ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆಗೆ ಸೊರಗಿದ ಪಶು ವೈದ್ಯಕೀಯ ಇಲಾಖೆ

ನಾಲ್ಕೈದು ಆಸ್ಪತ್ರೆಗಳಿಗೆ ಒಬ್ಬರೇ ವೈದ್ಯರು; ರೋಗಪೀಡಿತ ಜಾನುವಾರುಗಳಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ
Last Updated 9 ಮೇ 2022, 7:50 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸಿಬ್ಬಂದಿ ಕೊರತೆಯಿಂದ ಅವಳಿ ಜಿಲ್ಲೆಗಳಾದ ವಿಜಯನಗರ– ಬಳ್ಳಾರಿಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಸೊರಗಿ ಹೋಗಿದೆ.

ಎ, ಬಿ, ಸಿ ಹಾಗೂ ಡಿ ದರ್ಜೆಯ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಗಿಂತ ಹೆಚ್ಚು ಹುದ್ದೆಗಳನ್ನು ಹಲವು ವರ್ಷಗಳಿಂದ ಸರ್ಕಾರ ತುಂಬಿಲ್ಲ. ಆದರೆ, ಇಲಾಖೆಯಲ್ಲಿ ಪ್ರತಿ ವರ್ಷ ಒಂದೊಂದಾಗಿ ಹೊಸ ಯೋಜನೆಗಳು ಸೇರ್ಪಡೆಯಾಗುತ್ತಿವೆ. ಇರುವ ಸಿಬ್ಬಂದಿಯೇ ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದ ಹೊಣೆ ಹೊತ್ತಿದೆ. ಆದರೆ, ಹೆಚ್ಚಿನ ಕೆಲಸದ ಒತ್ತಡದ ಪರಿಣಾಮ ಅವುಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ.

ಅವಳಿ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ನಾಲ್ಕೈದು ಪಶು ಆಸ್ಪತ್ರೆಗಳಿಗೆ ಒಬ್ಬ ವೈದ್ಯರಿದ್ದಾರೆ. ಕೆಲವೆಡೆ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಆ ವೈದ್ಯರು ವಾರಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಅವರ ಕೈಲಾದಷ್ಟು ಕೆಲಸ ಮಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಜಾನುವಾರುಗಳಿಗೆ ರೋಗ ಬಂದಾಗ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಹಲವೆಡೆ ಜಾನುವಾರುಗಳು ಮೃತಪಟ್ಟಿವೆ. ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ, ಹೆಚ್ಚಿನ ಆಸ್ಪತ್ರೆಗಳಲ್ಲಿ ಒಬ್ಬ ವೈದ್ಯರೇ ಕೆಲಸ ನಿರ್ವಹಿಸುತ್ತಿರುವುದರಿಂದ ಅವರ ಮೇಲೆ ಗೂಬೆ ಕೂರಿಸುವುದರಲ್ಲಿ ಅರ್ಥವಿಲ್ಲ ಎಂದು ಅವರೇ ಸಮಾಧಾನ ಕೂಡ ಮಾಡಿಕೊಳ್ಳುವಂತಹ ಪರಿಸ್ಥಿತಿ ಇದೆ.

ಕುರಿ, ಮೇಕೆ, ದನ ಹಾಗೂ ಕರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಲಾಗುತ್ತದೆ. ಸಿಬ್ಬಂದಿ ಕೊರತೆಯಿಂದ ಎಷ್ಟೋ ಸಲ ನಿಗದಿತ ಸಮಯಕ್ಕೆ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಇನ್ನೂ ಅವಿಭಜಿತ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ವಿಶಾಲವಾಗಿದೆ. ವಾಹನಗಳ ಕೊರತೆ ಸಾಕಷ್ಟಿರುವುದರಿಂದ ಲಸಿಕೆ ಹಾಕಲು ಸಿಬ್ಬಂದಿಯೇ ಪರದಾಟ ನಡೆಸುವಂತಹ ಪರಿಸ್ಥಿತಿ ಇದೆ. ಹಲವೆಡೆ ರೈತರೇ ಖುದ್ದು ದೂರದ ಕೇಂದ್ರಗಳಿಗೆ ಸ್ವಂತ ಖರ್ಚಿನಲ್ಲಿ ತೆರಳಿ ಲಸಿಕೆ ಹಾಕಿಸಿಕೊಳ್ಳುತ್ತಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹೊಸೂರು, ಕೂಡ್ಲಿಗಿ ತಾಲ್ಲೂಕಿನ ಆಲೂರು ಹೊರತುಪಡಿಸಿದರೆ ಇಲಾಖೆ ಎಲ್ಲ ಕಡೆ ಸ್ವಂತ ಕಟ್ಟಡಗಳನ್ನು ಹೊಂದಿದೆ. ಬಳ್ಳಾರಿ ತಾಲ್ಲೂಕಿನ ಕೋಳೂರು, ಸಂಡೂರಿನ ತಾರಾನಗರದಲ್ಲಿ ಸ್ವಂತ ಕಟ್ಟಡವಿಲ್ಲ.ನಾಲ್ಕೂ ಕಡೆಗಳಲ್ಲಿ ನಿವೇಶನ ಸಿಕ್ಕಿದ್ದು, ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಕಳಿಸಲಾಗಿದೆ. ಅನೇಕ ಸ್ವಂತ ಕಟ್ಟಡಗಳು ಶಿಥಿಲಗೊಂಡಿದ್ದು, ದುರಸ್ತಿ ಕಾಣಬೇಕಿದೆ.

ವಿಜಯನಗರ ಜಿಲ್ಲೆ ಪಶು ಸೇವೆಗಳ ವಿವರ

19: ಪಶು ಆಸ್ಪತ್ರೆಗಳು

55: ಪಶು ಚಿಕಿತ್ಸಾಲಯ

05: ಸಂಚಾರಿ ಚಿಕಿತ್ಸಾಲಯ

17 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು

96 ಒಟ್ಟು

ಬಳ್ಳಾರಿ ಜಿಲ್ಲೆ ಪಶು ಸೇವೆಗಳ ವಿವರ

11: ಪಶು ಆಸ್ಪತ್ರೆ

33:ಪಶು ಚಿಕಿತ್ಸಾಲಯಗಳು

03:ಸಂಚಾರಿ ಪಶು ಚಿಕಿತ್ಸಾಲಯ

08:ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ

01: ಪಾಲಿ ಕ್ಲಿನಿಕ್‌

45: ಒಟ್ಟು


ವಿಜಯನಗರದಲ್ಲಿ ಹುದ್ದೆಗಳ ವಿವರ

388: ಮಂಜೂರಾದ ಹುದ್ದೆ

181: ಭರ್ತಿಯಾದ ಹುದ್ದೆ

207: ಖಾಲಿ ಉಳಿದ ಹುದ್ದೆ

ಬಳ್ಳಾರಿ ಜಿಲ್ಲೆ ಹುದ್ದೆಗಳ ವಿವರ

259: ಮಂಜೂರಾದ ಹುದ್ದೆ

101:ಭರ್ತಿಯಾದ ಹುದ್ದೆ

158:ಖಾಲಿ ಹುದ್ದೆ

4 ಪಶು ಆಸ್ಪತ್ರೆಗೆ ಒಬ್ಬ ವೈದ್ಯ

ಹೂವಿನಹಡಗಲಿ: ತಾಲ್ಲೂಕಿನಲ್ಲಿರುವ 19 ಪಶು ಚಿಕಿತ್ಸಾಲಯಗಳ ಪೈಕಿ 11 ಆಸ್ಪತ್ರೆಗಳಲ್ಲಿ ಪಶು ವೈದ್ಯರೇ ಇಲ್ಲ.ಆರು ಚಿಕಿತ್ಸಾಲಯಗಳಲ್ಲಿಒಬ್ಬ ಸಿಬ್ಬಂದಿಯೂ ಇಲ್ಲ. ರೋಗಪೀಡಿತ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ವರ್ಷಗಳಿಂದಲೂ ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಪ್ರಾಣಿಗಳ ಮೂಕ ವೇದನೆ ಸರ್ಕಾರಕ್ಕೆ ಕೇಳಿಸದಾಗಿದೆ.

19 ಆಸ್ಪತ್ರೆಗಳ ಪೈಕಿ 8 ಜನ ವೈದ್ಯರಿದ್ದು,ಒಬ್ಬ ಪಶು ವೈದ್ಯರಿಗೆ ಎರಡೆರಡು ಆಸ್ಪತ್ರೆಗಳನ್ನು ವಹಿಸಿಕೊಡಲಾಗಿದೆ. ಹೊಳಲು ಆಸ್ಪತ್ರೆಯಲ್ಲಿ ಪಶು ವೈದ್ಯಕೀಯ ಪರಿವೀಕ್ಷಕರಿದ್ದು, ಉಳಿದ 18 ಆಸ್ಪತ್ರೆಗಳಲ್ಲಿ ಈ ಹುದ್ದೆಗಳು ಖಾಲಿ ಇವೆ.ಹ್ಯಾರಡ, ಬೂದನೂರು, ಮಕರಬ್ಬಿ, ಹಿರೇಹಡಗಲಿ, ನಾಗತಿಬಸಾಪುರ, ಸೋಗಿ ಚಿಕಿತ್ಸಾಲಯಗಳಲ್ಲಿ ಒಬ್ಬ ‘ಡಿ’ ಗ್ರುಪ್‌ ಸಿಬ್ಬಂದಿಯೂ ಇಲ್ಲ.

ಪರಿತಪಿಸುವ ರೈತಾಪಿ ವರ್ಗ

ಕೊಟ್ಟೂರು: ತಾಲ್ಲೂಕಿನಲ್ಲಿ ಒಟ್ಟು ಏಳು ಪಶು ಆಸ್ಪತ್ರೆಗಳಿವೆ. ಎಲ್ಲ ಕಡೆ ಸುಸಜ್ಜಿತ ಕಟ್ಟಡಗಳಿವೆ. ಔಷಧಿ ದಾಸ್ತಾನು ಇದೆ. ಆದರೆ, ಜಾನುವಾರುಗಳನ್ನು ಪರೀಕ್ಷಿಸಿ, ಔಷಧಿ ಕೊಡುವವರು ಇಲ್ಲ. ರೈತರು ಪರಿತಪಿಸುವ ಪರಿಸ್ಥಿತಿ ಇದೆ.

ತಾಲ್ಲೂಕಿನಲ್ಲಿ ಒಬ್ಬ ವೈದ್ಯ, ಐದು ಜನ ಪರೀಕ್ಷಕರು, ಇಬ್ಬರು ‘ಡಿ’ ಗ್ರುಪ್‌ ನೌಕರಿದ್ದಾರೆ. ತಾಲ್ಲೂಕು ಕೇಂದ್ರದ ಆಸ್ಪತ್ರೆಗೆ ಮೂರು ವೈದ್ಯರು ಸೇರಿದಂತೆ 10 ಜನ ಸಿಬ್ಬಂದಿ ಅಗತ್ಯವಿದೆ. ಆದರೆ, ಇಬ್ಬರು ಪರೀಕ್ಷಕರು ಇದ್ದಾರೆ. ನಿಂಬಳಗೆರೆ ಗ್ರಾಮದ ವೈದ್ಯರೇ ತಾಲ್ಲೂಕು ಆಸ್ಪತ್ರೆಗೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿರುವ ಪಶು ಪರೀಕ್ಷಕರು ಹಾಗೂ ಡಿ ಗ್ರುಪ್‌ ನೌಕರರು ಈ ವರ್ಷದ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ. ನಂತರದ ದಿನಗಳಲ್ಲಿ ಹುದ್ದೆ ಭರ್ತಿ ಆಗದಿದ್ದರೆ ಪ್ರಭಾರಿ ವೈದ್ಯರೇ ಆಸ್ಪತ್ರೆಯ ಬಾಗಿಲು ತೆರೆಯುವಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು.

6 ಪಶು ವೈದ್ಯರು, 24 ಸಿಬ್ಬಂದಿ ಕೊರತೆ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ 6 ಜನ ಪಶುವೈದ್ಯರು, 24 ಜನ ಸಿಬ್ಬಂದಿ ಕೊರತೆ ಇದೆ.

ಒಟ್ಟು 13 ಆಸ್ಪತ್ರೆಗಳಿದ್ದು, 8 ಜನ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯಕ ನಿರ್ದೇಶಕರ ಹುದ್ದೆ ಐದು ತಿಂಗಳಿಂದ ಖಾಲಿ ಉಳಿದಿದೆ.

ತಾಲ್ಲೂಕಿನಲ್ಲಿ 48,988 ಜಾನುವಾರುಗಳು, 1.20 ಲಕ್ಷ ಕುರಿಗಳಿವೆ. ತಾಲ್ಲೂಕಿನ ಎಲ್ಲ ಆಸ್ಪತ್ರೆಗಳಿಗೂ ಸ್ವಂತ ಕಟ್ಟಡಗಳಿವೆ. ಉಪನಾಯಕನಹಳ್ಳಿಯಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಉದ್ಘಾಟನೆಗೊಳ್ಳಬೇಕಿದೆ.

ಹರಪನಹಳ್ಳಿಯಲ್ಲಿ 59 ಜನ ಸಿಬ್ಬಂದಿ ಕೊರತೆ

ಹರಪನಹಳ್ಳಿ: ತಾಲ್ಲೂಕಿನಲ್ಲಿ ಪಶು ವೈದ್ಯಕೀಯ ಇಲಾಖೆಯಲ್ಲಿ ಒಟ್ಟು 59 ಜನ ಸಿಬ್ಬಂದಿಯ ಕೊರತೆ ಇದೆ. ಇದರ ಪರಿಣಾಮ ಸಕಾಲಕ್ಕೆ ಸೇವೆ ಸಿಗುತ್ತಿಲ್ಲ. ಸರ್ಕಾರದ ಯೋಜನೆ ಅನುಷ್ಠಾನಗೊಳಿಸಲು ಹಿನ್ನಡೆಯಾಗುತ್ತಿದೆ.

ತಾಲ್ಲೂಕಿನಲ್ಲಿ 5 ಪಶು ಆಸ್ಪತ್ರೆ, 7 ಪಶು ಚಿಕಿತ್ಸಾಲಯ, 13 ಪ್ರಾಥಮಿಕ ಚಿಕಿತ್ಸಾಲಯಗಳಿವೆ. 4 ಪಶು ವೈದ್ಯಾಧಿಕಾರಿ, 1 ಜಾನುವಾರು ಅಭಿವೃದ್ದಿ ಅಧಿಕಾರಿ, 4 ಜಾನುವಾರು ಅಧಿಕಾರಿ, 9 ಹಿರಿಯ ಪಶುವೈದ್ಯ ಪರೀಕ್ಷಕರು, 13 ಪಶು ವೈದ್ಯ ಸಹಾಯಕರು, ‘ಡಿ’ ದರ್ಜೆಯ 34 ಜನ ಸಿಬ್ಬಂದಿ ಸೇರಿ ಒಟ್ಟು 59 ಹುದ್ದೆಗಳ ಕೊರತೆಯಿದೆ. ಇತ್ತೀಚೆಗೆ ‘ಡಿ’ ದರ್ಜೆ 13 ಜನ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ.ಶಿವಕುಮಾರ ಜ್ಯೊತಿ ತಿಳಿಸಿದರು.

ಪಟ್ಟಣದ ಸಹಾಯಕ ನಿರ್ದೇಶಕ ಕಚೇರಿಯ ಮುಂಭಾಗದಲ್ಲಿ ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲಿಯೇ ನಗರ ಪಶು ಚಿಕಿತ್ಸಾಲಯ ಮುಂದುವರೆದಿದೆ. ವೈದ್ಯರ ಕೊರತೆಯಿಂದ ಎರಡು ಚಿಕಿತ್ಸಾ ಕೇಂದ್ರಗಳಿಗೆ ಒಬ್ಬರನ್ನು ನೇಮಿಸಲಾಗಿದೆ, ಕುರಿ, ಜಾನುವಾರು ಸತ್ತರೆ, ಅವುಗಳ ಮರಣೋತ್ತರ ಪರೀಕ್ಷೆ ಕಷ್ಟವಾಗಿದ್ದು, ಜನರೇ ಸ್ವತಃ ನಗರ ಆಸ್ಪತ್ರೆಗೆ ಮುಂಭಾಗ ಹೊತ್ತು ತಂದು ಪರೀಕ್ಷೆ ಮಾಡಿಸಿಕೊಂಡು ಹೋಗುವ ಪರಿಸ್ಥಿತಿ ಇದೆ.

ವೈದ್ಯರೂ ಇಲ್ಲ, ಚಿಕಿತ್ಸೆಯೂ ಇಲ್ಲ

ಕೂಡ್ಲಿಗಿ: ತಾಲ್ಲೂಕಿನ 14 ಪಶು ಚಿಕಿತ್ಸಾ ಆಸ್ಪತ್ರೆಗಳಿದ್ದು, ಅನೇಕ ಕಡೆ ವೈದ್ಯರಿಲ್ಲದೆ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ.

ಹಲವೆಡೆ ‘ಡಿ’ ದರ್ಜೆ ನೌಕರರೇ ಆಸ್ಪತ್ರೆಗೆ ಕರೆತರುವ ಜಾನುವಾರುಗಳಿಗೆ ಲಸಿಕೆ ಹಾಕುತ್ತಾರೆ. ತಾಲ್ಲೂಕಿನಲ್ಲಿ 14 ಜನ ವೈದ್ಯ ಹುದ್ದೆ ಮಂಜೂರಾಗಿವೆ. ಆದರೆ, ಸಹಾಯಕ ನಿರ್ದೇಶಕರು ಸೇರಿದಂತೆ ಕೇವಲ 6 ಜನ ವೈದ್ಯರಿದ್ದಾರೆ. ಒಟ್ಟು 64 ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾಲಿ ಇವೆ. ಈ ತಿಂಗಳು ಇಬ್ಬರು ‘ಡಿ’ ದರ್ಜೆ ನೌಕರರು ನಿವೃತ್ತರಾಗಲಿದ್ದಾರೆ. ಹೊಸಬರ ನೇಮಕಾತಿ ಆಗದಿದ್ದರೆ ಆಸ್ಪತ್ರೆಯ ಬಾಗಿಲು ತೆರೆಯಲು ಯಾರೂ ಇರುವುದಿಲ್ಲ.

ಪಶು ಸಂಗೋಪನಾ ಇಲಾಖೆಯಿಂದ ತರಬೇತಿ ಪಡೆದಿರುವ 14 ಜನ ‘ಮೈತ್ರಿ’ ಕಾರ್ಯಕರ್ತರಿದ್ದಾರೆ. ಜಾನುವಾರುಗಳಿಗೆ ಕೃತ ಗರ್ಭಧಾರಣೆ ಮಾಡಿಸುವುದು ಇವರ ಕೆಲಸ. ಆದರೆ, ಹೆಚ್ಚು ಕಡಿಮೆ ಜಾನುವಾರುಗಳಿಗೆ ಚಿಕಿತ್ಸೆ ಕೊಡುವ ಕೆಲಸ ಇವರೇ ಮಾಡುತ್ತಾರೆ.

---

ಪ್ರಜಾವಾಣಿ ತಂಡ: ಶಶಿಕಾಂತ ಎಸ್. ಶೆಂಬೆಳ್ಳಿ, ಎ.ಎಂ. ಸೋಮಶೇಖರಯ್ಯ, ಸಿ. ಶಿವಾನಂದ, ಕೆ. ಸೋಮಶೇಖರ್‌, ಎಸ್‌.ಎಂ. ಗುರುಪ್ರಸಾದ್‌, ವಿಶ್ವನಾಥ ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT