ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್‌ ತೀರ್ಪು ತಂದ ‘ಆನಂದ’

ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ಅಡೆತಡೆ ದೂರ
Last Updated 13 ನವೆಂಬರ್ 2019, 11:56 IST
ಅಕ್ಷರ ಗಾತ್ರ

ಹೊಸಪೇಟೆ: ಸುಪ್ರೀಂಕೋರ್ಟ್‌ ಬುಧವಾರ ನೀಡಿರುವ ತೀರ್ಪಿನಿಂದ ಆನಂದ್‌ ಸಿಂಗ್‌ ಹಾಗೂ ಅವರ ಬೆಂಬಲಿಗರು ನಿರಾಳರಾಗಿದ್ದಾರೆ.

‘ಆನಂದ್‌ ಸಿಂಗ್‌ ಅವರು ಚುನಾವಣೆಗೆ ಸ್ಪರ್ಧಿಸಬಹುದು’ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿರುವ ಕಾರಣ ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ಅವರಿಗೆ ಮಾರ್ಗ ಸುಲಭವಾದಂತಾಗಿದೆ.

ಬುಧವಾರ ಯಾವ ರೀತಿಯ ತೀರ್ಪು ಹೊರ ಬರಲಿದೆಯೋ ಎಂದು ಸಿಂಗ್‌ ಹಾಗೂ ಅವರ ಬೆಂಬಲಿಗರು ಚಿಂತಕ್ರಾಂತರಾಗಿದ್ದರು. ತೀರ್ಪು ಹೊರಬಿದ್ದ ಬಳಿಕ ಅವರ ಚಿಂತೆ ದೂರವಾಗಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಅರಳಿದೆ.

ಉಪಚುನಾವಣೆಗೆ ನ. 11ರಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಂದುವರೆದಿದೆ. ನ. 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಸಿಂಗ್‌ ಯಾವ ದಿನ ನಾಮಪತ್ರ ಸಲ್ಲಿಸುವರು ನೋಡಬೇಕಿದೆ. ಸಿಂಗ್‌ಗೆ ಬಿಜೆಪಿ ಟಿಕೆಟ್‌ ಸಿಗುವುದು ಮೊದಲೇ ಪಕ್ಕಾ ಆಗಿದ್ದು, ಅವರು ಇನ್ನಷ್ಟೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯಬೇಕಿದೆ.

‘ಜಿಂದಾಲ್‌ಗೆ ಸರ್ಕಾರ ಯಾವುದೇ ಕಾರಣಕ್ಕೂ ಭೂ ಪರಭಾರೆ ಮಾಡಬಾರದು’ ಎಂದು ಒತ್ತಾಯಿಸಿ ಸಿಂಗ್‌ ಜುಲೈ 1ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜು. 23ರಂದು ಸ್ಪೀಕರ್‌ ರಮೇಶ ಕುಮಾರ ಅವರು ಸಿಂಗ್‌ ಹಾಗೂ ಇತರೆ ಶಾಸಕರನ್ನು ಅನರ್ಹಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಒಂದೆಡೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಚುನಾವಣಾ ಆಯೋಗ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಪ್ರಕ್ರಿಯೆ ಆರಂಭಿಸಿತ್ತು. ಅದಕ್ಕೆ ನ್ಯಾಯಾಲಯ ತಡೆ ನೀಡಿದ್ದರಿಂದ ಬಳಿಕ ಆಯೋಗವು ಡಿ. 5ರಂದು ಚುನಾವಣೆ ದಿನಾಂಕ ಘೋಷಿಸಿತು.

ಲೆಕ್ಕಾಚಾರ ಶುರು:

ಕ್ಷೇತ್ರದಲ್ಲಿ ಅಷ್ಟೇನೂ ಪ್ರಬಲವಲ್ಲದ ಜೆ.ಡಿ.ಎಸ್‌. ಪಕ್ಷದಿಂದ ಸೋಮವಾರ ಮಾಜಿ ಶಾಸಕ ಎನ್‌.ಎಂ. ನಬಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪು ಬರುವವರೆಗೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾದು ನೋಡಲು ನಿರ್ಧರಿಸಿದ್ದವು. ಈಗ ತೀರ್ಪು ಹೊರಬಂದಿದ್ದು, ಶೀಘ್ರ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಬೇಕಿದೆ.

ಬಿಜೆಪಿಯಿಂದ ಆನಂದ್‌ ಸಿಂಗ್‌ ನಿಲ್ಲುವುದು ಖಚಿತವಾಗಿದೆ. ಆನಂದ್‌ ಸಿಂಗ್‌ ಅನರ್ಹತೆ ರದ್ದುಗೊಂಡು ಅವರಿಗೆ ಬಿಜೆಪಿ ಟಿಕೆಟ್‌ ಸಿಕ್ಕರೆ ಗವಿಯಪ್ಪನವರನ್ನು ಪಕ್ಷಕ್ಕೆ ಸೆಳೆದು ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌ ಯೋಚಿಸಿತ್ತು. ಆದರೆ, ಗವಿಯಪ್ಪನವರು ಚುನಾವಣೆಗೆ ನಿಲ್ಲದಿರಲು ತೀರ್ಮಾನಿಸಿದ್ದಾರೆ. ಮುಖಂಡರಾದ ಕೆ.ಎಸ್‌.ಎಲ್‌. ಸ್ವಾಮಿ, ಪಂಪಾಪತಿ, ವೆಂಕಟರಾವ ಘೋರ್ಪಡೆ ಹಾಗೂ ಮೊಹಮ್ಮದ್‌ ಇಮಾಮ್‌ ನಿಯಾಜಿ ಪೈಕಿ ಯಾರಾದರೂ ಒಬ್ಬರನ್ನು ಕಣಕ್ಕಿಳಿಸಲಾಗುವುದು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT