ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಭವಿಷ್ಯ ನಿಧಿ ವಂತಿಗೆ ವಂಚನೆ

ಗುತ್ತಿಗೆದಾರ ಸಂಬಂಧಿಗಳ ಖಾತೆಗೆ ಹಣ ಜಮಾ: ಆರೋಪ
Last Updated 29 ಮಾರ್ಚ್ 2018, 7:11 IST
ಅಕ್ಷರ ಗಾತ್ರ

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್‌)ದ ವಾಹನಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಚಾಲಕರ ಹೆಸರಿಗೆ ಜಮಾ ಆಗಬೇಕಿದ್ದ ಭವಿಷ್ಯನಿಧಿ (ಪಿಎಫ್‌) ವಂತಿಗೆಯನ್ನು ಗುತ್ತಿಗೆದಾರರು ಜಮಾಗೊಳಿಸದೆ ವಂಚಿಸುತ್ತಿದ್ದಾರೆ.

ಚಾಲಕರ ಹೆಸರಿನ ಭವಿಷ್ಯನಿಧಿ ವಂತಿಗೆಯನ್ನು ಗುತ್ತಿಗೆದಾರರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಜಮಾ ಮಾಡಿಕೊಳ್ಳುತ್ತಿದ್ದಾರೆ ಎಂದು ಹೊರಗುತ್ತಿಗೆ ನೌಕರರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಆರ್‌ಟಿಪಿಎಸ್‌ ಅಧಿಕಾರಿಗಳ ಗಮನಕ್ಕೆ ತಂದರೂ ನ್ಯಾಯ ದೊರಕಿಸುವ ಕೆಲಸವಾಗುತ್ತಿಲ್ಲ ಎನ್ನುವ ಸಂಕಷ್ಟದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ವಾಹನ ಚಾಲಕರು ಮುಳುಗಿದ್ದಾರೆ.

‘ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ನೀಡಿದೆ. ಕನಿಷ್ಠ ವೇತನ ನಿಯಮಾನುಸಾರ ಇಪಿಎಫ್‌ ವಂತಿಗೆ ಕಡಿತ ಮಾಡಿ ಪ್ರತಿಯೊಬ್ಬ ಚಾಲಕನಿಗೆ ದಿನಕ್ಕೆ ಕನಿಷ್ಠ ₹250 ರಂತೆ ತಿಂಗಳಿಗೆ ₹6,500 ಸಂಬಳ ನೀಡಬೇಕು. ಹಿರಿಯ ಚಾಲಕರಿಗೆ ಗರಿಷ್ಠ ಸಂಬಳ ನೀಡಬೇಕು. ಶೇ 12 ರಷ್ಟು ಭವಿಷ್ಯ ನಿಧಿ ವಂತಿಗೆಯನ್ನು ನೀಡಬೇಕು. ಆದರೆ ಇಲ್ಲಿಯವರೆಗೂ ಚಾಲಕರ ಹೆಸರಿಗೆ ಭವಿಷ್ಯ ನಿಧಿ ಜಮಾಗೊಳಿಸಿಲ್ಲ’ ಎಂದು ಆರ್‌ಟಿಪಿಎಸ್‌ ಗುತ್ತಿಗೆ ವಾಹನ ಚಾಲಕ ಡಿ.ಕೆ.ಸುರೇಶ ಅಳಲು ತೋಡಿಕೊಂಡರು.

‘ಚಾಲಕರ ವೇತನದಿಂದ ಕಡಿತ ಮಾಡುತ್ತಿರುವ ಇ.ಪಿ.ಎಫ್‌. ವಂತಿಗೆಯನ್ನು ಗುತ್ತೆದಾರರ ಸಂಬಂಧಿಕರ ಹೆಸರಿನಲ್ಲಿ ಜಮಾ ಮಾಡುತ್ತಿದ್ದಾರೆ. ಕಾರ್ಮಿಕರ ಭವಿಷ್ಯ ನಿಧಿ ವಂತಿಗೆಯನ್ನು ಚಾಲಕರ ವೈಯಕ್ತಿಕ ಖಾತೆಗೆ ಜಮಾ ಮಾಡಿದ ದಾಖಲೆ ನೀಡುತ್ತಿಲ್ಲ. ಚಾಲಕರ ಖಾತೆಗೆ ಜಮಾ ಮಾಡಿರುವ ಬಗ್ಗೆ ದಾಖಲೆ ಒದಗಿಸಬೇಕು’ ಎಂದು ಹೇಳಿದರು.

ವಾಹನಗಳ ದುರ್ಬಳಕೆ: ಆರ್‌ಟಿಪಿಎಸ್‌ನಲ್ಲಿ ಬಳಕೆಯಾಗುವ ವಾಹನಗಳನ್ನು ಪ್ರತಿವರ್ಷ ಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತದೆ. ವಿವಿಧ ವಿಭಾಗಗಳಿಗೆ ವಾಹನಗಳನ್ನು ನಿಯೋಜನೆ ಮಾಡಲಾಗಿದ್ದು, ಕೆಲಸ ಮುಗಿದ ಕೂಡಲೇ ಸ್ಥಾವರ ಕಚೇರಿ ವ್ಯಾಪ್ತಿಯಲ್ಲಿ ಅವುಗಳನ್ನು ನಿಲ್ಲಿಸಬೇಕು. ಆದರೆ, ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ಪೂರೈಸಿರುವ ಗುತ್ತಿಗೆದಾರರು, ಅಧಿಕಾರಿಗಳು ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಆರ್‌ಟಿಪಿಎಸ್‌ ಹಿರಿಯ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಚಾಲಕರಾದ ಚಂದ್ರು, ಬಸವರಾಜ, ಸಿದ್ಧಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಟಿಪಿಎಸ್‌ಗೆ ಸಂಬಂಧಿಸಿದ ಕೆಲಸಗಳಲ್ಲದೆ ಮದುವೆ ಸಮಾರಂಭಗಳಿಗೆ ಹೋಗಲು, ಮಾರುಕಟ್ಟೆಗೆ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಕೆಲವರು ಮದ್ಯ ಸೇವಿಸಲು ಬಾರ್‌ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಧಿಕಾರಿಗಳ ಉಪಟಳದಿಂದ ಗುತ್ತಿಗೆ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ.

ಕೆಲ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಮಾಡಲಾಗಿದೆ. ಆದರೆ, ವೈರ್‌ಗಳನ್ನು ಕಿತ್ತುಹಾಕಿ ಜಿಪಿಎಸ್ ಸ್ಥಗಿತಗೊಳಿಸಿ ಗುತ್ತೆದಾರರು, ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗುತ್ತಿಗೆ ನೌಕರರು ಆರೋಪಿಸಿದರು.

**

ಬಾಡಿಗೆ ಆಧಾರದಲ್ಲಿ ಗುತ್ತಿಗೆ ಪಡೆದಿರುವ ವಾಹನಗಳನ್ನು ಅಧಿಕಾರಿಗಳು, ಗುತ್ತಿಗೆದಾರರು ದುರ್ಬಳಕೆ ಮಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ.

– ಚಂದ್ರು, ಗುತ್ತಿಗೆ ವಾಹನ ಚಾಲಕ, ಆರ್‌ಟಿಪಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT