ಬುಧವಾರ, ಸೆಪ್ಟೆಂಬರ್ 18, 2019
25 °C
ಮೂವರು ಸಾಧಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಹೊಸಪೇಟೆ: ಪದ್ಯಕ್ಕೆ ರಾಗ ಸಂಯೋಜಿಸುವ ಶಿಕ್ಷಕ

Published:
Updated:
Prajavani

ಹೊಸಪೇಟೆ: ಪದ್ಯಗಳನ್ನು ಓದಿ ಹೇಳುವುದಕ್ಕಿಂತ, ಅವುಗಳನ್ನು ಹಾಡಿ ಅದಕ್ಕೆ ರಾಗ ಸಂಯೋಜನೆ ಮಾಡಿದರೆ ಹೇಗಿರುತ್ತೆ?

ಹೌದು, ಇಂತಹದ್ದೊಂದು ವಿಶಿಷ್ಟ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತ, ಅದರಲ್ಲಿ ಯಶಸ್ವಿಯಾಗಿ, ಚಿಣ್ಣರ ಅಚ್ಚುಮೆಚ್ಚಿನ ಶಿಕ್ಷಕರೆನಿಸಿಕೊಂಡಿದ್ದಾರೆ ನಗರದ .ಬಿ.ಆರ್‌. ಅಂಬೇಡ್ಕರ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ದಸ್ತಗಿರಿ ಸಾಹೇಬ್‌.

ಶಾಸ್ತ್ರೀಯ ಸಂಗೀತದ ಬಗ್ಗೆ ವಿಶೇಷ ಅಭಿರುಚಿ ಹೊಂದಿರುವ ದಸ್ತಗಿರಿ, ಪಠ್ಯದಲ್ಲಿರುವ ಪದ್ಯಗಳನ್ನು ರಾಗ ಸಂಯೋಜನೆ ಮಾಡಿ, ಸಿ.ಡಿ. ಮಾಡಿದ್ದಾರೆ. ಮೊದಲು ತರಗತಿಯಲ್ಲಿ ಸ್ವತಃ ಅವರೇ ಹಾಡಿ ಪದ್ಯ ಹೇಳುತ್ತಾರೆ. ಬಳಿಕ ಸಿ.ಡಿ. ಕೂಡ ಹಾಕಿ ಕೇಳಿಸುತ್ತಾರೆ. ಇದರಿಂದ ಮಕ್ಕಳು ಸುಲಭವಾಗಿ ಪದ್ಯ ಕಂಠಪಾಠ ಮಾಡುತ್ತಾರೆ. ‘ಅದು ಸದಾ ಅವರ ನೆನಪಿನಲ್ಲಿ ಉಳಿಯುತ್ತದೆ’ ಎಂಬುದು ದಸ್ತಗಿರಿ ಅವರ ಮಾತು.

ಇವರು ರಾಗ ಸಂಯೋಜನೆ ಮಾಡಿರುವ ಸಿ.ಡಿ.ಗಳನ್ನು ಬೇರೆ ಶಾಲೆಗಳವರು ಕೇಳಿ ಪಡೆದುಕೊಳ್ಳುತ್ತಿದ್ದಾರೆ. ರಂಗಕಲೆಯ ಬಗ್ಗೆಯೂ ತರಬೇತಿ ಪಡೆದಿರುವ ಅವರು ಏಕಪಾತ್ರಾಭಿನಯ ಮೂಲಕ ಪಾಠ ಹೇಳಿಕೊಡುತ್ತಾರೆ. ಬಾಗಲಕೋಟೆಯವರಾದ ದಸ್ತಗಿರಿ ತಾಲ್ಲೂಕಿನ ಪಾಪಿನಾಯಕನಹಳ್ಳಿ, ನಾಗೇನಹಳ್ಳಿಯಲ್ಲಿ ಕೆಲಸ ಮಾಡಿದ್ದಾರೆ. 22 ವರ್ಷಗಳ ಅನುಭವ ಅವರಿಗಿದೆ.

ಚಿತ್ರಕಲೆ ಮುಖೇನ ಪಾಠ–ಪ್ರವಚನ

ನಗರದ ಚಿತ್ತವಾಡ್ಗಿ ಮುನ್ಸಿಪಲ್‌ ಪ್ರೌಢಶಾಲೆಯ ಶಿಕ್ಷಕ ರಾಮಚಂದ್ರ ಚಿತ್ರಾಗಾರ ಕಲಿಕೆಗೆ ಪೂರಕವಾಗುವಂತೆ ಚಿತ್ರಕಲೆ ಬಿಡಿಸಿ ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಸುತ್ತಿದ್ದಾರೆ.

ಓದಿನಲ್ಲಿ ಏಕಾಗ್ರತೆ ಬೆಳೆಸುವುದು, ಅದರ ಜತೆಗೆ ಪರೋಕ್ಷವಾಗಿ ಚಿತ್ರಕಲೆ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಮೂಡಿಸುತ್ತಿದ್ದಾರೆ. ಅವರ ಈ ವಿಶಿಷ್ಟ ಪ್ರಯತ್ನದಿಂದ ಶಾಲೆಯ ಮಕ್ಕಳು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ವತಃ ರಾಮಚಂದ್ರ ಅವರ ಕಲಾಕೃತಿಯೊಂದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು.

ಶಾಲೆಯಲ್ಲಿ ಏಕವ್ಯಕ್ತಿ, ಸಮೂಹ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಅದರ ಮೂಲಕ ಸ್ಪರ್ಧೆಗೆ ಮಕ್ಕಳನ್ನು ಅಣಿಗೊಳಿಸುತ್ತಿದ್ದಾರೆ. ಸ್ಪರ್ಧೆಗೆ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು, ಸಿದ್ಧತೆ ಹೇಗಿರಬೇಕು ಎನ್ನುವುದು ತಿಳಿಸಿಕೊಡುತ್ತಾರೆ. 2002ರಿಂದ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮೂಲಸೌಕರ್ಯಕ್ಕೆ ಶ್ರಮಿಸಿದ ಶಿಕ್ಷಕ

ತಾಲ್ಲೂಕಿನ ಗುಂಡ್ಲುವದ್ದಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಚಾರಿ ದುರುಗಪ್ಪ ಅವರು ಮಕ್ಕಳ ಕಲಿಕೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಗುಣಮಟ್ಟ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.

15 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, 2010ರಿಂದ ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದು, ಶಾಲೆಗೆ ಹೊಸ ರೂಪ ಕೊಡುತ್ತಿದ್ದಾರೆ. ಶಾಲೆಯಲ್ಲಿ ‌ಮೂಲಸೌಕರ್ಯ ಇಲ್ಲದಿರುವುದನ್ನು ಮನಗಂಡು ಅದಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

‘ಶಾಲೆಯಲ್ಲಿ ಯಾವುದೇ ರೀತಿಯ ಸೌಲಭ್ಯ ಇರಲಿಲ್ಲ. ಜಿಂದಾಲ್‌ನವರ ನೆರವು ಪಡೆದು ಕಂಪ್ಯೂಟರ್‌ ವ್ಯವಸ್ಥೆ, ಬಾಲಕ/ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಧ್ವಜ ಕಟ್ಟೆ ಕಟ್ಟಿಸಿದೆ. ಮಾಜಿಶಾಸಕ ಎಚ್‌.ಆರ್‌.ಗವಿಯಪ್ಪನವರ ಸಹಾಯದಿಂದ ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಂಡೆವು. ಮಕ್ಕಳಿಗೆ ಕೂರಲು ಬೆಂಚ್‌, ಉತ್ತಮವಾದ ಪರಿಸರ ನಿರ್ಮಿಸಿದೆ. ಅದಕ್ಕೆ ಶಾಲೆಯ ಪ್ರತಿಯೊಬ್ಬರೂ ಸಹಕಾರ ಕೊಟ್ಟರು’ ಎಂದು ದುರುಗಪ್ಪ ಹೇಳಿದರು.

ಕನ್ನಡ ಬೋಧನೆಯ ಜತೆಗೆ ಮಕ್ಕಳಿಗೆ ದೈಹಿಕ ಶಿಕ್ಷಣ ಕೂಡ ಇವರೇ ನೀಡುತ್ತಾರೆ. ಗ್ರಾಮದ ರೈತರ ಮನವೊಲಿಸಿ, ಅವರ ಹೊಲದಲ್ಲಿ ಯಶಸ್ವಿಯಾಗಿ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

Post Comments (+)