ಬಳ್ಳಾರಿಯಲ್ಲಿ ತೆಂಗಿನಕಾಯಿ, ನಾಣ್ಯ, ಬಿಸ್ಕತ್ತುಗಳ ಗಣಪ!

7
ಸೃಜನಶೀಲತೆಯಲ್ಲಿ ಗಣಪನಿಗೆ ತಕ್ಕ ಭಕ್ತ ಸಮೂಹ...

ಬಳ್ಳಾರಿಯಲ್ಲಿ ತೆಂಗಿನಕಾಯಿ, ನಾಣ್ಯ, ಬಿಸ್ಕತ್ತುಗಳ ಗಣಪ!

Published:
Updated:

ಬಳ್ಳಾರಿ: ಜಾಣತನ ಮತ್ತು ಸೃಜನಶೀಲ ಚಿಂತನೆಗೆ ಹೆಸರಾದ ಗಣಪನ ಭಕ್ತರೂ ಈ ಬಾರಿ ತಮ್ಮ ದೇವರಿಗೆ ತಕ್ಕ ಜಾಣತನ ಮತ್ತು ಸೃಜನಶೀಲ ಮಾದರಿಗಳಲ್ಲಿ ಮೂರ್ತಿಗಳನ್ನು ರೂಪಿಸಿ ಗಮನ ಸೆಳೆದಿದ್ದಾರೆ. ಭಕ್ತಿಯ ತನ್ಮಯತೆಯ ಆಚೆಗೆ ಕುಶಲ ಕಲೆಗಾರಿಕೆಯೂ ವಿಜೃಂಭಿಸಿದೆ.  ಪರಿಸರ ಸ್ನೇಹಿ ಆಚರಣೆ ಬಹುತೇಕ ಕಡೆ ಎದ್ದು ಕಂಡಿದೆ.

ಮನೆಗಳಲ್ಲಿ ಚಿಣ್ಣರು, ದೊಡ್ಡವರ ಗಣಪನ ಮೂರ್ತಿಗಳನ್ನು ಮಣ್ಣಿನಿಂದ ತಾವೇ ತಯಾರಿಸಿ ಪೂಜೆ ಸಲ್ಲಿಸಿದ್ದಾರೆ. ಅವರ ನಡುವೆ ಗಣಪನ ಭಕ್ತ ಮಂಡಳಿಗಳ ಸದಸ್ಯರು ನಾಣ್ಯ, ತೆಂಗಿನಕಾಯಿ, ಬಿಸ್ಕತ್ತುಗಳಿಂದಲೂ ಮೂರ್ತಿಗಳನ್ನು ತಯಾರಿಸಿರುವುದು ವಿಶೇಷ. ಜಾತ್ರೆಗಳಲ್ಲಿ ಚಿಣ್ಣರ ಮನರಂಜಿಸುವ ಜಾಯಿಂಟ್‌ ವೀಲ್‌ನಲ್ಲಿ ಬಾಲ ಗಣಪನ ಮೂರ್ತಿಗಳೂ ನಗುತ್ತಿವೆ.

ತೆಂಗಿನಕಾಯಿ: ಗಣಪನ ಎತ್ತರ ಮತ್ತು ಗಾತ್ರದಲ್ಲಿ ಸದಾ ಆಗಸದೆಡೆಗೆ ನೋಡುವ ನಗರದ ನೆಹರು ಕಾಲೊನಿಯ ಸುಮುಖ ಮಿತ್ರಮಂಡಳಿಯ ಸದಸ್ಯರು 9 ಸಾವಿರ ತೆಂಗಿನ ಕಾಯಿಗಳನ್ನು ಬಳಸಿ 54 ಅಡಿ ಎತ್ತರದ ಗಣಪನಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.


ಬಳ್ಳಾರಿಯ ದೊಡ್ಡ ಮಾರುಕಟ್ಟೆ ರಸ್ತೆಯಲ್ಲಿ ಗೌರಿ ಪುತ್ರ ಮಿತ್ರ ಮಂಡಳಿಯ ಸದಸ್ಯರು ರಾಟೆಯ ತೊಟ್ಟಿಲುಗಳಲ್ಲಿ ಬಾಲ ಗಣಪನ ಬಹುರೂಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.

41 ದಿನಗಳ ಕಾಲ ಈ ಮೂರ್ತಿ ನಿರ್ಮಾಣದ ಕೆಲಸ ನಡೆದಿದೆ. ಇದೇ 23ರಂದು ತೆಂಗಿನಕಾಯಿಗಳ ಮಾರಾಟವೂ ನಡೆಯಲಿದ್ದು, ಪ್ರತಿಯೊಂದಕ್ಕೆ ₨ 50 ನಿಗದಿ ಮಾಡಲಾಗಿದೆ!

ಬಹುರೂಪಿ ಗಣಪ: ದೊಡ್ಡ ಮಾರುಕಟ್ಟೆ ರಸ್ತೆಯಲ್ಲಿ ಗೌರಿ ಪುತ್ರ ಮಿತ್ರ ಮಂಡಳಿಯ ಸದಸ್ಯರು ‘ಚಿಣ್ಣರ ಚಿಲಿಪಿಲಿ’ ಘೋಷಣೆ ಅಡಿ ಜಾಯಿಂಟ್‌ ವೀಲ್‌ನ ನಾಲ್ಕು ತೊಟ್ಟಿಲುಗಳೊಗೆ ಗಣಪನ ಬಹುರೂಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.

ಒಂದರಲ್ಲಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಮೂಷಿಕ, ಎರಡನೆಯದರಲ್ಲಿ, ಬಾಲಕೃಷ್ಣ, ಬಲರಾಮ ಮತ್ತು ಕುಚೇಲ, ಮೂರನೇಯದರದಲ್ಲಿ ಹನುಮಂತ, ವಾಲಿ ಮತ್ತು ಸುಗ್ರೀವ, ನಾಲ್ಕನೇಯದರಲ್ಲಿ ಚೋಟಾ ಭೀಂ, ಆತನ ಗೆಳೆಯರಾದ ರಾಜು ಮತ್ತು ಚುಟೂಪಿಯರ ಮೂರ್ತಿಗಳನ್ನು ಕೂರಿಸಲಾಗಿದೆ. ಕಲಾವಿದ ಗಣೇಶ ಚಿತ್ರಗಾರ ಅವರ ಕೈಯಲ್ಲಿ ಅರಳಿದ ಈ ತಿರುಗುವ ತೂಗು ತೊಟ್ಟಿಲಿಗೆ ಮಂಡಳಿಯು ₨ 60 ಸಾವಿರ ಖರ್ಚು ಮಾಡಿದೆ.

ಇದಲ್ಲದೆ ಈ ಮಂಡಳಿಯ ಸದಸ್ಯರು ಪ್ರತಿ ವರ್ಷವೂ ಹಬ್ಬದಲ್ಲಿ 250 ಸಸಿಗಳನ್ನು ವಿವಿಧ ಪ್ರದೇಶಗಳಲ್ಲಿ ನೆಡುತ್ತಾರೆ. ‘ಪೋಷಿಸುವ ಹೊಣೆ ಹೊರುವ ಜನರುಳ್ಳ ಸ್ಥಳಗಳಲ್ಲಿ ಮಾತ್ರ ಸಸಿ ನೆಡುತ್ತೇವೆ’ ಎಂದು ಮಂಡಳಿಯ ಪ್ರಶಾಂತ್‌ ತಿಳಿಸಿದರು.


ಬಳ್ಳಾರಿಯ ಕೌಲ್‌ಬಜಾರ್‌ ಗಣೇಶಗುಡಿ ಮುಂಭಾಗ ಬಿಸ್ಕತ್ತುಗಳಿಂದ ರೂಪಿಸಿದ ಗಣಪನ ಮೂರ್ತಿ.

ಬಿಸ್ಕತ್ತು
ನಗರದ ಕೌಲ್‌ಬಜಾರ್‌ ಗಣೇಶಗುಡಿ ಮುಂಭಾಗದ ಬಿಸ್ಕತ್ತುಗಳಿಂದ ರೂಪಿಸಿದ ಗಣಪನ ಮೂರ್ತಿಯೂ ವಿಶೇಷವಾಗಿದೆ. ಮೈತುಂಬ ಬಿಸ್ಕತ್ತುಗಳಿರುವ ಗಣಪನನ್ನು ನೋಡಿ ಚಿಣ್ಣರು ಖುಷಿ ಪಡುತ್ತಿದ್ದಾರೆ.

ಅದೇ ರೀತಿ, ತಿಲಕ್‌ ನಗರದಲ್ಲಿ ಹಳೆಯ ಮತ್ತು ಹೊಸ ನಾಣ್ಯಗಳಿಂದ ನಿರ್ಮಿಸಿರುವ ಗಣಪನ ಮೂರ್ತಿಯೂ ಗಮನ ಸೆಳೆಯುತ್ತಿದೆ. ಹತ್ತು ಪೈಸೆಯಿಂದ ಹತ್ತು ರೂಪಾಯಿವರೆಗಿನ ಮುಖಬೆಲೆಯ ನಾಣ್ಯಗಳನ್ನು ಬಳಸಿರುವುದು ಇಲ್ಲಿನ ವಿಶೇಷ.


ಬಳ್ಳಾರಿಯ ಬಂಡಿಮೋಟು ಪ್ರದೇಶದಲ್ಲಿ ಕ್ಯಾಮರಾಮನ್‌ ಗಣಪನ ಮೂರ್ತಿ


ಬಳ್ಳಾರಿಯ ಅನಂತಪುರ ರಸ್ತೆಯಲ್ಲಿ ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಸದಸ್ಯರು ತಿರುಪತಿ ತಿಮ್ಮಪ್ಪ ವೇಷಧಾರಿ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !