ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ರಸ್ತೆಯಲ್ಲಿ ಗುಂಡಿಗಳೋ.. ಗುಂಡಿಗಳದ್ದೇ ರಸ್ತೆಗಳೋ..

Last Updated 20 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಮಳೆಯಿಂದ ನಗರದ ರಸ್ತೆಗಳ ನಿಜವಾದ ಬಣ್ಣ ಬಯಲಾಗಿದೆ.

ಜೂನ್‌, ಜುಲೈ, ಆಗಸ್ಟ್‌ನಲ್ಲಿ ಹೇಳಿಕೊಳ್ಳುವಂತಹ ಮಳೆಯೇ ಆಗಿಲ್ಲ. ಸೆಪ್ಟೆಂಬರ್‌ ಎರಡನೇ ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಅಕ್ಟೋಬರ್‌ನಲ್ಲೂ ಮುಂದುವರೆದಿದೆ. ಆದರೆ, ಒಂದು ತಿಂಗಳ ಮಳೆ ತಡೆದುಕೊಳ್ಳುವ ಶಕ್ತಿಯಿಲ್ಲದೇ ನಗರದ ಬಹುತೇಕ ರಸ್ತೆಗಳು ಬಾಯಿ ತೆರೆದುಕೊಂಡಿವೆ. ಇದು ಅವುಗಳ ಗುಣಮಟ್ಟದ ಮೇಲೆ ಅನುಮಾನ ಮೂಡಿಸಿವೆ.

ಕೆಲವು ರಸ್ತೆಗಳನ್ನು ನೋಡಿದರೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆಯೋ ಅಥವಾ ಗುಂಡಿಗಳದ್ದೇ ರಸ್ತೆಯೋ ಎಂಬ ಅನುಮಾನ ಬರುತ್ತದೆ. ಅಷ್ಟರಮಟ್ಟಿಗೆ ಅವುಗಳು ಮೂಲ ಚಹರೆ ಕಳೆದುಕೊಂಡಿವೆ. ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ದುಃಸ್ಥಿತಿ ಯಾರಿಗೂ ಬೇಕಿಲ್ಲ.

ನಗರದ ಪ್ರಮುಖ ಭಾಗಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಯೇ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಇದೆ. ಹೀಗಿದ್ದರೂ ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ರಾಜಕಾಲುವೆ ನಿರ್ಮಾಣ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಇನ್ನೂ ಶ್ರಮಿಕ ಭವನದ ಬಳಿ ಸೇರುವ ಐದು ರಸ್ತೆಗಳ ವೃತ್ತದಲ್ಲೂ ಗುಂಡಿಗಳದ್ದೇ ದರಬಾರು ಇದೆ. ಟಿ.ಬಿ. ಡ್ಯಾಂ, ಸಂಡೂರು ರಸ್ತೆ, ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ಕಚೇರಿಗಳಿಗೆ ಜನ ಈ ವೃತ್ತದ ಮುಖೇನವೇ ಓಡಾಡುತ್ತಾರೆ. ಅದರ ಬಗ್ಗೆಯೂ ಯಾರೊಬ್ಬರೂ ಗಮನ ಹರಿಸಿಲ್ಲ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವೃತ್ತದಿಂದ ಟಿ.ಬಿ. ಡ್ಯಾಂ ವೃತ್ತದ ವರೆಗಿನ ರಸ್ತೆಗಳಲ್ಲಿಯೂ ಸಾಕಷ್ಟು ಗುಂಡಿಗಳು ಸೃಷ್ಟಿಯಾಗಿವೆ. ಅನಂತಶಯನಗುಡಿಯಿಂದ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ ಹಾಳಾಗಿ ಅನೇಕ ತಿಂಗಳಾಗಿವೆ. ಜನ ಸತತವಾಗಿ ಆಗ್ರಹಿಸುತ್ತ ಬಂದಿದ್ದರೂ ಅದರ ದುರಸ್ತಿಗೆ ಕ್ರಮ ಕೈಗೊಂಡಿರಲಿಲ್ಲ.

ಮಳೆಗಾಲದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಪರಿಸ್ಥಿತಿ ಬಹಳ ಬಿಗಡಾಯಿಸಿದೆ. ದ್ವಿಪಥದ ರಸ್ತೆಯ ಒಂದು ಭಾಗದಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಸಂಚಾರ ನಿರ್ಬಂಧಿಸಲಾಗಿದೆ. ಒಂದೇ ಪಥದಲ್ಲಿ ಎದುರು ಬದುರಾಗಿ ವಾಹನಗಳು ಚಲಿಸುವಂತಹ ಪರಿಸ್ಥಿತಿ ಇದ್ದು, ನಿತ್ಯ ವಾಹನ ದಟ್ಟಣೆ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.

ಶಾಲಾ–ಕಾಲೇಜು, ಕಚೇರಿ, ಕೈಗಾರಿಕೆಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಅವರಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ನಿಧಾನಗತಿ ಕಾಮಗಾರಿಯಿಂದ ಸ್ವಲ್ಪ ಮಳೆ ಬಂದರೂ ರಸ್ತೆಯೆಲ್ಲ ಕೊಚ್ಚೆಯಾಗುತ್ತಿದೆ.

ಬಳ್ಳಾರಿ ವೃತ್ತದಿಂದ ತುಂಗಭದ್ರಾ ಮೇಲ್ಮಟ್ಟದ ಕಾಲುವೆಯಿಂದ (ಎಚ್‌.ಎಲ್‌.ಸಿ.) ಸ್ವಲ್ಪ ದೂರದ ವರೆಗೆ ಉತ್ತಮವಾದ ರಸ್ತೆ ನಿರ್ಮಿಸಲಾಗಿದೆ. ಆದರೆ, ಕಾಲುವೆ ಬಳಿ ಅನೇಕ ತಿಂಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ವಾಹನ ಸವಾರರು ಹರಸಾಹಸ ಮಾಡುವಂತಾಗಿದೆ. ಇದು ಅಪಘಾತಕ್ಕೂ ಕಾರಣವಾಗಿದೆ.

ಸಾರ್ವಜನಿಕರು ತಮ್ಮ ಗೋಳು ಹೇಳಿಕೊಳ್ಳಬೇಕೆಂದರೆ ಸ್ಥಳೀಯ ಶಾಸಕರು ಇಲ್ಲ. ನಗರಸಭೆಯ ಅವಧಿ ಪೂರ್ಣಗೊಂಡಿದ್ದು, ಇನ್ನಷ್ಟೇ ಚುನಾವಣೆ ನಡೆಯಬೇಕಿದೆ. ವಾರ್ಡ್‌ ಸದಸ್ಯರೂ ಇಲ್ಲದ ಕಾರಣ ಸಮಸ್ಯೆ ಹೇಳಿಕೊಳ್ಳಲು ಜನರಿಗೆ ಸಾಧ್ಯವಾಗುತ್ತಿಲ್ಲ.

‘ಎಂ.ಪಿ. ಪ್ರಕಾಶ ನಗರ ಬಳಿಯ ವರ್ತುಲ ರಸ್ತೆ ಲೋಕೋಪಯೋಗಿ ಇಲಾಖೆಯವರು ದುರಸ್ತಿಗೊಳಿಸುತ್ತಿದ್ದಾರೆ. ಉಳಿದ ರಸ್ತೆಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಗುಂಡಿಗಳು ಬಿದ್ದಿದ್ದು, ಅವುಗಳನ್ನು ಇಷ್ಟರಲ್ಲೇ ಸರಿಪಡಿಸುವ ಕೆಲಸ ನಗರಸಭೆ ಮಾಡಲಿದೆ’ ಎಂದು ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

*
ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲೇ ನಗರದ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು.
–ಪಿ. ಜಯಲಕ್ಷ್ಮಿ, ಪೌರಾಯುಕ್ತರು, ನಗರಸಭೆ

*
ರಸ್ತೆಗಳು ಸರಿಯಿಲ್ಲದ ಕಾರಣಕ್ಕಾಗಿಯೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಆದಷ್ಟು ಶೀಘ್ರ ಅವುಗಳನ್ನು ದುರಸ್ತಿಗೊಳಿಸಬೇಕು.
–ಆನಂದ, ಕಬ್ಬೇರಪೇಟೆ

*
ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಒಂದು ತಿಂಗಳಿಂದ ಈಚೆಗಷ್ಟೇ ನಗರದಲ್ಲಿ ಉತ್ತಮ ಮಳೆಯಾಗುತ್ತಿದೆ.
–ಲಕ್ಷ್ಮಣ, ಚಿತ್ತವಾಡ್ಗಿ

*
ಅನೇಕ ತಿಂಗಳ ಬಳಿಕ ಎಂ.ಪಿ. ಪ್ರಕಾಶ ನಗರದ ವರ್ತುಲ ರಸ್ತೆ ದುರಸ್ತಿಗೊಳಿಸಲಾಗುತ್ತಿದೆ. ನಿಧಾನಗತಿ ಕೆಲಸದಿಂದ ಜನರ ನೆಮ್ಮದಿ ಇನ್ನಷ್ಟು ಹಾಳಾಗಿದೆ.
–ವೀರೂ, ಎಂ.ಪಿ. ಪ್ರಕಾಶ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT