ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿಯಿಂದ ಆಶಾ ಕಾರ್ಯಕರ್ತೆ ಕಣಕ್ಕೆ

ಇಬ್ಬರು ರೈತರು ಸ್ಪರ್ಧೆ
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಯು ಈ ಸಲ ವಿವಿಧ ವಲಯದವರ ಸ್ಪರ್ಧೆಯಿಂದಾಗಿ ಗಮನ ಸೆಳೆಯುತ್ತಿದೆ.

ಆಶಾ ಕಾರ್ಯಕರ್ತೆ, ಹವ್ಯಾಸಿ ಛಾಯಾಗ್ರಾಹಕ ಹಾಗೂ ಇಬ್ಬರು ರೈತರ ಸ್ಪರ್ಧೆಯಿಂದ ಚುನಾವಣಾ ಕಣ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಪಟ್ಟಣದ ಒಂದನೇ ವಾರ್ಡ್‌ನಿಂದ ಬಿಜೆಪಿಯಿಂದ ಹಂಪಿ ಪುಷ್ಪಾವತಿ ಎಂಬುವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರು ಪರಿಶಿಷ್ಟ ಜಾತಿಯ ತಮಿಳು ಭಾಷಿಕರಾಗಿದ್ದಾರೆ. ಆಶಾ ಕಾರ್ಯಕರ್ತೆ ಆಗಿ ಕೆಲಸ ಮಾಡಿರುವುದರಿಂದ ಜನರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಎಲ್ಲರಿಗೂ ಚಿರಪರಿಚಿತರಾಗಿರುವುದು ಅವರಿಗೆ ಪ್ಲಸ್‌ ಪಾಯಿಂಟ್‌. ಸಮಾಜ ಸೇವೆ ಮಾಡಬೇಕೆಂಬ ಬಯಕೆಯಿಂದ ಆಶಾ ಕಾರ್ಯಕರ್ತೆ ಹುದ್ದೆ ತೊರೆದು ರಾಜಕೀಯ ಪ್ರವೇಶಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಒಂದನೇ ವಾರ್ಡ್‌ನಿಂದ ಒಟ್ಟು ಆರು ಜನ ಕಣದಲ್ಲಿದ್ದಾರೆ. ಪ್ರತಿಸ್ಪರ್ಧಿಗಳಾದ ಐದು ಜನ ಪುರುಷ ಅಭ್ಯರ್ಥಿಗಳನ್ನು ಮೀರಿಸಿ ಗೆಲ್ಲುವ ಸವಾಲು ಪುಷ್ಪಾವತಿ ಎದುರಿಗಿದೆ.

ಬಿಜೆಪಿ ಪಕ್ಷದಿಂದಲೇ ಹವ್ಯಾಸಿ ಛಾಯಾಗ್ರಾಹಕ ಎಸ್‌.ಎಸ್‌. ರಾಚಯ್ಯನವರು ಹತ್ತನೇ ವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ. ಛಾಯಾಗ್ರಹಣದ ಮೂಲಕ ಹಂಪಿ ಸ್ಮಾರಕಗಳು, ಸುತ್ತಮುತ್ತಲಿನ ಜೀವಜಾಲವನ್ನು ನಾಡಿಗೆ ಪರಿಚಯಿಸಿದ ಕೀರ್ತಿ ರಾಚಯ್ಯನವರದು. ಅದರಿಂದಲೇ ಜನರ ಮಧ್ಯೆ ಗುರುತಿಸಿಕೊಂಡಿದ್ದಾರೆ. ಅವರು ಲಿಂಗಾಯತ ಸಮಾಜವನ್ನು ಪ್ರತಿನಿಧಿಸುತ್ತಾರೆ. ಅವರ ತಂದೆ ಸೈನ್ಯದಲ್ಲಿ ಇದ್ದರು.

ಅಂದಹಾಗೆ, ಚುನಾವಣೆಯಲ್ಲಿ ರಾಚಯ್ಯನವರ ಹಾದಿ ಸುಗಮವಲ್ಲ. ಪಟ್ಟಣ ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷ ಡಾ. ಬಿ.ಆರ್‌. ಮಳಲಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಅವರು ಕೂಡ ಲಿಂಗಾಯತ ಸಮಾಜವನ್ನೇ ಪ್ರತಿನಿಧಿಸುತ್ತಾರೆ. ರಾಚಯ್ಯನವರಿಗೆ ಇದು ಮೊದಲ ಚುನಾವಣೆಯಾದರೆ, ಮಳಲಿ ಅವರಿಗೆ ಇದು ಎರಡನೇ ಚುನಾವಣೆ. ಹತ್ತನೇ ವಾರ್ಡ್‌ನಿಂದ ಒಟ್ಟು ಏಳು ಜನ ಕಣದಲ್ಲಿದ್ದಾರೆ. ಆದರೆ, ರಾಚಯ್ಯ ಹಾಗೂ ಮಳಲಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಮತದಾರ ಪ್ರಭು ಯಾರ ಪರ ಒಲವು ತೋರಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಇನ್ನು ಎಂಟನೇ ವಾರ್ಡ್‌ನಿಂದ ಟಿ.ಆರ್‌. ರಾಧಾ ಎಂಬುವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅವರ ಪತಿ ಗುತ್ತಿಗೆದಾರರು. ಈ ವಾರ್ಡ್‌ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ರಾಧಾ ಅವರನ್ನು ಅವರ ಪತಿ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

16ನೇ ವಾರ್ಡಿನಿಂದ ಸ್ಪರ್ಧಿಸಿರುವ ತಿಮ್ಮಯ್ಯ, 18ನೇ ವಾರ್ಡಿನ ಎಂ. ಲಿಂಗಪ್ಪನವರು ರೈತರು ಎನ್ನುವುದು ವಿಶೇಷ. ಇಬ್ಬರು ಸಹ ಬಿಜೆಪಿಯಿಂದ ಟಿಕೆಟ್‌ ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT