ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌ ಸಿಂಗ್‌ಗೆ ಕೆಲಸ ಮಾಡಿಸುವ ತಾಕತ್ತಿಲ್ಲ: ಶೋಭಾ ಕರಂದ್ಲಾಜೆ

ಬಿಜೆಪಿ ಮಹಿಳಾ ಸಮಾವೇಶ
Last Updated 25 ಅಕ್ಟೋಬರ್ 2018, 9:25 IST
ಅಕ್ಷರ ಗಾತ್ರ

ಹೊಸಪೇಟೆ: ‘ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಹೀಗಿದ್ದರೂ ಇಲ್ಲಿನ ಶಾಸಕ ಆನಂದ್‌ ಸಿಂಗ್‌ ಅವರಿಗೆ ಅಧಿಕಾರಿಗಳಿಂದ ಕೆಲಸ ಮಾಡಿಸುವ ತಾಕತ್ತಿಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ನಗರೋತ್ಥಾನ, ಸುವರ್ಣ ಗ್ರಾಮ, ಒಳಚರಂಡಿ ಕಾಮಗಾರಿಗೆ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನುದಾನ ನೀಡಿದ್ದರು. ಆ ಅನುದಾನದಲ್ಲೇ ಈಗಲೂ ಕೆಲಸ ನಡೆಯುತ್ತಿದೆ. ಸಿದ್ದರಾಮಯ್ಯನವರು ನಯಾ ಪೈಸೆ ನೀಡಿರಲಿಲ್ಲ. ಮೋದಿಯವರು ಪ್ರಧಾನಿಯಾದ ನಂತರ ಅಮೃತ ಯೋಜನೆಯಡಿ ಕೋಟ್ಯಂತರ ರೂಪಾಯಿ ಕೊಟ್ಟಿದ್ದಾರೆ. ಆದರೆ, ಹಣ ಕೊಟ್ಟರೂ ಕೆಲಸ ಮಾಡಿಸುವ ತಾಕತ್ತು ಆನಂದ್‌ ಸಿಂಗ್‌ಗೆ ಇಲ್ಲ’ ಎಂದು ದೂರಿದರು.

‘ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಮುಚ್ಚಿದೆ. ಇದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಕಬ್ಬು ಸಾಗಿಸುವ ಅನಿವಾರ್ಯತೆ ಎದುರಾಗಿದೆ. ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆನಂದ್‌ ಸಿಂಗ್‌ ಶಾಸಕರಾಗಿ ಆಯ್ಕೆಯಾದ ನಂತರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಅವರೇ ಹೇಳಬೇಕು’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಅನ್ಯ ರಾಜ್ಯಗಳಿಂದ ಅಕ್ಕಿ, ಗೋಧಿ ಖರೀದಿಸಿ ರಾಜ್ಯಕ್ಕೆ ನೀಡಿತ್ತು. ಆದರೆ, ಸಿದ್ದರಾಮಯ್ಯನವರು ‘ಅನ್ನಭಾಗ್ಯ’ ಎಂದು ಹೇಳಿಕೊಂಡು ಪುಕ್ಕಟೆ ಪ್ರಚಾರ ಪಡೆದರು. ಅಷ್ಟೇ ಅಲ್ಲ, ಕಾಂಗ್ರೆಸ್ಸಿನ ಪುಢಾರಿಗಳು ಅದನ್ನು ನೆರೆ ರಾಜ್ಯಗಳಲ್ಲಿ ಮಾರಿಕೊಂಡರು. ಮೋದಿಯವರಿಗೆ ಅದರ ಶ್ರೇಯ ನೀಡದಿದ್ದರೂ ಅದರ ದುರುಪಯೋಗ ಆಗದಂತೆ ನೋಡಿಕೊಳ್ಳಲು ಆಗಲಿಲ್ಲ’ ಎಂದರು.

‘ರಾಜ್ಯದಲ್ಲಿ ಐದು ವರ್ಷ ಬಿಜೆಪಿ ಆಡಳಿತ ಬಿಟ್ಟರೆ ಮಿಕ್ಕುಳಿದ ಅವಧಿಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು.. ಹೀಗಿದ್ದರೂ ಅದು ಯಾವುದೇ ಜನಪರ ಕೆಲಸ ಮಾಡಲಿಲ್ಲ. ಯಡಿಯೂರಪ್ಪನವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ನಮ್ಮ ಒಡಕಿನಿಂದ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆದ್ದರೆ ಹೊರತು ಜನ ಅವರನ್ನು ಆಯ್ಕೆ ಮಾಡಲಿಲ್ಲ. ಅಧಿಕಾರ ಸಿಕ್ಕರೂ ಒಳ್ಳೆಯ ಕೆಲಸ ಮಾಡಲಿಲ್ಲ’ ಎಂದು ಟೀಕಿಸಿದರು.

‘ಒಂದು ಕಾಲದಲ್ಲಿ ಬಳ್ಳಾರಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಸೋನಿಯಾ ಗಾಂಧಿ ಅವರು ಈ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ಹಿಂಜರಿಯುವ ಕಾಲವಿತ್ತು. ಈಗ ಅದೆಲ್ಲ ಬದಲಾಗಿದೆ. ಬಿಜೆಪಿಗಿದ್ದ ಸ್ಥಿತಿ ಕಾಂಗ್ರೆಸ್ಸಿಗೆ ಬಂದೊದಗಿದೆ. ಈ ಕಾರಣಕ್ಕಾಗಿಯೇ ಹೊರಗಿನವರಿಗೆ ಆ ಪಕ್ಷ ಟಿಕೆಟ್‌ ನೀಡಿದೆ’ ಎಂದರು.

ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್‌, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಮೃತ್ಯುಂಜಯ ಜಿನಗಾ, ಕವಿರಾಜ್‌ ಅರಸ್‌, ಅಶೋಕ್‌ ಜೀರೆ, ಅನಂತ ಪದ್ಮನಾಭ, ಶಂಕರ್‌ ಮೇಟಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT