ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಶ್ರೀರಾಮಲು, ಮೊಳಕಾಲ್ಮೂರಿಗೇನು ಸಂಬಂಧ?: ವಿ.ಎಸ್.ಉಗ್ರಪ್ಪ

Last Updated 16 ಅಕ್ಟೋಬರ್ 2018, 14:16 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಳ್ಳಾರಿಯ ಬಿ.ರಾಮುಲುಗೆ, ಬದಾಮಿ ಮತ್ತು ಮೊಳಕಾಲ್ಮೂರುಗೆ ಏನು ಸಂಬಂಧ, ಅವರೇಕೆ ಅಲ್ಲಿ ಹೋಗಿ ಚುನಾವಣೆಗೆ ಸ್ಪರ್ಧಿಸಿದರು’ ಎಂದು ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯ ಸಣ್ಣ ಫಕ್ಕೀರಪ್ಪ ರಾಯಚೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ನಂತರ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ನನ್ನ ಸ್ಥಳೀಯತೆಯನ್ನು ಪ್ರಶ್ನಿಸುವ ಬಿಜೆಪಿಯವರು ಇದೆಲ್ಲವನ್ನು ಮರೆಯಬಾರದು’ ಎಂದು ಪ್ರತಿಪಾದಿಸಿದರು.

‘ಎಲ್ಲಾ ಕಾಂಗ್ರೆಸ್ ಮುಖಂಡರು ನನ್ನ ಜತೆ ಚೆನ್ನಾಗಿದ್ದಾರೆ. ನಾನು ಈ ಮಣ್ಣಿನ ಮಗ, ಪಕ್ಕದ ಪಾವಗಡದವನು. ಅಲ್ಲಂ ವೀರಭದ್ರಪ್ಪ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಾನು ಕಾರ್ಯದರ್ಶಿಯಾಗಿದ್ದೆ- ಬಳ್ಳಾರಿ ಉಸ್ತುವಾರಿಯಾಗಿ ೧೦ ವರ್ಷಗಳ ಕಾಲ ಕೆಲಸ ಮಾಡಿದ್ದೆನೆ’ ಎಂದರು.

‘ನನ್ನ ಸಂಬಂಧಿಕರು ಇಲ್ಲಿ ಇದ್ದಾರೆ. ಇಲ್ಲಿಯೇ ಇದ್ದು ಕೆಲಸ ಮಾಡುವೆ, ಇಲ್ಲೆ ಉಳಿಯುವೆ, ಪಕ್ಷದ ನಿರ್ಣಯ ಪಾಲನೆ ಮಾಡುವೆ- ಉತ್ತಮ ಕೆಲಸ ಮಾಡಿ, ಲೋಕಸಭೆಯಲ್ಲಿ ಹೆಸರು ತರುವೆ’ ಎಂದರು.

‘ಇದು ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧೀ ನಡುವಿನ ಸ್ಪರ್ಧೆ ಮಾತ್ರ ಅಲ್ಲ. ಕಾಂಗ್ರೆಸ್, ಬಿಜೆಪಿ ನಡುವಿನ ಸ್ಪರ್ಧೆ. ಎರಡು ಭಿನ್ನ ಸಿದ್ಧಾಂತಗಳ ನಡುವಿನ ಸ್ಪರ್ಧೆ’ ಎಂದು ಹೇಳಿದರು.

ಶ್ರೀರಾಮುಲುಗೆ ನನ್ನ ಹೆಸರಿನಿಂದ ಮಾರ್ಕೆಟ್‌: ಡಿಕೆಶಿ

‘ಬಿ.ಶ್ರೀರಾಮುಲು ಅವರಿಗೆ ನನ್ನ ಹೆಸರು ಹೇಳಿದರೆ ಮಾರ್ಕೆಟ್‌ ಜಾಸ್ತಿಯಾಗುತ್ತದೆ ಎಂದು ಅವರು ನನ್ನ ಹೆಸರನ್ನು ಪದೇಪದೇ ಹೇಳುತ್ತಿದ್ದಾರೆ. ಪಾಪ ಅವರ ಮೇಲೆ ನಾನೇಕೆ ಜಗಳವಾಡಲಿ. ನನ್ನ ಹೆಸರು ಹೇಳಿದರೆ ಅವರಿಗೆ ಒಳ್ಳೆಯದಾಗುವುದಾರೆ ಹೇಳಲಿ ಬಿಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

‘ನಾನು ಯಾವ ಟ್ರಬಲ್‌ ಶೂಟರೂ ಅಲ್ಲ. ಪಕ್ಷ ಹೇಳಿದಂತೆ ಕೆಲಸ ಮಾಡುವ ಕಾರ್ಮಿಕ. ಶ್ರೀರಾಮುಲು ಅವರು ನನ್ನನ್ನು ಎಲ್ಲಿಗೆ ಕಳಿಸುತ್ತಾರೆ? ಅಥವಾ ಅವರು ಎಲ್ಲಿಗೆ ಹೋಗುತ್ತಾರೆ ಎಂಬುದು ಫಲಿತಾಂಶ ಪ್ರಕಟವಾಗುವ ನ.6ರಂದು ಗೊತ್ತಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ಕುರುಬ ಮಹಿಳೆಯ ಕಾಲಿಗೆ ಬಿದ್ದ ಶಾಂತಾ

ನಾಮಪತ್ರ ಸಲ್ಲಿಸುವ ಮುನ್ನ ಜೆ.ಶಾಂತಾ ಅವರು ಕುರುಬ ಸಮುದಾಯಕ್ಕೆ ಸೇರಿದ ಪಕ್ಷದ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲಾ ಅವರ ಕಾಲುಮುಟ್ಟಿ ನಮಸ್ಕರಿಸಿದರು.

ಬೆಳಿಗ್ಗೆ ನಗರದ ಕನದುರ್ಗಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿದ ಅವರು, ಶಶಿಕಲಾ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಹಾಲುಮತದವರ ಆಶೀರ್ವಾದ ಪಡೆದರೆ ಶುಭವಾಗುತ್ತದೆ ಎಂಬ ಕಾರಣಕ್ಕಾಗಿ ಅವರು ಹಾಗೆ ಮಾಡಿದರು ಎಂದು ಅವರ ನಿಕಟವರ್ತಿಗಳು ತಿಳಿಸಿದರು.

‘ಶ್ರೀರಾಮುಲು ನೀಚ ರಾಜಕಾರಣಿ’

‘ನಾಯಕನಾಗಿದ್ದು, ನಾಯಕ ಸಮುದಾಯದ ಹೆಣ್ಣುಮಕ್ಕಳನ್ನೇ ಜೈಲಿಗೆ ಕಳಿಸಿದ ಶ್ರೀರಾಮುಲು ಒಬ್ಬ ನೀಚ ರಾಜಕಾರಣಿ’ ಎಂದು ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ದೂರಿದರು. ಹೆಣ್ಣು ಮಕ್ಕಳು ಯಾರು ಎಂಬುದನ್ನು ಅವರು ಹೇಳಲಿಲ್ಲ.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಬೋಯಾಗಳಾದ ಶ್ರೀರಾಮುಲು ಕುಟುಂಬ ಇಲ್ಲಿಗೆ ಬಂದು ನಾಯಕರೆಂದು ಜಾತಿಪ್ರಮಾಣಪತ್ರ ಪಡೆದು ಜನರಿಗೆ ಮೋಸ ಮಾಡಿದೆ’ ಎಂದು ಆರೋಪಿಸಿದರು.

‘ಮೊಳಕಾಲ್ಮೂರಿಗೆ ಬರುವುದಿಲ್ಲ ಎಂದು ನನಗೆ ಹೇಳಿದ್ದರು. ಆದರೆ ಕೊನೆಯಲ್ಲಿ ಬಂದು ವಿಧಾನಸಭೆಗೆ ಚುನಾವಣೆಗೆ ನಿಂತರು’ ಎಂದು ಕಿಡಿಕಾರಿದರು.

ನಾಯಿ‌ ನನ್ಮಗನೆ ಎಂದ ಪರಮೇಶ್ವರನಾಯ್ಕ!

ಜಿಲ್ಲಾ‌ ಚುನಾವಣಾಧಿಕಾರಿ‌ ಕಚೇರಿಯೊಳಕ್ಕೆ ನೂಕುನುಗ್ಗಲಿನಲ್ಲಿ‌ ಬರುವಾಗ‌ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು ಕಾರ್ಯಕರ್ತರೊಬ್ಬರನ್ನು ನಾಯಿ ನನ್ಮಗನೆ ಎಂದು‌ ಬೈದರು.

ತೆರೆದ ವಾಹನದಲ್ಲಿ‌ ಅಭ್ಯರ್ಥಿ ವಿ.ಎಸ್.ಉಗ್ರಪ್ಪ‌ ಅವರೊಂದಿಗೆ ಬಂದ ಸಂದರ್ಭದಲ್ಲಿ ‌ ‌ನೂಕು‌ನುಗ್ಗಲು ತಳ್ಳಾಟ ‌ಏರ್ಪಟ್ಟಿತ್ತು.

ತಳ್ಳಾಟದ ನಡುವೆಯೇ ಬಂದ ‌ಶಾಸಕರು ತಮ್ಮ ಮುಂದೆ‌ ನಡೆಯುತ್ತಿದ್ದ ಕಾರ್ಯಕರ್ತರೊಬ್ಬರ ಬೆನ್ನ ಮೇಲೆ‌ ಸಿಟ್ಟಿನಿಂದ ‌ಹೊಡೆದು, ಬೈದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT