕಾಲಘಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಚೌಡಯ್ಯನವರು ಭಾಗಿಯಾಗಿದ್ದರು. ಚೌಡಯ್ಯನವರ ನೇರ, ನಿಷ್ಠುರ ಮಾತುಗಳು, ಖಂಡಿಸುವ ಗುಣದಿಂದಲೇ ನಿಜಶರಣ ಎಂಬ ಬಿರುದು ಹೊಂದಿದ್ದರು, ವಚನಗಳ ಮೂಲಕ ತಮ್ಮ ಕಾಯಕವನ್ನು ಎತ್ತಿ ಹಿಡಿದಿದ್ದರು. ಜೊತೆಗೆ ಸ್ತ್ರೀ ಸಮಾನತೆಗೂ ಮಹತ್ವ ಕೊಟ್ಟಿದ್ದರು’ ಎಂದು ತಿಳಿಸಿದರು.

‘ಮಹನೀಯರ ಜಯಂತಿ ‌ಆಚರಣೆಗೆ ಸೀಮಿತವಾಗದೇ ಅವರ ಆದರ್ಶ ಪಾಲಿಸಬೇಕು. ಗಂಗಾಮತ ಸಮಾಜಕ್ಕೆ ರಾಜಕೀಯ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಗಬೇಕು. ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದರು.

ತಹಶೀಲ್ದಾರ್ ಎಚ್.ವಿಶ್ವನಾಥ್ ಮಾತನಾಡಿ, ‘ಚೌಡಯ್ಯನವರು ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಚೌಡದಾನ ಪುರದಲ್ಲಿದ್ದರು. ಒಮ್ಮೆ ಗುತ್ತಲ ರಾಜರ ಮಗನಿಗೆ ಹಾವು ಕಚ್ಚಿದಾಗ, ಅದನ್ನು ನಿವಾರಣೆ ಮಾಡಿದ್ದರು. ನಂತರ ರಾಜರು ನೀಡಿದ ಭೂಮಿ ದಾನ ಪಡೆದು, ತನ್ನ ಶಿವಪುರದ ಗುರುಗಳಿಗೆ ದಾನ ಮಾಡುತ್ತಾರೆ. ನಂತರ ಶಿವಪುರ ಚೌಡದಾನಪುರವಾಗುತ್ತದೆ’ ಎಂದು ಹೇಳಿದರು.

‘ಸಮಾಜದ ಅಂಕುಡೊಂಕುಗಳನ್ನು 10 ಸಾವಿರಕ್ಕೂ ಹೆಚ್ಚಿನ ವಚನಗಳ ಮೂಲಕ ತಿದ್ದಿದ್ದಾರೆ, ಕೋವಿಡ್ ಕಾರಣಕ್ಕಾಗಿ ಈ ವರ್ಷ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ’ ಎಂದರು. ಇದಕ್ಕೂ ಮುನ್ನ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಗಂಗಾಮತ ಸಮಾಜದ ಪ್ರಸಕ್ತ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು. ಬೆಳಿಗ್ಗೆ ಚಪ್ಪರದಹಳ್ಳಿಯ ಮಠದಲ್ಲಿ ಅಂಬಿಗರ ಚೌಡಯ್ಯನವರ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್‌, ‌ಶಿರಸ್ತೇದಾರರಾದ ಶ್ರೀಧರ್, ರಮೇಶ್, ಆಹಾರ ಇಲಾಖೆಯ ಮಂಜುನಾಥ್, ನಿಜಶರಣ ಅಂಬಿಗರ ಚೌಡಯ್ಯನವರ ಸೇವಾ ಟ್ರಸ್ಟ್‌ ಅಧ್ಯಕ್ಷ ಮುದುಗಲ್‌ ಸುಭಾಷ್ ಚಂದ್ರ, ಕಾರ್ಯದರ್ಶಿ ಬಿ. ನಾಗರಾಜ, ಮುಖಂಡರಾದ ರಾಮಲಿ ಹುಲುಗಜ್ಜಪ್ಪ, ಎಸ್.ಗಾಳೆಪ್ಪ, ಮಡ್ಡಿ ಹನುಮಂತಪ್ಪ, ಮಡ್ಡೇರ್ ವೆಂಕಪ್ಪ, ವಿ.ನಾಗರಾಜ್, ಎಸ್.ನಾಗರಾಜ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು