ಗುರುವಾರ , ಡಿಸೆಂಬರ್ 5, 2019
20 °C
ಪ್ರಚಾರ ಸಭೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಭರವಸೆ

ಆನಂದ್‌ ಸಿಂಗ್‌ ಗೆದ್ದ 24 ಗಂಟೆಯೊಳಗೆ ಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಆನಂದ್‌ ಸಿಂಗ್‌ ಅವರು ಚುನಾವಣೆಯಲ್ಲಿ ಗೆದ್ದ 24 ಗಂಟೆಯೊಳಗೆ ಸಚಿವರಾಗುತ್ತಾರೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ತಾಲ್ಲೂಕಿನ ಬಸವನದುರ್ಗದಲ್ಲಿ ಗುರುವಾರ ಸಂಜೆ ಪಕ್ಷದ ಅಭ್ಯರ್ಥಿ ಆನಂದ್‌ ಸಿಂಗ್‌ ಪರ ನಡೆಸಿದ ಪ್ರಚಾರ ಭಾಷಣದಲ್ಲಿ ಮತದಾರರಿಗೆ ಭರವಸೆ ನೀಡಿದರು.

‘ಆನಂದ್‌ ಸಿಂಗ್‌ ಅವರು ಗೆದ್ದರೆ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಉಳಿಯುತ್ತದೆ. ಜತೆಗೆ ಸಿಂಗ್‌ ಮಂತ್ರಿಯಾಗುತ್ತಾರೆ. ಇದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲಾ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಕವಿರಾಜ ಅರಸ್‌ ಹಾಗೂ ಶರತ್‌ ಬಚ್ಚೇಗೌಡ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದೆ’ ಎಂದರು.

‘ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಈಗಾಗಲೇ ಕ್ಷಮೆ ಕೇಳಿ ವಿವಾದವನ್ನು ಕೊನೆಗೊಳಿಸಿದ್ದಾರೆ. ಈ ಪ್ರಕರಣ ಮುಕ್ತಾಯಗೊಂಡಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಾಗೇನಹಳ್ಳಿಯಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ‘ಕಂಪ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಕಾರ್ಖಾನೆ ಆರಂಭವಾಗಬಹುದು. ರೈತರ ಎರಡನೇ ಬೆಳೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸರ್ಕಾರ ರೈತರಿಗೆ ಎಲ್ಲಾ ರೀತಿಯ ನೆರವು ನೀಡಲಿದೆ’ ಎಂದು ಭರವಸೆ ನೀಡಿದರು.

ಶಾಸಕ ಸೋಮಲಿಂಗಪ್ಪ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಬಸವರಾಜ ನಾಲತ್ವಾಡ ಇದ್ದರು. ತಾಲ್ಲೂಕಿನ ಬೆನಕಾಪುರ, ಬೆನಕಾಪುರ ತಾಂಡ, ಮಲಪನಗುಡಿ ತಾಂಡ, ಹಳೆ ಮಲಪನಗುಡಿ, ಹೊಸ ಮಲಪನಗುಡಿ ಹಾಗೂ ಗಾಳೆಮ್ಮನ ಗುಡಿಯಲ್ಲಿ ಶ್ರೀರಾಮುಲು ಪ್ರಚಾರ ಕೈಗೊಂಡರು.

ಪ್ರತಿಕ್ರಿಯಿಸಿ (+)