ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜುಮನ್‌ ಸಮಿತಿ ಆಂತರಿಕ ಕಲಹ ಬೀದಿಗೆ

ಹಾಲಿ ಅಧ್ಯಕ್ಷ ರಫಾಯಿ, ಮಾಜಿ ಅಧ್ಯಕ್ಷ ನಿಯಾಜಿ ಬಣಗಳ ನಡುವೆ ಮುಸುಕಿನ ಗುದ್ದಾಟ
Last Updated 7 ಡಿಸೆಂಬರ್ 2018, 12:46 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಅಂಜುಮನ್‌ ಖಿದ್ಮತ್‌–ಎ–ಇಸ್ಲಾಂ ಸಮಿತಿಯ ಆಂತರಿಕ ಕಲಹ ಬೀದಿಗೆ ಬಂದಿದೆ.

ಸಮಿತಿಯ ಹಾಲಿ ಅಧ್ಯಕ್ಷ ಅಬ್ದುಲ್‌ ಖಾದರ್‌ ರಫಾಯಿ ಹಾಗೂ ಈ ಹಿಂದಿನ ಅಧ್ಯಕ್ಷ, ಹಾಲಿ ಸದಸ್ಯ ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರ ಬಣಗಳ ನಡುವೆ ಕಳೆದ ಕೆಲವು ತಿಂಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಿದ್ದಿದೆ.

ಬಳ್ಳಾರಿ ರಸ್ತೆಯಲ್ಲಿನ ಮೀರ್‌ ಆಲಂ ದರ್ಗಾದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ಮುಖಂಡರು ಆರೋಪ–ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಬೀದಿಯಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಹಲ್ಲೆ ಮಾಡಿದ್ದಾರೆ. ಎರಡು ಕಡೆಯವರ ವಿರುದ್ಧ ಪಟ್ಟಣ ಹಾಗೂ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದ ಕಟಕಟೆ ಏರಿದೆ. ಹೀಗಿದ್ದರೂ ಆಯಾ ಬಣಕ್ಕೆ ಸೇರಿದವರು ಪರಸ್ಪರ ಆರೋಪಗಳ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

‘ನಿಯಾಜಿ ಈ ಹಿಂದೆ ಅಧ್ಯಕ್ಷರಾಗಿದ್ದಾಗ ಸಮಿತಿಯ ಹೆಸರನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದರು. ಅದರ ವಿರುದ್ಧ ನಾವು ಧ್ವನಿ ಎತ್ತಿದ್ದೆವು. ಅಷ್ಟೇ ಅಲ್ಲ, ನಾಲ್ಕು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ಸಮಿತಿಯ ಸದಸ್ಯರು ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದರು. ಇದನ್ನು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಈ ಕಾರಣಕ್ಕಾಗಿ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಅಬ್ದುಲ್‌ ಖಾದರ್‌ ರಫಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ರೀತಿ ಸುಳ್ಳು ಆರೋಪ ಮಾಡುವುದರಿಂದ ಸಮಿತಿ ಹಾಗೂ ಸಮಾಜದ ಮರ್ಯಾದೆ ಹೋಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ನಿಯಾಜಿಗೆ ಇಲ್ಲ. ಇಂತಹವರು ಸಮಿತಿಯಲ್ಲಿ ಇರಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಶೀಘ್ರದಲ್ಲೇ ಸಭೆ ಕರೆದು ಚರ್ಚಿಸಲಾಗುವುದು. ಅಷ್ಟೇ ಅಲ್ಲ, ಅವರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ಎನ್ನುವುದರ ಬಗ್ಗೆಯೂ ತೀರ್ಮಾನಕ್ಕೆ ಬರಲಾಗುವುದು’ ಎಂದು ಹೇಳಿದರು.

‘ತಹಶೀಲ್ದಾರ್‌, ಮುಜರಾಯಿ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಉರುಸ್‌ ಸಂದರ್ಭದಲ್ಲಿ ಭಕ್ತರಿಂದ ಸಂಗ್ರಹವಾದ ದೇಣಿಗೆಯನ್ನು ಏಳು ಡಬ್ಬಿಗಳಲ್ಲಿ ಸೀಲ್‌ ಮಾಡಲಾಗಿದೆ. ತಡರಾತ್ರಿ ಉರುಸ್‌ ಮುಗಿದ ನಂತರ ಕೆಲವರು ದರ್ಗಾದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಸೆರೆಯಾದ ಆ ವಿಡಿಯೊವನ್ನು ನಿಯಾಜಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್‌ ಮಾಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಈ ರೀತಿ ಮಾಡುವುದು ತಪ್ಪಾಗುತ್ತದೆ’ ಎಂದರು.

ಮೊಹಮ್ಮದ್‌ ಇಮಾಮ್‌ ನಿಯಾಜಿ ಪ್ರತಿಕ್ರಿಯಿಸಿ, ‘ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಸಮಿತಿಯ ಟ್ರಸ್ಟಿ ಅನ್ಸರ್‌ ಎಂಬುವರು ಠಾಣೆಗೆ ದೂರು ಕೊಟ್ಟಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT