ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊಳ್ಳಿನ ಮನೆಯ ಡೊಳ್ಳು ಬಾರಿಸುವವರು

Last Updated 13 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ ಜಿಲ್ಲೆ): ಕುರಿ ಚರ್ಮ ಹದ ಮಾಡಿ ಡೊಳ್ಳು ತಯಾರಿಸುವುದು, ಉಣ್ಣೆಯಿಂದ ಕಂಬಳಿ, ದೃಷ್ಟಿ ಧಾರ ಇತ್ಯಾದಿ ತಯಾರಿಸುವುದರ ಮೂಲಕ ಅದರಲ್ಲೇ ಕುಟುಂಬವೊಂದು ಜೀವನಕ್ಕೆ ದಾರಿ ಕಂಡುಕೊಂಡಿದ್ದರ ಯಶೋಗಾಥೆ ಇದು.

ತಾಲ್ಲೂಕಿನ ಹಳೆ ಮಲಪನಗುಡಿಯ ಕಾರಮಂಚಪ್ಪ ಹಾಗೂ ಅವರ ಕುಟುಂಬದ ಜೀವನ ನಿರ್ವಹಣೆಗೆ ಡೊಳ್ಳೇ ಆಧಾರವಾಗಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದ ಡೊಳ್ಳು ಬಾರಿಸುವ ಕಲೆಯೂ ಅದರೊಂದಿಗೆ ಜೀವಂತವಾಗಿ ಇಟ್ಟುಕೊಂಡು ಹೊಸ ಪೀಳಿಗೆಗೂ ಅದನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಕಾರಮಂಚಪ್ಪ ಅವರ ಪತ್ನಿ ಸುಭದ್ರಮ್ಮ ಅವರು ಎಲೆಮರೆಕಾಯಿಯಂತೆ ಮನೆಯ ನಾಲ್ಕು ಗೋಡೆಗಳಲ್ಲಿ ಕೆಲಸ ಮಾಡುವವರು. ಕಾರಮಂಚಪ್ಪ, ಅವರ ಇಬ್ಬರು ಮಕ್ಕಳಾದ ಪ್ರಕಾಶ, ಆಂಜನೇಯ, ಮೊಮ್ಮಕ್ಕಳಾದ ಅಭಿಷೇಕ್‌, ಜಯಲಕ್ಷ್ಮಿ, ಭೂಮಿಕಾ, ಉಲ್ತಿಗೌಡ ಡೊಳ್ಳು ಬಾರಿಸುವ ಕಲೆಯ ಮೂಲಕ ಹೊರಜಗತ್ತಿಗೆ ಗುರುತಿಸಿಕೊಂಡಿರುವುದು ವಿಶೇಷ.

ಕುರಿ ಉಣ್ಣೆಯಿಂದ ದೃಷ್ಟಿ ಧಾರ, ಕೈ ಕಂಕಣ, ಬಾಗಿಲು ಪರದೆ, ಗದಗಿ ಕಂಬಳಿ, ದೊಡ್ಡ ಕಂಬಳಿ, ಬಿಳಿ ಕಂಬಳಿ, ಶಾಲು, ದೃಷ್ಟಿಗೊಂಬೆ, ದೇವರ ಜಡೆ, ಉಣ್ಣೆ ಹಾರ, ಟೋಪಿ, ಡೊಳ್ಳಿನ ಚರ್ಮ ಸೇರಿದಂತೆ ಇತರೆ ವಸ್ತುಗಳನ್ನು ಮನೆಯಲ್ಲಿಯೇ ಮಾಡುತ್ತಾರೆ. ಇವರ ಮನೆ ನೋಡಿದರೆ ವಸ್ತು ಸಂಗ್ರಹಾಲಯದಂತೆ ಭಾಸವಾಗುತ್ತದೆ. ಕುರಿ ಚರ್ಮ, ಉಣ್ಣೆಯಿಂದ ತಯಾರಿಸಿದ ಹಲವು ವಸ್ತುಗಳನ್ನು ಅಲ್ಲಿ ನೋಡಬಹುದು. ಹಂಪಿಗೆ ಬರುವ ದೇಶ–ವಿದೇಶದ ಪ್ರವಾಸಿಗರ ಪೈಕಿ ಒಂದಿಷ್ಟು ಜನ ಅವರ ಮನೆಗೆ ಭೇಟಿ ನೀಡಿ, ಖರೀದಿಸಿಕೊಂಡು ಹೋಗುವುದುಂಟು. ಒಂದರ್ಥದಲ್ಲಿ ಅವರ ಮನೆ ವಸ್ತು ಸಂಗ್ರಹಾಲಯವೂ ಹೌದು, ಮಿನಿ ಮಾರುಕಟ್ಟೆಯೂ ಹೌದು.

ಕಾರಮಂಚಪ್ಪ ಅವರ ಪ್ರಭಾವಕ್ಕೆ ಒಳಗಾಗಿ ಅವರ ಇಬ್ಬರು ಮಕ್ಕಳು ಡೊಳ್ಳು ಬಾರಿಸುವುದನ್ನು ಕರಗತ ಮಾಡಿಕೊಂಡರೆ, ಮಕ್ಕಳನ್ನು ನೋಡಿ ಮೊಮ್ಮಕ್ಕಳು ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಅದರಲ್ಲಿಯೇ ಮುಂದುವರೆಯುವ ಸೂಚನೆ ಕೊಟ್ಟಿದ್ದಾರೆ.

ಉಲ್ತಿಗೌಡ , ಅಭಿಷೇಕ್‌ , ಜಯಲಕ್ಷ್ಮಿ ಹಾಗೂ ಭೂಮಿಕಾ ಎಲ್ಲರೂ ಹದಿನೈದು ವರ್ಷ ವಯಸ್ಸಿನೊಳಗಿನವರು. ಆದರೆ, ಡೊಳ್ಳು ಬಾರಿಸುವ ಕಲೆ ಕರಗತ ಮಾಡಿಕೊಂಡದ್ದು ಐದರ ಹರೆಯದಲ್ಲೇ ಎನ್ನುವುದು ವಿಶೇಷ. ಈ ಕಲೆಯಲ್ಲೇ ಮುಂದುವರೆಯುವ ಇಂಗಿತ ಇವೆರಲ್ಲರದೂ.

ಪೂರ್ವಜರ ಕಲೆಯನ್ನು ಕುಟುಂಬ ನಿರ್ವಹಣೆಗೆ ಕಾರಮಂಚಪ್ಪ ಮುಂದುವರೆಸಿಕೊಂಡು ಬಂದರು. ಅದಕ್ಕೆ ಆರಂಭದಿಂದ ಜತೆಯಾದದ್ದು ಸುಭದ್ರಮ್ಮ. ಈಗ ಮಕ್ಕಳು, ಮರಿಮೊಮ್ಮಕ್ಕಳು ಅದರಲ್ಲಿ ಪಳಗಿರುವುದರಿಂದ ಅವರ ಮೇಲಿನ ಜವಾಬ್ದಾರಿ ತಗ್ಗಿದೆ. ಈ ಹಿಂದಿಗೆ ಹೋಲಿಸಿದರೆ ಆರ್ಥಿಕ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡಿದೆ.

ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಡೊಳ್ಳು ಬಾರಿಸಿ ಎಲ್ಲರ ಮೆಚ್ಚುಗೆ ಗಳಿಸಿರುವ ಈ ಕುಟುಂಬದ ಪ್ರತಿಯೊಬ್ಬರೂ ಹಲವು ಗೌರವ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

***

ಡೊಳ್ಳು ತಯಾರಿಸುವುದಾಗಲಿ, ಅದನ್ನು ಬಾರಿಸುವುದರ ಕುರಿತಾಗಲಿ ಯಾರಿಗೂ ಹೇಳಿಕೊಟ್ಟಿಲ್ಲ. ಎಲ್ಲರೂ ನೋಡ ನೋಡುತ್ತಲೇ ಕಲಿತಿದ್ದಾರೆ.
–ಕಾರಮಂಚಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT