ಸೋಮವಾರ, ಆಗಸ್ಟ್ 26, 2019
20 °C
ಗಾಂಧಿಭವನದಲ್ಲಿ ನಾಲ್ಕು ದಿನ ಕ್ರೀಡಾ ಸಂಭ್ರಮ

ಜಿಲ್ಲಾ ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ಆಗಸ್ಟ್‌ 9ರಿಂದ

Published:
Updated:

ಬಳ್ಳಾರಿ: ಬಳ್ಳಾರಿ ಜಿಲ್ಲಾ ಕಬಡ್ಡಿ ಪ್ರಮೋಟರ್ಸ್‌ ಸಂಸ್ಥೆಯು ನಗರದ ಗಾಂಧಿಭವನದಲ್ಲಿ ಆಗಸ್ಟ್‌ 9ರಿಂದ 12ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲಾ ಮಟ್ಟದ ಪ್ರೋ ಕಬಡ್ಡಿ ಲೀಗ್‌ ಪಂದ್ಯಾವಳಿಯನ್ನು ಆಯೋಜಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್‌.ಎಸ್‌.ರಮೇಶ್‌ ತಿಳಿಸಿದರು.

‘ಎಂಟು ತಂಡಗಳಲ್ಲಿ 96 ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಜಿಲ್ಲೆಯ ಎಂಟು ಪ್ರಮುಖರು ತಂಡಗಳನ್ನು ತಲಾ ₨ 5 ಸಾವಿರಕ್ಕೆ ಖರೀದಿಸಿದ್ದಾರೆ. 9ರಂದು ಸಂಜೆ 4ಕ್ಕೆ ಗ್ರಾಮೀಣ ಶಾಸಕ ಬಿ,ನಾಗೇಂದ್ರ ಉದ್ಘಾಟಿಸಲಿದ್ದು, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ವೈ.ದೇವೇಂದ್ರಪ್ಪ ಕ್ರೀಡಾ ಧ್ವಜಾರೋಹಣ ಮಾಡಲಿದ್ದಾರೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾಲೀಕರು, ನಾಯಕರು: ಬಳ್ಳಾರಿ ಯೋಧರ ತಂಡವನ್ನು ರೆಡ್ಡಿ ಖರೀದಿಸಿದ್ದು, ಷಣ್ಮುಖ ನಾಯಕರಾಗಿದ್ದಾರೆ. ಮಂಜುನಾಥ ನಾಯಕರಾಗಿರುವ ಕೂಡ್ಲಿಗಿ ಟೈಗರ್ಸ್‌ ತಂಡವನ್ನು ಹೋಟೆಲ್‌ ಮಾಲೀಕ ಸೂರ್ಯಪ್ರಕಾಶ್‌ ಖರೀದಿಸಿದ್ದಾರೆ. ವಿ.ಪಂಪಾಪತಿ ನಾಯಕರಾಗಿರುವ ಕುರುಗೋಡು ಬುಲ್ಸ್‌ ತಂಡವನ್ನು ಪುರಸಭೆ ಸದಸ್ಯ ಎನ್‌.ನಾಗರಾಜ್‌,  ಹನುಮಪ್ಪ ನಾಯಕರಾಗಿರುವ ಕುಡುತಿನಿ ವಿಎಲ್‌ಸಿ ತಂಡವನ್ನು ಉದ್ಯಮಿ ಈರೇಂದ್ರಪ್ರಸಾದ್‌, ಪುರುಷೋತ್ತಮ ನಾಯಕರಾಗಿರುವ ದಬಾಂಗ್‌ ಎಚ್‌ಬಿಹಳ್ಳಿ ತಂಡವನ್ನು ಪಟ್ಟಣ ಪಂಚಾಯ್ತಿ ಸದಸ್ಯ ವಿಷ್ಣುನಾಯ್ಕ್‌ ಖರೀದಿಸಿದ್ದಾರೆ. ದೊಡ್ಡಲಿಂಗಪ್ಪ ನಾಯಕತ್ವದ ಕಂಪ್ಲಿ ವಾರಿಯರ್ಸ್‌ ತಂಡವನ್ನು ಕಾಂಗ್ರೆಸ್‌ ಮುಖಂಡ ಸಿ.ಆರ್‌.ಹನುಮಂತ, ವೆಂಕಟೇಶ ನಾಯಕರಾದ ಕೊಟ್ಟೂರಿನ ಕಿಲ್ಲಿಂಗ್‌ ಟೈಗರ್ಸ್‌ ತಂಡವನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೆಂಕಟೇಶ ನಾಯ್ಕ್‌ ಹಾಗೂ ಪ್ರದೀಪ್‌ ನಾಯಕರಾಗಿರುವ ವಿಜಯನಗರ ವೀರಾಸ್‌ ತಂಡವನ್ನು ಜೆ.ವಿನಾಯಕ ಖರೀದಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಒಟ್ಟು 32 ಪಂದ್ಯಾವಳಿಗಳು ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೂ ನಡೆಯಲಿವೆ. ಮೊದಲ ದಿನ ಎರಡು ಪಂದ್ಯ, ಎರಡು ಮತ್ತು ಮೂರನೇ ದಿನ ತಲಾ 12 ಹಾಗೂ ಕೊನೆ ದಿನ 6 ಪಂದ್ಯಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಪಂಪಾಪತಿ ಹಾಗೂ ಸಲಹೆಗಾರ ಕೆ.ವಿ.ಮುತ್ತೇಗೌಡ ಇದ್ದರು.

Post Comments (+)