ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಜುಲೈ 10ರಿಂದ ಆಶಾ ಕಾರ್ಯಕರ್ತರ ಸೇವೆ ಸ್ಥಗಿತ

₹12 ಸಾವಿರ ಗೌರವ ಧನ ಖಾತರಿಪಡಿಸಲು ಆಗ್ರಹ
Last Updated 28 ಜೂನ್ 2020, 7:43 IST
ಅಕ್ಷರ ಗಾತ್ರ

ಬಳ್ಳಾರಿ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹12 ಸಾವಿರ ಗೌರವಧನ ಖಾತರಿ ಪಡಿಸಿ, ಅಗತ್ಯ ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು.‌ ಇಲ್ಲದಿದ್ದರೆ ಜುಲೈ10 ರಿಂದ ಸೇವೆಯನ್ನು ರಾಜ್ಯದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ತಿಳಿಸಿದರು.

ಜೂನ್ 30ರಂದು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಸೇರಿದಂತೆ ಎಲ್ಲ ಸಚಿವರು, ಶಾಸಕರಿಗೂ ಮನವಿ ಸಲ್ಲಿಸಲಾಗುವುದು. ಸ್ಪಂದಿಸದಿದ್ದರೆ ಜುಲೈ 10 ರಂದು ಸೇವೆ ಸ್ಥಗಿತಗೊಳಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಹಬ್ಬುವ ಮುಂಚೆಯೂ ಹಲವು ಬೇಡಿಕೆಗಳಿಗಾಗಿ ಹೋರಾಟ ನಡೆಯುತ್ತಿತ್ತು. ಕೊಡುವ ಬಿಡಿಗಾಸು ಗೌರವಧನವನ್ನೂ ಸರ್ಕಾರ ಸರಿಯಾಗಿ ಕೊಡುವುದಿಲ್ಲ. ಕೊರೊನಾ ಬಂದ ಕಾರಣ ಎಲ್ಲವನ್ನೂ ಬಿಟ್ಟು ಕರ್ತವ್ಯಕ್ಕೆ ಹಾಜರಾದೆವು. ಸಹಕಾರಿ ಇಲಾಖೆ ನೀಡುತ್ತಿರುವ ₹3 ಸಾವಿರ ಪ್ರೋತ್ಸಾಹಧನವೂ ಎಲ್ಲರಿಗೂ ತಲುಪಿಲ್ಲ. ನಗರಗಳಲ್ಲಿ ಮಾತ್ರ ಕೊಟ್ಟು ಎಲ್ಲ ಕಡೆಯೂ ಕೊಟ್ಟಂತೆ ಸರ್ಕಾರ ತೋರಿಸಿಕೊಳ್ಳುತ್ತಿದೆ ಎಂದು ದೂರಿದರು.

ಮೂರು ತಿಂಗಳಿಂದ ಆಶಾಕಾರ್ಯಕರ್ತೆಯರು ವಿಶ್ರಾಂತಿ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂದೆ ನಿಂತು, ಸಮೀಕ್ಷೆ ಮಾಡಿ ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ನೀಡುವುದಲ್ಲದೇ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಂಥವರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಆದರೂ ಸರ್ಕಾರ ಗಮನಿಸುತ್ತಿಲ್ಲ. ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದರೂ ಈವರೆಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಲಿಲ್ಲ‌ ಎಂದು ದೂರಿದರು.

ಚಪ್ಪಾಳೆ ತಟ್ಟಿ, ಹೂಮಳೆ ಸುರಿಸಿ, ಶಾಲು ಹಾಕುವುದರಿಂದ ಆಶಾ ಕಾರ್ತಕರ್ತೆಯರ ಹೊಟ್ಟೆ ತುಂಬಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಅಶಾ ಕಾರ್ಯಕರ್ತೆಯರಿಗೂ ಸೋಂಕು ತಗುಲುತ್ತಿದೆ. ಸೂಕ್ತ ಸುರಕ್ಷತಾ ಸಾಮಗ್ರಿಗಳನ್ನು ಕೊಟ್ಟಿಲ್ಲ. ಪದೇ, ಪದೇ ಆರೋಗ್ಯ ತಪಾಸಣೆ ನಡೆಸಬೇಕು. ಸೋಂಕು ತಗುಲಿರುವ ಆಶಾ ಕಾರ್ಯಕರ್ತೆಯರ ಚಿಕಿತ್ಸೆ ಅವಧಿಯಲ್ಲಿ ಗೌರವಧನ ಕೊಡಬೇಕು. ಎನ್ 95 ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್, ಸ್ಯಾನಿಟೈಜರ್ ಗಳನ್ನು ವಿತರಿಸಬೇಕು ಎಂದು ಅಗ್ರಹಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ದೇವದಾಸ್, ಶಾಂತಾ, ಗೀತಾ, ರೇಷ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT