ಕುಡುತಿನಿಯಲ್ಲೊಂದು ಅಭದ್ರ ಅಂಗನವಾಡಿ!

7
ಗೋಡೆಗೂ, ಛಾವಣಿಗೂ ಸಿಮೆಂಟ್‌ ಶೀಟೇ ಗತಿ

ಕುಡುತಿನಿಯಲ್ಲೊಂದು ಅಭದ್ರ ಅಂಗನವಾಡಿ!

Published:
Updated:
ಕುಡುತಿನಿಯ ಬುಡ್ಗಜಂಗಮ ಕಾಲೊನಿಯಲ್ಲಿ ಸಿಮೆಂಟ್‌ ಶೀಟುಗಳಿಂದ ನಿರ್ಮಿಸಿದ ಅಂಗನವಾಡಿ ಮುಂದೆ ಮಕ್ಕಳು.

ತೋರಣಗಲ್ಲು: ಇದು ಸಿಮೆಂಟ್‌ ಶೀಟ್‌ಗಳನ್ನೇ ಹೊದ್ದುಕೊಂಡಿರುವ ಅಭದ್ರ ಅಂಗನವಾಡಿ. ಆರು ವರ್ಷದಿಂದ ಈ ಸ್ಥಿತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.

ಸಮೀಪದ ಕುಡಿತಿನಿ ಪಟ್ಟಣ ಪಂಚಾಯಿತಿಯ 3ನೇ ವಾರ್ಡ್‌ನ ಬುಡ್ಗಜಂಗಮ ಕಾಲೊನಿಯಲ್ಲಿರುವ ಅಂಗನವಾಡಿಗೆ ಸ್ವಂತ ನಿವೇಶನವಿಲ್ಲ. ಕಟ್ಟಡವೂ ಇಲ್ಲ. ಮಳೆ,ಬಿಸಿಲು,ಗಾಳಿಗೆ ದಿನವೂ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಪರಿಶಿಷ್ಟ ಸಮುದಾಯದ ಮಕ್ಕಳು ಹೆಚ್ಚಿರುವ ಅಂಗನವಾಡಿಯಲ್ಲಿ 26 ಮಕ್ಕಳಿದ್ದಾರೆ. ಅವರ ಪೈಕಿ 12 ಹೆಣ್ಣು ಮಕ್ಕಳು ಇದ್ದಾರೆ.

ಭಯ, ಆತಂಕ: ‘ಮಳೆ ಬಂದರೆ, ಜೋರಾಗಿ ಗಾಳಿ ಬೀಸಿದರೆ ಶೀಟುಗಳು ಮೈಮೇಲೆ ಬೀಳುವ ಭಯ ಮತ್ತು ಆತಂಕದಲ್ಲೆ ಮಕ್ಕಳ ಉಸ್ತುವಾರಿ ಹೊತ್ತಿದ್ದೇನೆ. ಬಿಸಿಲು ತೀವ್ರವಾದರೆ ಅಂಗನವಾಡಿ ಒಳಗೂ ತಾಪ ಹೆಚ್ಚಿ ಮಕ್ಕಳು ಬೆವರಿ ಸುಸ್ತಾಗುತ್ತಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಅಸಹಾಯಕತೆ ವ್ಯಕ್ತಪಡಿಸಿದರು. ‘ಹಲವು ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ. ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ’ಪ್ರಜಾವಾಣಿ’ಗೆ ತಿಳಿಸಿದರು.

’ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಮತ್ತು ರಾಘವೇಂದ್ರ ಕಾಲೋನಿಯ ಅಂಗನವಾಡಿಗಳಿಗೂ ಸ್ವಂತ ಕಟ್ಟಡವಿಲ್ಲ. ಈ ಬಗ್ಗೆ ಗಮನ ಸೆಳೆದರೆ ಪಂಚಾಯಿತಿಯಾಗಲೀ, ಇಲಾಖೆಯಾಗಲೀ ಗಮನ ಹರಿಸುತ್ತಿಲ್ಲ’ ಎಂದು ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ ದೂರಿದರು.

‘ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಇಲಾಖೆಯು ಈ ಅಂಗನವಾಡಿಗೆ ಉತ್ತಮವಾದ ಬಾಡಿಗ ಕಟ್ಟಡದ ಸೌಕರ್ಯವನ್ನು ಯಾವಾಗಲೋ ಕಲ್ಪಿಸಬೇಕಾಗಿತ್ತು. ಆದರೆ ವರ್ಷಗಳು ಉರುಳಿದರೂ ಗಮನವನ್ನೇ ಹರಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ‘ಪಟ್ಟಣದಲ್ಲಿ ಮೂರು ಕೇಂದ್ರಗಳಿಗೆ ಸ್ವಂತ ನಿವೇಶನ ಮತ್ತು ಕಟ್ಟಡ ಇಲ್ಲ. ನಿವೇಶನ ಅಥವಾ ಕಟ್ಟಡ ಸೌಕರ್ಯ ಕಲ್ಪಿಸುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಿಶುಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ. ಕೃಷ್ಣಮ್ಮ ಪ್ರತಿಕ್ರಿಯಿಸಿದರು. ‘ಕಾಲೊನಿಯ ಅಂಗನವಾಡಿ ಅಭದ್ರವಾಗಿರುವ ಕುರಿತು, ಅಲ್ಲಿನ ಸಮಸ್ಯೆಗಳ ಕುರಿತು ಮತ್ತೊಮ್ಮೆ ಇಲಾಖೆಯ ಮೇಲಧಿಕಾರಿಗಳ ಗಮನ ಸೆಳೆಯುವೆ’ ಎಂದು ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !