ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯಕ್ಕೆ ಆಗ್ರಹ

Last Updated 13 ಡಿಸೆಂಬರ್ 2018, 12:09 IST
ಅಕ್ಷರ ಗಾತ್ರ

ಹೊಸಪೇಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳಿಗೆ ನ್ಯಾಯೋಚಿತ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕರ್ತರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್‌ ಎಚ್. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವೈ. ಯಮುನೇಶ್‌, ‘ಬಳ್ಳಾರಿ ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರದ ಅವಧಿ 2019ರ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ. ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದೆ. ವಾರ್ಡ್‌ಗಳ ಮರು ವಿಂಗಡಣೆ ಮತ್ತು ಜಾತಿವಾರು ಮೀಸಲು ನಿಗದಿಪಡಿಸುವಾಗ 2011ರ ಜನಗಣತಿ ಆಧಾರವಾಗಿ ಇಟ್ಟುಕೊಂಡಿರುವುದು ಸರಿಯಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಶೇ 35ರಷ್ಟಿರುವ ಹಿಂದುಳಿದ ಮತ್ತು ಅತಿ ಹಿಂದುಳಿದ ಸಣ್ಣ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿವಾರು ಗಣತಿ ಮಾಡಲಾಗಿದೆ. ಸಮೀಕ್ಷೆ ಅಂಕಿ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ಹಿಂದುಳಿದ ಜಾತಿಗಳಿಗೆ ಶೇ 35ರಷ್ಟು ಮೀಸಲು ನಿಗದಿಪಡಿಸಬೇಕು. ನಂತರ ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕು. ಅತಿ ಹಿಂದುಳಿದ ಜಾತಿಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಹಾಗೂ ಮೀಸಲಿನ ರಕ್ಷಣೆ ಕೊಡಬೇಕೆಂದು 2010ರಲ್ಲಿ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ’ ಎಂದು ನೆನಪಿಸಿದರು.

‘ನಗರ ಹಾಗೂ ಪಟ್ಟಣ ಪ್ರದೇಶದ ವಾರ್ಡ್‌ಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಹಿಂದುಳಿದ ವರ್ಗಗಳ ಮತದಾರರು ಇರುವ ವಾರ್ಡ್‌ಗಳನ್ನು ಕಡ್ಡಾಯವಾಗಿ ಆ ಜಾತಿಗಳವರಿಗೆ ಮೀಸಲಿಡಬೇಕು. ಜತೆಗೆ ಆ ಜಾತಿಗಳ ಜನರ ಜನಸಂಖ್ಯೆಯನ್ನು ಆಧರಿಸಿ ಸ್ಥಾನಗಳನ್ನು ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ತಾಲ್ಲೂಕು ಅಧ್ಯಕ್ಷ ರವಿಶಂಕರ ದೇವರಮನಿ, ಮುಖಂಡರಾದ ಬಿ.ಕುಮಾರಸ್ವಾಮಿ, ರಾಘವೇಂದ್ರ, ಭೋಜರಾಜ, ದೇವರಮನಿ ಚಂದ್ರಶೇಖರ, ಬಿಸಾಟಿ ಸತ್ಯನಾರಾಯಣ, ಕಬ್ಬೇರ ಶ್ರೀನಿವಾಸ, ಕೆ.ಶಿವಾನಂದ, ಟಿ.ಹನುಮಂತ, ಸುಭಾಷ್ ಚಂದ್ರ, ಶ್ಯಾಮಪ್ಪ ಅಗೋಲಿ, ಗೌರಿಶಂಕರ, ದೇವರೆಡ್ಡಿ, ಜಿ.ಓಂಕಾರೇಶ, ಕೆ.ಶಿವಪ್ಪ, ಬಿಸಾಟಿ ಮೂರ್ತಿ, ರಘುನಾಥ ಸ್ವಕುಳಸಾಳಿ, ಪರಶುರಾಮ, ಜಿ.ಕೆ.ವೆಂಕಟೇಶ್, ಬದ್ರಿನಾಥ, ಅಂಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT