ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕತೆಯಲ್ಲೂ ಪ್ರಜಾಪ್ರಭುತ್ವ ತಂದದ್ದು ಬಸವಣ್ಣ: ಬಸವೇಶ್ವರಿ ಮಾತಾಜಿ

Last Updated 4 ಮೇ 2022, 6:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಧಾರ್ಮಿಕತೆಯಲ್ಲೂ ಪ್ರಜಾಪ್ರಭುತ್ವ ತಂದದ್ದು ಬಸವಣ್ಣನವರು. ಆ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು’ ಎಂದು ಉತ್ತರ ಕನ್ನಡ ಜಿಲ್ಲೆ ಅತ್ತಿವೇರಿ ಬಸವ ಯೋಗಾಶ್ರಮದ ಬಸವೇಶ್ವರಿ ಮಾತಾಜಿ ತಿಳಿಸಿದರು.

ಜಿಲ್ಲಾಡಳಿತದಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನ ಮೊಟ್ಟ ಮೊದಲ ಸಂಸತ್ತು ಅನುಭವ ಮಂಟಪ ಸ್ಥಾಪಿಸಿದ ಬಸವಣ್ಣನವರು ಅಲ್ಲಿ ಎಲ್ಲ ವರ್ಗದವರಿಗೆ ಪ್ರವೇಶ ಕಲ್ಪಿಸಿದರು. ಸಮಾಜದ ಕಟ್ಟಕಡೆಯವರು ಎಂದು ತಿರಸ್ಕಾರಕ್ಕೆ ಒಳಗಾಗಿದ್ದ ನಟುವರ ಜಾತಿಯ ಅಲ್ಲಮ ಪ್ರಭುದೇವರನ್ನು ಶೂನ್ಯ ಪೀಠಕ್ಕೆ ನೇಮಿಸಿದ್ದರು. ಜಾತಿಗಿಂತ ಅರ್ಹತೆ ಮುಖ್ಯ ಎಂದು ಬಸವಣ್ಣನವರು ಪ್ರಬಲವಾಗಿ ಪ್ರತಿಪಾದಿಸಿದ್ದರು. ಅದಕ್ಕಾಗಿ ಜೀವನದುದ್ದಕ್ಕೂ ಶ್ರಮಿಸಿದ್ದರು ಎಂದು ಹೇಳಿದರು.

ಮೇಲ್ಜಾತಿಯಲ್ಲಿ ಹುಟ್ಟಿದ್ದಕ್ಕೆ ಬಸವಣ್ಣನವರು ಜಿಗುಪ್ಸೆ ಪಟ್ಟಿದ್ದರು. ಮೇಲ್ಜಾತಿಯ ಜನ ಅನ್ಯ ಜಾತಿಯವರನ್ನು ನಡೆಸಿಕೊಳ್ಳುವ ರೀತಿಯಿಂದ ನೊಂದಿದ್ದರು. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಉಪನಯನ ಸಂಸ್ಕಾರ ಕೊಡಬೇಕೆಂದು ಹೇಳಿದ್ದರು. ಅದನ್ನು ಸಮಾಜ ಒಪ್ಪದಿದ್ದಾಗ ಮನೆ ತೊರೆದಿದ್ದರು. ಆಗ ಬಸವಣ್ಣನವರಿಗೆ ಕೇವಲ 9 ವರ್ಷ. ಮಹಿಳೆಯರ ಹಕ್ಕಿಗಾಗಿ ಬಾಲ್ಯದಲ್ಲೇ ಹೋರಾಟ ಆರಂಭಿಸಿದ್ದರು. ಸ್ತ್ರೀಕುಲ ಎಂದೂ ಅವರನ್ನು ಮರೆಯಬಾರದು ಎಂದರು.

ಅಸ್ಪೃಶ್ಯತೆ, ಆಹಾರ ಪದ್ಧತಿ, ಮೇಲು–ಕೀಳು ಹೀಗೆ ಪ್ರತಿಯೊಂದರಲ್ಲಿ ತಾರತಮ್ಯ ಇತ್ತು. ಅದನ್ನು ಬಸವಣ್ಣನವರು ಬಲವಾಗಿ ಖಂಡಿಸಿದ್ದರು. ಕೆಳವರ್ಗದವರಿಗೆ ದೇವಸ್ಥಾನದ ಪ್ರವೇಶ ನಿರಾಕರಿಸಿ, ಭಕ್ತ ಮತ್ತು ದೇವರ ನಡುವಿನ ದಲ್ಲಾಳಿಗಳನ್ನು ದೂರ ಇರಿಸಲು ಇಷ್ಟಲಿಂಗ ಕೊಟ್ಟರು. ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ ಸೇರಿದಂತೆ ನೂರಾರು ಜನರಿಗೆ ಧಾರ್ಮಿಕ ಸಂಸ್ಕಾರ ನೀಡಿದರು. ಪ್ರಧಾನಿ ಹುದ್ದೆಗೇರಿದ ಬಸವಣ್ಣನವರು ಕೆಳಜಾತಿಯ ಹಡಪದ ಅಪ್ಪಣ್ಣನವರನ್ನು ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡು ಉನ್ನತ ಸ್ಥಾನಮಾನ ನೀಡಿದ್ದರು ಎಂದು ತಿಳಿಸಿದರು.

ಎಲ್ಲ ರೀತಿಯ ಪ್ರಗತಿಪರ ಚಿಂತನೆಗಳನ್ನು ವಚನಗಳ ಮೂಲಕ ಪ್ರತಿಪಾದಿಸಿದ ಬಸವಣ್ಣನವರು ಪ್ರಧಾನಿಯಿದ್ದಾಗ, ಪ್ರಧಾನಿಗೆ ಸಿಗುವ ಅವಕಾಶಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು ಎಂದು ಹೇಳಿದ್ದರು. ಅಂತಹ ಬಸವಣ್ಣನ ನಾಡಲ್ಲಿ ಇಂದು ಲಂಚ, ಭ್ರಷ್ಟಾಚಾರ ಮೇರೆ ಮೀರಿದೆ ಎಂದು ವಿಷಾದಿಸಿದರು.

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಮಾತನಾಡಿ, ಕಾಯಕವೇ ಕೈಲಾಸ ಎಂದು ನಾವೆಲ್ಲರೂ ಮಾತಾಡುತ್ತೇವೆ. ಅದರಂತೆ ನಡೆದುಕೊಳ್ಳಬೇಕು. ಬಸವಣ್ಣನವರು ಹೇಳಿದ ತತ್ವಗಳು ಅಮೂಲ್ಯವಾದುದು. ಅವುಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್‌. ಆನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣ್ ರಾವ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ವಿಶ್ವಜೀತ ಮೆಹ್ತಾ, ಡಿಡಿಪಿಐ ಕೊಟ್ರೇಶ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್.ವಿ. ಶರಣು ಸ್ವಾಮಿ, ಬಸವ ಬಳಗದ ಅಧ್ಯಕ್ಷ ಕಿರಣ್‌, ಅಕ್ಕನ ಬಳಗದ ಅಧ್ಯಕ್ಷೆ ಅರುಣಾ ಶಿವಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT