ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಸ್‌ಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ

Last Updated 24 ಏಪ್ರಿಲ್ 2018, 8:12 IST
ಅಕ್ಷರ ಗಾತ್ರ

ಆಕೆ ಎಂಜಿನಿಯರಿಂಗ್ ಪದವೀಧರೆ. ಕೋರ್ಸ್ ಮುಗಿಸಿದ ಕೂಡಲೇ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗ ಗಿಟ್ಟಿಸುವಲ್ಲಿಯೂ ಯಶಸ್ವಿಯಾಗಿದ್ದಳು. ಆದರೆ ಆರೇ ತಿಂಗಳಲ್ಲಿ ಕೆಲಸಕ್ಕೆ ಗುಡ್‍ಬೈ ಹೇಳಿ ಈಗ ಮನೆ ಸೇರಿದ್ದಾಳೆ. ಮುಂದೇನು ಎಂಬುದು ಅವಳ ಚಿಂತೆ. ತಾಯಿಯೊಂದಿಗೆ ಕರಿಯರ್ ಕೌನ್ಸೆಲಿಂಗ್‍ಗಾಗಿ ಬಂದಿದ್ದ ಹೆಣ್ಮಗಳಿಗೆ ಕರಿಯರ್ ಪ್ಲಾನಿಂಗ್‍ನ ವಿಧಾನಗಳನ್ನು ತಿಳಿಸಿಕೊಟ್ಟಾಗ ಆಕೆಯ ಮನಸ್ಸು ಹಗುರಾದಂತಿತ್ತು. ಮುಂದಿನ ವಾರ ಭೇಟಿಯ ಸಮಯ ನಿಗದಿಪಡಿಸಿ ಹೊರಡುವಾಗ ಆಕೆ ಹೇಳಿದ ಮಾತು : ‘ತಪ್ಪು ಮಾಡಿದೆ, ಸರ್. ಎಸ್‍ಎಸ್‍ಎಸ್‍ಸಿ ಬಳಿಕ ನಾನು ಕರಿಯರ್ ಕೌನ್ಸೆಲಿಂಗ್‌ ಮಾಡಿಸಿಕೊಂಡಿದ್ದರೆ ಅಥವಾ ಪಿಯುಸಿ ಬಳಿಕವಾದರೂ ಸ್ವತಃ ನಾನೇ ಕರಿಯರ್ ಪ್ಲಾನಿಂಗ್ ಮಾಡಿ ಕಲಿತಿದ್ದರೆ, ಖಂಡಿತ ಎಂಜಿನಿಯರಿಂಗ್‍ಗೆ ಹೋಗುತ್ತಿರಲಿಲ್ಲ’.

ಇದು ಆಕೆಂಯೊಬ್ಬಳ ಸಮಸ್ಯೆಯಲ್ಲ.ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಸ್‍ಎಸ್‍ಎಲ್‍ಸಿ/ಪಿಯುಸಿ ಬಳಿಕ ಕರಿಯರ್ ಪ್ಲಾನಿಂಗ್ ಮಾಡದೆ ಕೋರ್ಸ್‍ಗಳನ್ನ ಆಯ್ಕೆ ಮಾಡುತ್ತಾರೆ ಎಂಬುದು ವಾಸ್ತವ. ಮಾತ್ರವಲ್ಲ ಅನೇಕ ಬಾಲಕ, ಬಾಲಕಿಯರಿಗೆ ‘ಕರಿಯರ್’ ಅಂದರೇನು? ಎಂಬುದೇ ತಿಳಿದಿಲ್ಲ. ಶಿವಮೊಗ್ಗದಲ್ಲಿ ನಡೆದ ಕರಿಯರ್ ಗೈಡೆನ್ಸ್ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೈಕಿ ಒಬ್ಬರೂ ಕರಿಯರ್ ಎಂಬಪದವನ್ನು ಓದಿಲ್ಲ, ಕೇಳಿಸಿಕೊಂಡಿಲ್ಲ ಎಂದರೆ ಅಚ್ಚರಿ ಆಗುತ್ತದೆ.

ಕರಿಯರ್ ಅಂದರೇನು? ‘ಕರಿಯರ್’ ಇದು ಫ್ರೆಂಚ್ ಮೂಲದಿಂದ ಇಂಗ್ಲಿಷ್‍ಗೆ ಬಂದಿರುವ ಪದ. ಕರಿಯರ್ ಅನ್ನು ಸಾಮಾನ್ಯವಾಗಿ ಕನ್ನಡದಲ್ಲಿ ‘ವೃತ್ತಿ’ ಎನ್ನಲಾಗುತ್ತದೆ. ಕರಿಯರ್ ಅಂದರೆ ಕೇವಲ ವೃತ್ತಿಯೇ? ಅಥವಾ ಉದ್ಯೋಗ, ಕೆಲಸ, ಜೀವನೋಪಾಯಗಳೇ? ಖಂಡಿತಾ ಅಲ್ಲ. ಕರಿಯರ್‍ಗೆ ಸಮಾನವಾದ ಪದ ಕನ್ನಡದಲ್ಲಿಲ್ಲ. ಕರಿಯರ್ ಅಂದರೆ ಕನ್ನಡದಲ್ಲಿ ‘ಬೆಳೆಯುವ ದಾರಿ’ ಎನ್ನಬಹುದೇನೋ?. ಆದರೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಪಾಲಕರ ಅನುಕೂಲಕ್ಕಾಗಿ ಇಂಗ್ಲಿಷ್‍ನಲ್ಲಿ ಚಾಲ್ತಿಯಲ್ಲಿರುವ ‘ಕರಿಯರ್’ ಪದವನ್ನೆ ಈ ಅಂಕಣದಲ್ಲಿ ಬಳಸಲಾಗುವುದು.

ಕರಿಯರ್ ಗೈಡೆನ್ಸ್ ಎಂಬ ಪರಿಕಲ್ಪನೆ
ಹುಟ್ಟಿದ್ದು 1908ರಲ್ಲಿ. ಅಮೆರಿಕಾದ ಫ್ರಾಂಕ್ ಪಾರ್ಸನ್ಸ್ ಇದರ ಜನಕ. ಪಾರ್ಸನ್ಸ್‍ರನ್ನು ಕರಿಯರ್ ಗೈಡೆನ್ಸ್‍ನ ತಂದೆ ಎನ್ನುತ್ತಾರೆ. ಭಾರತಕ್ಕೆ ಕರಿಯರ್‍ನ ಪರಿಕಲ್ಪನೆ ಪರಿಚಯ
ವಾಗಿರುವುದು ತೀರಾ ಇತ್ತೀಚೆಗೆ. ಕರಿಯರ್ - ಒಂದು ನಿರಂತರ ಪ್ರಕ್ರಿಯೆ. ವ್ಯಕ್ತಿಯೊಬ್ಬ ತನ್ನ ಬುದ್ಧಿಸಾಮರ್ಥ್ಯ, ಆಸಕ್ತಿ, ಮನೋಭಾವ ಮತ್ತು ಪ್ರತಿಭೆಗಳಿಗನುಸಾರ ತಾನು ಬೆಳೆಯುವ ದಾರಿಯನ್ನು ಗೊತ್ತುಪಡಿಸಿ, ತನ್ನ ಕನಸುಗಳನ್ನು ನನಸಾಗಿಸುವ ಯೋಜನೆಗಳನ್ನು ರೂಪಿಸುವುದು. ಬದುಕಿನಲ್ಲಿ ಸಾಧನೆ ಮಾಡಬಹುದಾದ ಕ್ಷೇತ್ರವೊಂದನ್ನು ಆರಿಸಿ, ಅದಕ್ಕೆ ಪೂರಕವಾದ ವೃತ್ತಿಯನ್ನು ಆಯ್ಕೆ ಮಾಡುವುದು. ಆ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಬೇಕಾದ ಶಿಕ್ಷಣ ಪಡೆದು, ಅಗತ್ಯ ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವುದೇ ಕರಿಯರ್ ಎಂಬುದಾಗಿ ವ್ಯಾಖ್ಯಾನಿಸಬಹುದು.

(ಉಮರ್.ಯು.ಎಚ್‌. ಲೇಖಕರು ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್‌ಫಾರ್ಮೇಶನ್‌ ಸೆಂಟರ್‌ನ ಸ್ಥಾಪಕಾಧ್ಯಕ್ಷರು. 14 ವರ್ಷಗಳಿಂದ ವಿದ್ಯಾರ್ಥಿಗಳಿಗೆ ವೃತ್ತಿಮಾರ್ಗದರ್ಶನ ಮಾಡುತ್ತಿದ್ದಾರೆ. ಮೊಬೈಲ್‌: 9845054191) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT