‘ಜೈವಿಕ ಬುದ್ಧಿಜೀವಿ’ಯ ಕಣ್ಮರೆ

7
ಅಭಿವೃದ್ಧಿಯ ಕನಸಲ್ಲೇ ಕಣ್ಮುಚ್ಚಿದ ಪ್ರೊ.ಬಿ.ಶೇಷಾದ್ರಿ

‘ಜೈವಿಕ ಬುದ್ಧಿಜೀವಿ’ಯ ಕಣ್ಮರೆ

Published:
Updated:
Deccan Herald

ಬಳ್ಳಾರಿ: ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ವರದಿ ಆಧರಿಸಿದ್ದ ಬಹುಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ರಮಗಳು ನಿಜವಾಗಿಯೂ ಜನರನ್ನು ಮುಟ್ಟಿವೆಯೇ ಎಂದು ಪರಿಶೀಲಿಸುವ ಕೆಲಸವನ್ನು ಆರಂಭಿಸಬೇಕಿತ್ತು. ಅದರ ಬಗ್ಗೆ ಚರ್ಚಿಸೋಣ ಬಾ ಎಂದು ಪ್ರೊ.ಬಿ.ಶೇಷಾದ್ರಿ ತಮ್ಮ ತಂಡದ ಜೆ.ಕೃಷ್ಣ ಅವರಿಗೆ ಗುರುವಾರ ಸಂಜೆ 7ರ ವೇಳೆಗೆ ಕರೆ ಮಾಡಿದ್ದರು.

ಅದು ಅವರ ಕೊನೇ ಕರೆ. ತೀವ್ರ ಅನಾರೋಗ್ಯದ ನಡುವಿನ ಆ ಕರೆಯೂ ಕೂಡ ಮಾನವ ಸಮುದಾಯದ ಅಭಿವೃದ್ಧಿಯ ಕುರಿತೇ ಆಗಿದ್ದು ಆಕಸ್ಮಿಕವೇನಲ್ಲ. ಮೂರು ದಶಕಗಳ ಕಾಲ ಮೂಳೆ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸುತ್ತಲೇ, ಅವರು ಅಭಿವೃದ್ಧಿ ಚಿಂತನೆಯಲ್ಲೇ ಬದುಕಿದ್ದರು. ಶುಕ್ರವಾರ ಅವರು ತಮ್ಮ ಮನೆಯಲ್ಲಿ ಮೌನವಾಗಿ ಮಲಗಿದ್ದರು.

ಕೆಲವು ತಿಂಗಳ ಹಿಂದೆ ಅವರ ಹಳೇ ವಿದ್ಯಾರ್ಥಿಗಳೆಲ್ಲರೂ ಸೇರಿ ಅಭಿನಂದಿಸಿ ‘ಜೈವಿಕ ಬುದ್ಧಿ ಜೀವಿ’ ಎಂಬ ಹೆಸರಿನ ಕೃತಿಯನ್ನು ಬಿಡುಗಡೆ ಮಾಡಿದ್ದು, ಅವರ ಒಟ್ಟಾರೆ ವ್ಯಕ್ತಿತ್ವಕ್ಕೆ ಅನ್ವರ್ಥಕವಾಗಿ ಕಂಡಿತ್ತು.

ಅರ್ಥಶಾಸ್ತ್ರಜ್ಞ ಶೇಷಾದ್ರಿ ಬದುಕಿದ್ದೇ ಹಾಗೆ. ಅವರ ಪ್ರತಿ ಉಸಿರಿನಲ್ಲೂ ಹಿಂದುಳಿದವರ ಅಭಿವೃದ್ಧಿಯೇ ಇರುತ್ತಿತ್ತು. ಅಸಮಾನತೆಯ ವಿರುದ್ಧ ಅವರದ್ದು ಯಾವತ್ತಿಗೂ ಗಟ್ಟಿ ದನಿ. ಒಂಟಿದನಿಯಾದರೂ ಹಿಂಜರಿಯದ ಹೆಜ್ಜೆ.

ಇಂಗ್ಲಿಷ್‌ ಎಂ.ಎ ಜೊತೆಗೆ ಅರ್ಥಶಾಸ್ತ್ರದ ಎಂ.ಎ. ಪದವಿ ಪಡೆದಿದ್ದ ಅವರು,ಅರ್ಥಶಾಸ್ತ್ರದ ಅಧ್ಯಾಪಕರಾಗಿ ಪಠ್ಯವನ್ನು ತರಗತಿಯಾಚೆಗಿನ ವಾಸ್ತವದ ಕಣ್ಣಲ್ಲಿ ನೋಡುವುದನ್ನು ಕಲಿಸಿ ದರು ಎಂಬುದು ವೀರಶೈವ ಕಾಲೇಜಿನ ವಿದ್ಯಾರ್ಥಿಗಳ ಕೃತಜ್ಞತೆಯ ನುಡಿ.

1996ರಲ್ಲಿ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಸ್ಥಾಪಕ ಪ್ರಾಧ್ಯಾಪಕರಾದ ಬಳಿಕ ಅವರ ಅರ್ಥನೋಟ ಸಮುದಾಯದ ನಡುವೆಯೇ ಹೊಸ ಟಿಸಿಲುಗಳನ್ನು ಕಂಡಿತು.

2000ದಲ್ಲಿ ರಚನೆಯಾಗಿದ್ದ ಪ್ರಾದೇಶಿಕ ಅಸಮತೋಲನ ಅಧ್ಯಯನ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿದ್ದ ಶೇಷಾದ್ರಿ, ಸಮಿತಿಯ ನೇತೃತ್ವ ವಹಿಸಿದ್ದ ಡಿ.ಎಂ.ನಂಜುಂಡಪ್ಪ ಅವರೊಂದಿಗೆ ದರ್ಶನ ದೃಷ್ಟಿಯ ಅಧ್ಯಯನ ನಡೆಸಿದ್ದು ಚರಿತ್ರೆಯ ಮಹತ್ವದ ದಾಖಲೆ. 2002ರಲ್ಲಿ ಸಮಿತಿ ವರದಿ ಸಲ್ಲಿಸಿದ ಬಳಿಕವೇ, ರಾಜ್ಯದ ಹಿಂದುಳಿದ ತಾಲ್ಲೂಕುಗಳಿಗೆ ಶುಕ್ರದೆಸೆ ಶುರುವಾಯಿತು.

ಅಭಿವೃದ್ಧಿಯಲ್ಲಿ ಹಿಂದುಳಿದ ಮತ್ತು ಮುಂದುವರಿದ ತಾಲ್ಲೂಕುಗಳ ತೌಲನಿಕ ಅಭಿವೃದ್ಧಿಗಾಗಿಯೇ ರೂಪಿಸಿದ ಎಂಟು ವರ್ಷಗಳ ಅವಧಿಯ ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ), ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಮೀಸಲಾತಿ ಕಲ್ಪಿಸಲು ನಡೆದ ಸಂವಿಧಾನದ 371 ಜೆ ತಿದ್ದುಪಡಿಯಲ್ಲೂ ಶೇಷಾದ್ರಿ ಕೊಡುಗೆ ಅನನ್ಯ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ತಜ್ಞ
ಸದಸ್ಯರಾಗಿ ಶೇಷಾದ್ರಿ ಕರ್ತವ್ಯ ನಿರ್ವಹಿಸಿದ್ದರು.

ಹೋರಾಟಗಾರ: ‘ಅರ್ಥಶಾಸ್ತ್ರಜ್ಞ’ರಾಗಿ ಖ್ಯಾತರಾಗುವ ಮುನ್ನ ಶೇಷಾದ್ರಿ ಜನಪರ ಹೋರಾಟಗಳ ಮಂಚೂಣಿ
ಯಲ್ಲಿದ್ದುದನ್ನು ಜಿಲ್ಲೆಯ ಜನ ಮರೆತಿಲ್ಲ. ಗೋಕಾಕ ಸಮಿತಿಯ ವರದಿ ಜಾರಿಗಾಗಿ ನಡೆದ ಹೋರಾಟದಲ್ಲಿ ಅವರು ಸಂಚಾಲಕರಾಗಿದ್ದರು. ಮೂಲಸೌಕರ್ಯಗಳಿಗಾಗಿ ನಡೆದ ಹೋರಾಟಗಳಲ್ಲಿ ಅವರದ್ದೇ ಮುಂದಾಳತ್ವ. ಈಗ ಅವರು ತಮ್ಮಂತೆಯೇ ಚಿಂತಿಸುವ ನೂರಾರು ವಿದ್ಯಾರ್ಥಿಗಳನ್ನು ಮುಂದಾಳುಗಳನ್ನಾಗಿ ನಿಲ್ಲಿಸಿ ಹೋಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !