ಅನಂತಶಯನಗುಡಿ ಬಳಿ ಮೇಲ್ಸೇತುವೆಗೆ ಒಪ್ಪಿಗೆ-ಜನರ ಸಮಸ್ಯೆಗೆ ಶೀಘ್ರ ಮುಕ್ತಿ

7
18ರಿಂದ 24 ಮೀಟರ್‌ ಅಗಲಗೊಳ್ಳಲಿರುವ ರಸ್ತೆ

ಅನಂತಶಯನಗುಡಿ ಬಳಿ ಮೇಲ್ಸೇತುವೆಗೆ ಒಪ್ಪಿಗೆ-ಜನರ ಸಮಸ್ಯೆಗೆ ಶೀಘ್ರ ಮುಕ್ತಿ

Published:
Updated:
Deccan Herald

ಹೊಸಪೇಟೆ: ‘ನಗರದ ಅನಂತಶಯನಗುಡಿ ರೈಲ್ವೆ ಗೇಟ್‌ (ಎಲ್‌.ಸಿ.ಗೇಟ್‌ ನಂ. 85) ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಅದಕ್ಕೆ ಅಗತ್ಯ ಅನುದಾನ ಮಂಜೂರು ಮಾಡಲಾಗುವುದು’ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಆಡಳಿತಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿ ಬಿ. ಮುನಿಕೃಷ್ಣ ತಿಳಿಸಿದ್ದಾರೆ.

ಈ ಸಂಬಂಧ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ತನ್ನ ಪಾಲಿನ ಅನುದಾನ ನೀಡಲು ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಈಗಾಗಲೇ ಲೋಕೋಪಯೋಗಿ, ನಗರಸಭೆ ಹಾಗೂ ಇಲಾಖೆಯ ಅಧಿಕಾರಿಗಳು ಅನಂತಶಯನಗುಡಿ ರೈಲ್ವೆ ಗೇಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

‘ಈಗಿರುವ ರಸ್ತೆಯು ಸದ್ಯ 18 ಮೀಟರ್‌ ಅಗಲವಿದೆ. ಅದನ್ನು 24 ಮೀಟರ್‌ ವಿಸ್ತರಿಸಲಾಗುವುದು. ರೈಲ್ವೆ ಗೇಟಿನ ಎರಡೂ ಬದಿ 220 ಮೀಟರ್‌ ಉದ್ದ ಜಮೀನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಸಮೀಪದಲ್ಲಿರುವ ಪುರಾತನ ಆಂಜನೇಯ ಸ್ವಾಮಿ ದೇಗುಲದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

‘ಹೈದರಾಬಾದ್‌, ಉತ್ತರ ಕರ್ನಾಟಕದ ರಾಯಚೂರು, ಕಲಬುರ್ಗಿ ಸೇರಿದಂತೆ ಇತರೆ ಸ್ಥಳಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ವಿಶ್ವವಿಖ್ಯಾತ ಹಂಪಿ ಕೂಡ ಇದೇ ಭಾಗದಲ್ಲಿ ಇರುವುದರಿಂದ ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ಬರುತ್ತಾರೆ. ಗ್ರಾಮೀಣ ಭಾಗದ ಜನ ಕೂಡ ನಗರಕ್ಕೆ ಬರುತ್ತಾರೆ. ಆದರೆ, ಎರಡು ರೈಲು ಮಾರ್ಗಗಳು ಹಾದು ಹೋಗಿರುವುದರಿಂದ ಪದೇ ಪದೇ ರೈಲ್ವೆ ಗೇಟ್‌ ಹಾಕುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಅದಕ್ಕೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವುದು ಸಂತಸದ ಸಂಗತಿ’ ಎಂದು ವೈ. ಯಮುನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟಿ.ಬಿ. ಡ್ಯಾಂ ರಸ್ತೆಯಲ್ಲಿರುವ ರೈಲ್ವೆ ಗೇಟ್‌ (ಎಲ್‌.ಸಿ.ಗೇಟ್‌ ನಂ. 2) ಬಳಿ ಸಮೀಪ ಮೇಲ್ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ, ಅದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದೆ. ಪ್ರಾಧಿಕಾರವೇ ಅದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸುತ್ತಿದೆ ಎಂದು ಇಲಾಖೆಯು ತಿಳಿಸಿದೆ. ಹೀಗಾಗಿ ಎರಡೂ ಭಾಗದಲ್ಲಿ ಜನ ಎದುರಿಸುತ್ತಿರುವ ಸಮಸ್ಯೆ ಶೀಘ್ರ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !