ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ತೊರೆಯುವ ಮೊದಲೇ ಕಾಂಗ್ರೆಸ್ ಇಬ್ಭಾಗ

ಆನಂದ್‌ ಸಿಂಗ್‌ ಬೆಂಬಲಿಗರು–ಮೂಲ ಕಾಂಗ್ರೆಸ್ಸಿಗರ ನಡುವೆ ಒಳಗೊಳಗೆ ಜಟಾಪಟಿ
Last Updated 17 ಜುಲೈ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಶಾಸಕ ಸ್ಥಾನಕ್ಕೆ ಆನಂದ್‌ ಸಿಂಗ್‌ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ.

ಒಂದು ಬಣ ಸಿಂಗ್‌ ಅವರ ಬೆನ್ನಿಗೆ ನಿಂತರೆ, ಇನ್ನೊಂದು ಬಣ ಅವರ ವಿರುದ್ಧ ನಿಂತಿದೆ.ಇನ್ನಷ್ಟೇ ಸಿಂಗ್‌ ಅವರ ರಾಜೀನಾಮೆ ಅಂಗೀಕಾರವಾಗಬೇಕಿದೆ. ಸಿಂಗ್‌ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಅದನ್ನು ಪುಷ್ಟೀಕರಿಸುವಂತೆ ಸಿಂಗ್‌ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್ಸಿಗರಲ್ಲಿ ಸಹಜವಾಗಿಯೇ ಅಸಮಾಧಾನಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಕುರಿತು ಇತ್ತೀಚೆಗೆ ‌ಕರೆದಿದ್ದ ಆತ್ಮಾವಲೋಕನ ಸಭೆಗೆ ಸಿಂಗ್‌ ಗೈರಾಗಿದ್ದರು. ಅಷ್ಟೇ ಅಲ್ಲ, ಪಕ್ಷದ ಚಟುವಟಿಕೆಗಳಿಂದ ಅವರು ದೂರವಾಗಿರುವುದಲ್ಲದೇ ಅವರ ಬೆಂಬಲಿಗರು ಅಂತರ ಕಾಯ್ದುಕೊಂಡಿದ್ದಾರೆ. ಇದು ಇಷ್ಟಕ್ಕೆ ಸೀಮಿತವಾಗಿ ಉಳಿದಿಲ್ಲ.ಒಳಗೊಳಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಹಿಡಿದಿಡುವ ಪ್ರಯತ್ನ ಎರಡೂ ಕಡೆಯಿಂದ ಜೋರಾಗಿ ನಡೆಯುತ್ತಿದೆ.

‘ಯಾವುದೇ ಕಾರಣಕ್ಕೂ ಮೂಲ ಕಾಂಗ್ರೆಸ್ಸಿಗರು ಆನಂದ್‌ ಸಿಂಗ್‌ ಅವರ ಜತೆ ಹೋಗುವುದಿಲ್ಲ. ಅವರು ಏಕಾಂಗಿಯಾಗಿ ಪಕ್ಷಕ್ಕೆ ಬಂದಿದ್ದರು. ಈಗ ಅವರೊಬ್ಬರೇ ಹೋಗುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರು ಗಟ್ಟಿ ಕಾಳುಗಳಂತೆ ಇದ್ದಾರೆ. ಸಣ್ಣಪುಟ್ಟ ಆಮಿಷಕ್ಕೆ ಒಳಗಾಗುವುದಿಲ್ಲ. ಇದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ ಪಕ್ಷದ ಮುಖಂಡ ನಿಂಬಗಲ್‌ ರಾಮಕೃಷ್ಣ.

‘ಹೋದ ವರ್ಷದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೆ ಸೋಲುತ್ತೇನೆ ಎಂಬ ಕಾರಣಕ್ಕಾಗಿ ಸಿಂಗ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ, ನಂತರ‌ನಡೆದ ಚುನಾವಣೆಯಲ್ಲಿಯೂ ಜಯಭೇರಿ ಬಾರಿಸಿದ್ದರು. ಆದರೆ, ಒಂದೇ ವರ್ಷದಲ್ಲಿ ನಿಷ್ಠೆ ಬದಲಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅವರ ಗೆಲುವಿಗಾಗಿ ನೂರಾರು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದರು ಎಂಬುದನ್ನು ಅವರು ಮರೆಯಬಾರದು. ಇದು ಪಕ್ಷ ಹಾಗೂ ಮತದಾರರಿಗೆ ಮಾಡುವ ದ್ರೋಹವಲ್ಲದೆ ಮತ್ತೇನೂ ಅಲ್ಲ’ ಎಂದು ಹೇಳಿದರು.

‘ಆನಂದ್‌ ಸಿಂಗ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಹೊರತು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಇಲ್ಲ. ಆದರೆ, ಕೆಲವು ಕಾಂಗ್ರೆಸ್ಸಿಗರು ಅವರು ಬಿಜೆಪಿ ಸೇರುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಸಿಂಗ್‌ ಅವರ ಹೆಸರು ಕೆಡಿಸಬೇಕೆಂಬ ದೃಷ್ಟಿಯಿಂದ ಹೀಗೆ ಮಾಡುತ್ತಿದ್ದಾರೆ’ ಎಂದು ಆನಂದ್‌ ಸಿಂಗ್‌ ಅವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯನಗರ ಕ್ಷೇತ್ರದಲ್ಲಿ ಆನಂದ್‌ ಸಿಂಗ್‌ ಅವರು ಅವರದೇ ಆದ ವರ್ಚಸ್ಸು ಹೊಂದಿದ್ದಾರೆ. ಅವರು ಎಲ್ಲಿಗೆ ಹೋದರೂ ದೊಡ್ಡ ಕಾರ್ಯಕರ್ತರ ಪಡೆಯೇ ಅವರೊಂದಿಗೆ ಹೋಗುತ್ತದೆ. ಮುಖಂಡರು, ಕಾರ್ಯಕರ್ತರ ಮೇಲೆ ಯಾರು ಎಷ್ಟೇ ಒತ್ತಡ ಹೇರಿದರೂ ಪ್ರಯೋಜನವಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT