ಉಷಾ ರೋಹಿಣಿ, ಊರ್ಮಿಳಾ ಮಿಂಚಿನ ಓಟದ ಸಹೋದರಿಯರು

7

ಉಷಾ ರೋಹಿಣಿ, ಊರ್ಮಿಳಾ ಮಿಂಚಿನ ಓಟದ ಸಹೋದರಿಯರು

Published:
Updated:
Deccan Herald

ಹೊಸಪೇಟೆ: ಓಟದಲ್ಲಿ ಇವರಿಗೆ ಯಾರೂ ಸರಿಸಾಟಿ ಇಲ್ಲ. ಹೀಗಾಗಿಯೇ ಇವರನ್ನು ‘ಮಿಂಚಿನ ಓಟದ ಸಹೋದರಿಯರು’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಉಷಾ ರೋಹಿಣಿ ಹಾಗೂ ಅವರ ತಂಗಿ ಊರ್ಮಿಳಾ ಟ್ರ್ಯಾಕ್‌ನಲ್ಲಿ ಓಡಲು ಶುರು ಮಾಡಿದರೆ ಜಿಂಕೆಯಂತೆ ಓಡುತ್ತಾರೆ. ‘ಯಾವುದೇ ಸ್ಪರ್ಧೆ ಇರಲಿ ಪದಕ ಗೆಲ್ಲದೆ ಹಿಂತಿರುಗುವುದಿಲ್ಲ. ಅಂತಹ ಛಲದಂಕಮಲ್ಲಿಯರು ಇವರು’ ಎನ್ನುತ್ತಾರೆ ಅವರನ್ನು ಹತ್ತಿರದಿಂದ ನೋಡಿದವರು. ಇವರು ಪಾಲ್ಗೊಂಡ ಎಲ್ಲ ಸ್ಪರ್ಧೆಗಳಲ್ಲಿ ಪದಕ ಗೆದ್ದಿರುವುದು ನೋಡಿದರೆ ಅದು ಪುಷ್ಟೀಕರಿಸುತ್ತದೆ.

ತಾಲ್ಲೂಕು, ಜಿಲ್ಲಾ, ವಲಯ ಹಾಗೂ ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಪದಕ ಬೇಟೆಯಾಡಿರುವ ಇವರ ಮುಂದಿನ ಗುರಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ತರುವುದು. ಇದಕ್ಕಾಗಿಯೇ ನಿತ್ಯ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಬೆವರು ಹರಿಸುತ್ತಾರೆ.

ಉಷಾ ಅವರು ರಾಜ್ಯಮಟ್ಟದ 21 ಕಿ.ಮೀ ಓಟದ ಸ್ಪರ್ಧೆ, ರಾಷ್ಟ್ರಮಟ್ಟದ ವಿಶ್ವವಿದ್ಯಾಲಯಗಳ 6 ಕಿ.ಮೀ ಸ್ಪರ್ಧೆಯಲ್ಲಿ ಜಯಿಸಿದರೆ, ಊರ್ಮಿಳಾ ಅವರು ರಾಜ್ಯಮಟ್ಟದ 100, 1,500 ಮೀಟರ್‌ ಓಟದ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದಾರೆ. ಹರ್ಡಲ್ಸ್‌, ಹೈಜಂಪ್‌, ಉದ್ದ ಜಿಗಿತ ಹಾಗೂ ಕಬಡ್ಡಿಯ ಉತ್ತಮ ಪಟು ಕೂಡ ಆಗಿದ್ದಾರೆ.

ಅಂದಹಾಗೆ, ಊರ್ಮಿಳಾ ಅವರು ಏಳನೇ ತರಗತಿಯಲ್ಲಿದ್ದಾಗಲೇ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೊದಲ ಸಲ ಬಹುಮಾನ ಗೆದ್ದಿದ್ದರು. ಈಗ ಅವರು ಪಿ.ಯು.ಸಿ.ಯಲ್ಲಿ ಓದುತ್ತಿದ್ದಾರೆ. ಓದಿನ ಜತೆಗೆ ಎಲ್ಲೇ ಅಥ್ಲೆಟಿಕ್ಸ್‌ ಸ್ಪರ್ಧೆ ನಡೆಯಲಿ, ಅಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ. ಕಿರಿಯ ಸಹೋದರಿಯಿಂದ ಪ್ರೇರಣೆ ಪಡೆದು, ಉಷಾ ಅನಂತರದಲ್ಲಿ ಅಥ್ಲೆಟಿಕ್ಸ್‌ಗೆ ಪದಾರ್ಪಣೆ ಮಾಡಿದರು. ಆದರೆ, ಈಗ ತಂಗಿಗಿಂತ ಎತ್ತರದ ಸಾಧನೆ ಮಾಡಿದ್ದಾರೆ. ಉಷಾ ಪದವಿ ಮುಗಿಸಿದ್ದಾರೆ. ಇವರ ಮತ್ತೊಬ್ಬ ಕಿರಿಯ ಸಹೋದರಿ ಸೌಮ್ಯ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆ ಕೂಡ ಅಥ್ಲೆಟಿಕ್ಸ್‌ ಬಗ್ಗೆ ಆಸಕ್ತಿ ತೋರುತ್ತಿದ್ದಾಳೆ.

ಇವರ ತಂದೆ ಹೊಸೂರು, ನಗರದ ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ಉಷಾ ಹಾಗೂ ಊರ್ಮಿಳಾ ಇಬ್ಬರು ಗೃಹರಕ್ಷಕಿಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದಿನ ಖರ್ಚು, ಆಟಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆ ದುಡ್ಡಿನಿಂದಲೇ ಹೊಂದಿಸಿಕೊಳ್ಳುತ್ತಿದ್ದಾರೆ.

ಓಟದ ಬಗ್ಗೆ ಮಕ್ಕಳಿಗಿರುವ ಅದಮ್ಯ ಉತ್ಸಾಹ ಕಂಡು ತಂದೆ ಹೊಸೂರು ಅವರಿಗೆ ಬಹಳ ಹೆಮ್ಮೆ ಇದೆ. ‘ಎಷ್ಟೇ ಕಷ್ಟ ಬರಲಿ. ಓಟದಲ್ಲಿ ಮುಂದುವರಿಯುವಂತೆ’ ಸಲಹೆ ಮಾಡುತ್ತಾರೆ. ಜತೆಗೆ ಮಕ್ಕಳಿಬ್ಬರೂ ನಿತ್ಯ ಬೆಳಿಗ್ಗೆ ಓಡುತ್ತಿದ್ದರೆ, ಅವರ ಹಿಂದೆ ಬೈಸಿಕಲ್‌ ತುಳಿದುಕೊಂಡು ಹೋಗುತ್ತಾರೆ. ಕಡು ಕಷ್ಟದಲ್ಲಿರುವ ಈ ಓಟಗಾರ್ತಿಯರಿಗೆ ನೆರವಿನ ಹಸ್ತ ಚಾಚಿದರೆ, ದೊಡ್ಡ ಸಾಧನೆ ಮಾಡಬಲ್ಲರು. ನೆರವು ಕೊಡ ಬಯಸುವವರು ಉಷಾ ಅವರ ಮೊಬೈಲ್‌ ಸಂಖ್ಯೆ 91108 28529 ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !