ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆ ಅಖಾಡಕ್ಕೆ

ಹೂವಿನಹಡಗಲಿ ಪುರಸಭೆ ಚುನಾವಣೆ; ಕಣದಲ್ಲಿ ವಿವಿಧ ವಲಯದವರ ಸ್ಪರ್ಧೆ
Last Updated 26 ಮೇ 2019, 19:45 IST
ಅಕ್ಷರ ಗಾತ್ರ

ಹೂವಿನಹಡಗಲಿ: ಪುರಸಭೆ ಚುನಾವಣೆಗೆ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಮನೆತನದ ಹಿನ್ನೆಲೆ ಹಾಗೂ ವೃತ್ತಿಯಿಂದ ಗಮನ ಸೆಳೆಯುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಣದಲ್ಲಿ ಸ್ನಾತಕೋತ್ತರ ಪದವೀಧರ ಮಹಿಳೆ, ಗಣ್ಯ ವರ್ತಕ, ವಕೀಲರು ಹಾಗೂ ಅಂಗನವಾಡಿ ಕಾರ್ಯಕರ್ತೆಯ ಸ್ಪರ್ಧೆಯಿಂದ ಆಯಾ ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಅಂಗನವಾಡಿ ಕಾರ್ಯಕರ್ತೆ:ಪಟ್ಟಣದ ಕಾಯಕ ನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಸೆಟ್ಟಿ ಜಯಲಕ್ಷ್ಮಿ ಕೆಲಸಕ್ಕೆ ವಿದಾಯ ಹೇಳಿ ಎಂಟನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆ ಬಿಜೆಪಿಯ ಶೋಭಾ ಕಣದಾಳ ಪ್ರಬಲ ಪೈಪೋಟಿ ಒಡ್ಡಿದ್ದಾರೆ.

‘ನಮ್ಮ ಅಜ್ಜ, ಅಜ್ಜಿಯರಾದ ಬಸೆಟ್ಟಿ ಶಂಕ್ರಪ್ಪ, ಅಂದಾನಮ್ಮ ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರ ಪ್ರೇರಣೆಯಿಂದ ರಾಜಕೀಯಕ್ಕೆ ಧುಮುಕಿದ್ದೇನೆ. ಚುನಾವಣೆಯಲ್ಲಿ ಗೆದ್ದರೆ ಕಾರ್ಯಕರ್ತೆ ಹುದ್ದೆಗೆ ರಾಜೀನಾಮೆ ನೀಡುವೆ, ಸೋತರೆ ಕೆಲಸದಲ್ಲಿ ಮುಂದುವರಿಯುವೆ’ ಎಂದು ಜಯಲಕ್ಷ್ನಿ ತಿಳಿಸಿದರು.

‘ಕ್ಷೇತ್ರ ವ್ಯಾಪ್ತಿಯ ಎಂ.ಪಿ.ಪಿ. ನಗರದಲ್ಲಿ ಅನೇಕ ಜನರ ಮನೆಗಳ ನೋಂದಣಿ ಮಾಡಿಸಿ ಹಕ್ಕು ಸ್ಥಿರಪಡಿಸಿಕೊಟ್ಟಿರುವೆ. 20 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಪತ್ರಿ ಬಸವೇಶ್ವರ ದೇವಸ್ಥಾನಕ್ಕೆ ಸಚಿವ ಪರಮೇಶ್ವರ ನಾಯ್ಕರಿಂದ ಅನುದಾನ ಕೊಡಿಸಿರುವೆ. ಅನೇಕ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ. ಈ ಎಲ್ಲ ಒಳ್ಳೆಯ ಕೆಲಸಗಳು ಕೈ ಹಿಡಿಯುವ ವಿಶ್ವಾಸವಿದೆ’ ಎಂದು ಹೇಳಿದರು.

ಸ್ನಾತಕೋತ್ತರ ಪದವೀಧರೆ:ಮೂರನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ನಾತಕೋತ್ತರ ಪದವೀಧರೆ ಕವಿತಾ ಎಸ್.ಪಾಟೀಲ ಅಖಾಡಕ್ಕೆ ಇಳಿದಿದ್ದಾರೆ. ಅವರಿಗೆ ಕಾಂಗ್ರೆಸ್‌ನ ಎಚ್.ಜ್ಯೋತಿ ಪ್ರತಿಸ್ಪರ್ಧಿ. ದಿ. ಪಾಟೀಲ ಅನ್ನದಾನಗೌಡ್ರು ‘ಊರಿನ ಗೌಡರು’ ಹಾಗೂ ನ್ಯಾಯ ಪಂಚಾಯಿತಿಯ ಮುಖ್ಯಸ್ಥರಾಗಿ ಹೆಸರು ಮಾಡಿದವರು. ಜಿಲ್ಲಾ ಬೋರ್ಡ್‌ನ ಸದಸ್ಯರಾಗಿದ್ದ ಅವರ ನಿಸ್ವಾರ್ಥ ಸೇವೆಯನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ. ಈ ಕುಟುಂಬದ ಬಗ್ಗೆ ಪಟ್ಟಣದ ಜನತೆಗೆ ವಿಶೇಷ ಗೌರವವಿದ್ದರೂ ಕುಟುಂಬದ ಸದಸ್ಯರು ಈವರೆಗೆ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರಲಿಲ್ಲ. ಇದೀಗ ಗೌಡ್ರು ಮನೆತನದ ಸೊಸೆ ಕವಿತಾ ಪಾಟೀಲ ಕೆಲವು ಕನಸುಗಳನ್ನು ಹೊತ್ತು ಕಣಕ್ಕೆ ಇಳಿದಿದ್ದಾರೆ.

‘ಹೂವಿನಹಡಗಲಿಯ ಮೂಲ ಕೋಟೆಯಾಗಿದ್ದರೂ ಇನ್ನೂ ಹಳೇ ಕೋಟೆಯಾಗಿಯೇ ಉಳಿದಿದೆ. ರಸ್ತೆ ಅಗಲೀಕರಣದಿಂದ ಬೀದಿಗೆ ಬಂದಿರುವ ಅನೇಕ ಕುಟುಂಬಗಳಿಗೆ ಸೂರಿಲ್ಲ. ವಾರ್ಡ್‌ನಲ್ಲಿ ಒಳಚರಂಡಿ, ಕುಡಿಯುವ ನೀರು, ಬೀದಿ ದೀಪದ ಸಮಸ್ಯೆ ಇದೆ. ಜನತಾ ಪ್ಲಾಟ್ ಮನೆಗಳಿಗೆ ನೀರು ನುಗ್ಗುತ್ತಿದೆ. ನಾನು ಆಯ್ಕೆಯಾದರೆ ಈ ಎಲ್ಲ ಸಮಸ್ಯೆ ಪರಿಹರಿಸುವ ಜತೆಗೆ ಮಹಿಳೆಯರ ಗೃಹ ಕೈಗಾರಿಕೆ ಚಟುವಟಿಕೆಗಳಿಗೆ ಹೊಸ ರೂಪ ನೀಡುವ ಆಲೋಚನೆ ಹೊಂದಿದ್ದೇನೆ’ ಎಂದು ಕವಿತಾ ಪಾಟೀಲ ಹೇಳಿದರು.

ವಕೀಲರು:ಪಟ್ಟಣದ ಒಂದನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಕೀಲ ಜ್ಯೋತಿ ಮಲ್ಲಣ್ಣ ಕಣಕ್ಕಿಳಿದಿದ್ದಾರೆ. ಅವರಿಗೆ ಬಿಜೆಪಿಯ ಎಸ್.ನಿಜಲಿಂಗಪ್ಪ ಪ್ರತಿಸ್ಪರ್ಧಿ. ಹತ್ತನೇ ವಾರ್ಡ್‌ನಿಂದ ಹಾಲಿ ಪಕ್ಷೇತರ ಸದಸ್ಯ ಮಂಜುನಾಥ ಜೈನ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಕಾಂಗ್ರೆಸ್‌ನ ಕೆ.ಪತ್ರೇಶ್ ಪ್ರತಿಸ್ಪರ್ಧಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT