ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಬೇಡಿಕೆ ಈಡೇರಿಸುವ ಭರವಸೆ, ಆಟೊ ಚಾಲಕರಿಂದ ಮುಷ್ಕರ ವಾಪಸ್‌

ಪ್ರತಿಭಟನೆಯಲ್ಲಿ ನೂರಾರು ಆಟೊ ಚಾಲಕರು ಭಾಗಿ
Last Updated 16 ಜುಲೈ 2019, 10:36 IST
ಅಕ್ಷರ ಗಾತ್ರ

ಹೊಸಪೇಟೆ: ಆಟೊ ನಗರ ನಿರ್ಮಿಸಿ ನಿವೇಶನ ಹಂಚಿಕೆ ಮಾಡುವುದು, ಹೊಸ ಆಟೊ ರಿಕ್ಷಾ ಖರೀದಿಗೆ ಸಬ್ಸಿಡಿ ಕೊಡುವ ಭರವಸೆ ಸಿಕ್ಕಿದ್ದರಿಂದ ಫೆಡರೇಶನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್‌ ಕರೆ ಕೊಟ್ಟಿದ್ದ ಮುಷ್ಕರ ಮಂಗಳವಾರ ಹಿಂಪಡೆಯಿತು.

ಬೇಡಿಕೆಗಳನ್ನು ಈಡೇರಿಸುವವರೆಗೆ ಆಟೊ ಓಡಿಸದೆ ಚಾಲಕರು ಮುಷ್ಕರ ಕೈಗೊಂಡಿದ್ದರು. ಬೆಳಿಗ್ಗೆ ನಗರದ ಮಾರ್ಕಂಡೇಶ್ವರ ದೇವಸ್ಥಾನದ ಬಳಿ ಸೇರಿದ ನೂರಾರು ಆಟೊ ಚಾಲಕರು, ಅಲ್ಲಿಂದ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ರೋಟರಿ ವೃತ್ತದ ಮೂಲಕ ಹಾದು ನಗರಸಭೆ ಕಚೇರಿಗೆ ಬಂದರು. ಕಚೇರಿಯ ಮುಖ್ಯ ಪ್ರವೇಶ ದ್ವಾರದ ಬಳಿ ಸೇರಿ ಘೋಷಣೆಗಳನ್ನು ಕೂಗಿದರು. ಬೇಡಿಕೆ ಈಡೇರಿಸುವ ಖಚಿತ ಭರವಸೆ ಸಿಗುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸ್ಥಳಕ್ಕೆ ಬಂದ ನಗರಸಭೆ ಪೌರಾಯುಕ್ತ ವಿ. ರಮೇಶ, ‘ಆಟೊ ನಗರ ನಿರ್ಮಿಸಿ, ಎಲ್ಲ ಚಾಲಕರಿಗೆ ಅಲ್ಲಿ ನಿವೇಶನ ನೀಡಬೇಕು. ಆಟೊ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಫೆಡರೇಶನ್‌ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಜು. 20ರಂದು ಸಭೆ ನಡೆಸಲಾಗುವುದು. ಅಲ್ಲಿ ಎಲ್ಲ ಆಯಾಮಗಳ ಕುರಿತು ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು’ ಎಂದು ಭರವಸೆ ನೀಡಿದರು.

ಇದಾದ ಬಳಿಕ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್‌ ಅಹಮ್ಮದ್‌, ‘ಹೊಸ ವಾಹನಗಳ ಖರೀದಿ ವೇಳೆ ಸಬ್ಸಿಡಿ ಕೊಡಬೇಕು. 15 ವರ್ಷ ಹಳೆಯ ವಾಹನಗಳನ್ನು ಬದಲಿಸಬೇಕೆಂಬ ಷರತ್ತು ಸರ್ಕಾರ ವಿಧಿಸಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಬಹುದು ಎಂದು ಚರ್ಚಿಸಲು ಜು. 26ರಂದು ಸಭೆ ನಡೆಸಿ, ಪರಿಹಾರ ಒದಗಿಸಲಾಗುವುದು’ ಎಂದು ಭರವಸೆ ಕೊಟ್ಟರು.

ಫೆಡರೇಶನ್‌ ಮುಖಂಡ ಕೆ.ಎಂ. ಸಂತೋಷ ಕುಮಾರ್‌ ಪ್ರತಿಕ್ರಿಯಿಸಿ, ‘ಅಧಿಕಾರಿಗಳು ಬೇಡಿಕೆ ಈಡೇರಿಸುವ ಖಚಿತ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿ ಮುಂದುವರಿಯೋಣ. ಅಲ್ಲಿಯವರೆಗೆ ಮುಷ್ಕರ ಕೈಬಿಡೋಣ. ಎಲ್ಲ ಆಟೊ ಚಾಲಕರು ಸಹಕರಿಸಬೇಕು‘ ಎಂದು ಮನವಿ ಮಾಡಿದರು. ಇದರಿಂದ ಮುಷ್ಕರ ಕೊನೆಗೊಂಡಿತು.

ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದಸಂತೋಷ ಕುಮಾರ್‌, ‘ಹದಿನೈದು ವರ್ಷ ಹಳೆಯ ವಾಹನಗಳನ್ನು ಸರ್ಕಾರ ನಿಷೇಧಿಸಿದೆ. ಅಂತಹ ಹಳೆಯ ಆಟೊ ರಿಕ್ಷಾ ಮಾಲೀಕರಿಗೆ ಹೊಸ ರಿಕ್ಷಾ ತೆಗೆದುಕೊಳ್ಳುವಾಗ ನಗರಸಭೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ₹30 ಸಾವಿರ ಸಬ್ಸಿಡಿ ನೀಡಬೇಕು. ಹಳೆಯ ಆಟೊ ರಿಕ್ಷಾಗಳನ್ನು ಶೋ ರೂಂಗಳು ಮಾರುಕಟ್ಟೆಯ ಬೆಲೆಗೆ ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಆಟೊ ರಿಕ್ಷಾ ಚಾಲಕರಿಗೆ ನಗರಸಭೆ ಎಸ್ಸಿ/ಎಸ್ಟಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಪ್ರಧಾನಮಂತ್ರಿ ರೋಜಗಾರ್‌ ಯೋಜನೆ, ಮುದ್ರಾ ಯೋಜನೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಸುಪ್ರೀಂಕೋರ್ಟ್‌ ಆದೇಶದಂತೆ 7,500 ಕೆ.ಜಿ. ತೂಕದ ವಾಹನಗಳಿಗೆ ಪರವಾನಗಿ ಬ್ಯಾಡ್ಜ್‌ ಕಡ್ಡಾಯ ಇರುವುದಿಲ್ಲ. ಇದು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬೇಕು’ ಎಂದರು.

‘ಕೇಂದ್ರ ಮೋಟಾರ್‌ ವಾಹನ ತಿದ್ದುಪಡಿ ಮಸೂದೆ ಜಾರಿಗೆ ತರುವ ಪ್ರಸ್ತಾವ ಕೈಬಿಡಬೇಕು. ಮೋಟಾರ್‌ ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ದಂಡ ಹೆಚ್ಚಿಸಿರುವುದು ಸರಿಯಲ್ಲ. ಅದನ್ನು ಪರಿಷ್ಕರಿಸಬೇಕು. ಆಟೊ ನಗರ ಅಭಿವೃದ್ಧಿ ಪಡಿಸಿ, ಎಲ್ಲ ಆಟೊ ಚಾಲಕರಿಗೆ ನಿವೇಶನ ಕೊಡಬೇಕು. ಎಲ್ಲ ಆಟೊ ನಿಲ್ದಾಣಗಳನ್ನು ಆಧುನೀಕರಣಗೊಳಿಸಬೇಕು’ ಎಂದು ರಾಮಚಂದ್ರಬಾಬು ಒತ್ತಾಯಿಸಿದರು.

ಮುಖಂಡರಾದ ಸತೀಶ್‌, ಎಸ್‌. ಅನಂತ, ಜಿ. ಸಿದ್ದಲಿಂಗೇಶ, ಬಸವರಾಜ, ಟಿ. ಚಂದ್ರಶೇಖರ್‌, ಕೃಷ್ಣ, ರಮೇಶ, ಗಣೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT