ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವಕ್ಕೆ ಆಗ್ರಹಿಸಿ 13ರಂದು ಹೊಸಪೇಟೆಯಿಂದ ಪಾದಯಾತ್ರೆ

ಜನಪ್ರತಿನಿಧಿಗಳ ಮನೆ ಎದುರು ಧರಣಿಗೆ ತಯಾರಿ; ಜ. 30ರೊಳಗೆ ಉತ್ಸವ ಆಚರಣೆಗೆ ಒತ್ತಾಯ
Last Updated 11 ಜನವರಿ 2019, 9:34 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿ ಉತ್ಸವ ಆಚರಿಸುವಂತೆ ಆಗ್ರಹಿಸಿ ಇದೇ 13ರಂದು ಬೆಳಿಗ್ಗೆ 10.30ಕ್ಕೆ ನಗರದ ರೋಟರಿ ವೃತ್ತದಿಂದ ಹಂಪಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಕಲಾವಿದ ಕೆ. ಜಗದೀಶ್‌ ತಿಳಿಸಿದರು.

ಶುಕ್ರವಾರ ಇಲ್ಲಿ ಜಿಲ್ಲೆಯ ವಿವಿಧ ಭಾಗದ ಕಲಾವಿದರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಂದು ನಡೆಯಲಿರುವ ಪಾದಯಾತ್ರೆಯಲ್ಲಿ ಜಿಲ್ಲೆಯ ಕಲಾವಿದರು, ಕಲಾ ಪೋಷಕರು, ಸಾರ್ವಜನಿಕರು ಭಾಗವಹಿಸುವರು. ನಂತರ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಎದುರು ಭಜನೆ, ಏಕಪಾತ್ರಭಿನಯ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರತಿಭಟನೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಪ್ರತಿ ವರ್ಷ ನ. 3ರಿಂದ 5ರ ವರೆಗೆ ಹಂಪಿ ಉತ್ಸವ ಆಚರಿಸಬೇಕೆಂಬುದು ಎಂ.ಪಿ.‍ಪ್ರಕಾಶ್‌ ಅವರ ಕನಸಾಗಿತ್ತು. ಆರಂಭದಲ್ಲಿ ಅದಕ್ಕೆ ತಕ್ಕಂತೆ ಉತ್ಸವ ನಡೆಯುತ್ತ ಬಂತು. ಆದರೆ, ನಂತರದ ದಿನಗಳಲ್ಲಿ ಅದು ಹಳಿ ತಪ್ಪಿದೆ. ಒಟ್ಟು ಐದು ಸಲ ಉತ್ಸವ ರದ್ದಾಗಿದೆ. ಜತೆಗೆ ನಿಗದಿತ ದಿನಾಂಕ ಕೂಡ ನಡೆಯುತ್ತಿಲ್ಲ. ಹಂಪಿ ಉತ್ಸವ ಉತ್ತರ ಕರ್ನಾಟಕದ ಸಾಂಸ್ಕೃತಿಕ ಅಭಿವ್ಯಕ್ತಿ. ಆಡಳಿತಗಾರರಿಗೆ ಅದರ ಮಹತ್ವ ಏಕೆ ಗೊತ್ತಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರು ಕಲಾವಿದರೊಂದಿಗೆ ಸಭೆ ನಡೆಸಿ, ಉತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಲೋಕಸಭೆ ಉಪಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಂತರ ಅಧಿಕಾರಿಗಳು ಅದನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ. ಈ ಭಾಗದ ಕಲಾವಿದರು ಆಗ್ರಹಿಸಿದರೂ ಬೆಲೆ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಮೈಸೂರಿನಲ್ಲಿ ಸಂಭ್ರಮದಿಂದ ದಸರಾ ಉತ್ಸವ ನಡೆಯುತ್ತದೆ. ಅತಿವೃಷ್ಟಿ–ಅನಾವೃಷ್ಟಿ ಸೇರಿದಂತೆ ಯಾವುದೂ ಅದಕ್ಕೆ ಅಡ್ಡಿಯಾಗುವುದಿಲ್ಲ. ಆದರೆ, ಹಂಪಿ ಉತ್ಸವಕ್ಕೆ ಬರ ಎದುರಾಗುತ್ತದೆ. ಇದು ಸರಿಯಾದ ಕ್ರಮವಲ್ಲ. ಇದು ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಹೀಗಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಎಂ. ಬಸವರಾಜ ಸ್ವಾಮಿ ಮಾತನಾಡಿ, ‘ಹಂಪಿ ಉತ್ಸವಕ್ಕೆ ಹೋರಾಟ ಮಾಡುವಂತಹ ಸನ್ನಿವೇಶ ಎದುರಾಗಿದೆ. ಜ. 30ರ ಒಳಗೆ ಉತ್ಸವ ಆಚರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರಂಗಭೂಮಿ ಕಲಾವಿದೆ ಕೆ. ನಾಗರತ್ನಮ್ಮ ಮಾತನಾಡಿ, ‘ಸರ್ಕಾರದ ಬಳಿ ಹಣವಿಲ್ಲದಿದ್ದರೆ ಸ್ಥಳೀಯ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಸಂಘಟಿಸಲಿ. ಅಂತರರಾಷ್ಟ್ರೀಯ ಕಲಾವಿದರನ್ನು ಕರೆಸುವುದು ಬೇಡ. ಸ್ಥಳೀಯ ಕಲಾವಿದರನ್ನು ಭಿಕ್ಷುಕರಂತೆ ಕಾಣುವುದು ಸರಿಯಲ್ಲ. ಬರ ಇದೆಯೆಂದು ಯಾರಾದರೂ ಉಪವಾಸ ಇರುತ್ತಿದ್ದಾರೆಯೇ? ’ ಎಂದು ಪ್ರಶ್ನಿಸಿದರು.

ಜಾನಪದ ಅಕಾಡೆಮಿ ಸದಸ್ಯೆ ಮಂಜಮ್ಮ ಜೋಗತಿ, ಕಲಾವಿದರಾದ ಎಚ್‌.ಕೆ. ಗೌರಿಶಂಕರ್‌, ಯುವರಾಜಗೌಡ್ರು, ಎಚ್‌.ಎಂ. ಚಂದ್ರಶೇಖರ್‌, ದಮ್ಮೂರ ರವಿಗೌಡ, ಚಂದ್ರಶೇಖರ್‌ ಶಾಸ್ತ್ರಿ, ಕೆ.ಎಸ್‌. ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT