ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಮುಕ್ತ ಮಾಡಲು ಪಣ ತೊಡಿ

ಜಿಲ್ಲಾಧಿಕಾರಿ ಕಚೇರಿಯಿಂದ ಜಾಗೃತಿ ಜಾಥಾ, ವಿವಿಧೆಡೆ ಸಸಿ ನೆಟ್ಟು ಪರಿಸರ ದಿನ ಆಚರಣೆ
Last Updated 6 ಜೂನ್ 2018, 9:42 IST
ಅಕ್ಷರ ಗಾತ್ರ

ಮಂಡ್ಯ: ‘ಪರಿಸರ ಸಂರಕ್ಷಣೆ ಮೂಲ ಕರ್ತವ್ಯವಾಗಬೇಕು. ನಮ್ಮ ಹಿಂದಿನ ಪೀಳಿಗೆ ಕೊಟ್ಟು ಪರಿಸರವನ್ನು ಕಾಪಾಡಿ ಶುದ್ಧವಾಗಿ ಮುಂದಿನ ಪೀಳಿಗೆಗೆ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಹೇಳಿದರು.

ವಿಶ್ವಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಎಲ್ಲರೂ ತಮ್ಮ ಮನೆಗಳ ಮುಂದೆ ಸಸಿ ನೆಡುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು. ಸಿಮೆಂಟ್‌ ಕಾಡಿನಿಂದ ಹೊರಬಂದು ಹಸಿರು ಕಾಡು ನಿರ್ಮಿಸಲು ಎಲ್ಲರೂ ಪಣ ತೊಡಬೇಕು. ಪ್ಲಾಸ್ಟಿಕ್‌ ತಡೆಗಟ್ಟಿ ಎಂಬುದು ಈ ಬಾರಿ ಪರಿಸರ ದಿನಾಚರಣೆಯ ಘೋಷಣೆಯಾಗಿದೆ. ಅದರಂತೆ ಇಂದಿನಿಂದಲೇ ಎಲ್ಲರೂ ಪ್ಲಾಸ್ಟಿಕ್‌ ಬಳಕೆ ಮಾಡುವುದನ್ನು ತಡೆಗಟ್ಟಬೇಕು’ ಎಂದು ಹೇಳಿದರು.

‘ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧಿಸಿದ್ದರೂ ಎಲ್ಲೆಡೆ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಗಾರಿ ಪ್ಲಾಸ್ಟಿಕ್‌ ತ್ಯಜಿಸಬೇಕು. ಮನೆಯಿಂದ ಅಂಗಡಿಗೆ ತೆರಳುವಾಗ ಜೊತೆಯಲ್ಲಿ ಶಾಶ್ವತ ಬಳಕೆಯ ಬ್ಯಾಗ್‌ ಇಟ್ಟುಕೊಳ್ಳಬೇಕು. ಇದರಿಂದ ಪ್ಲಾಸ್ಟಿಕ್‌ ಬ್ಯಾಗ್‌ಗಳ ಮೇಲೆ ಅವಲಂಬಿಸುವುದನ್ನು ತಡೆಗಟ್ಟಬಹುದು’ ಎಂದು ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೆ.ಎಲ್‌.ಸವಿತಾ, ಡಿಸಿಎಎಫ್‌ ಶಿವರಾಜು, ಚಂದ್ರಶೇಖರ್ ಇದ್ದರು.

ತಹಶೀಲ್ದಾರ್‌ ಕಚೇರಿ: ‘ಮಂಡ್ಯ ತಾಲೂಕನ್ನು ಪ್ಲಾಸ್ಟಿಕ್ ಮುಕ್ತ ತಾಲ್ಲೂಕನ್ನಾಗಿ ನಿರ್ಮಿಸಲು ಪ್ರತಿಯೊಬ್ಬರೂ ಪಣ ತೊಡಬೇಕು’ ಎಂದು ತಹಶೀಲ್ದಾರ್ ಎಲ್. ನಾಗೇಶ್ ತಿಳಿಸಿದರು. ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಅವರ ಸಹಕಾರದಿಂದ ಎಲ್ಲೆಡೆ ಗಿಡ ನೆಡುವ ಕಾರ್ಯಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಿಶ್ವ ಪರಿಸರ ದಿನಾಚರಣೆಯಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು. ಉಪವಿಭಾಗಾಧಿಕಾರಿ ಚಿದಾನಂದ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣಗೌಡ, ಕಂದಾಯ ನಿರೀಕ್ಷಕರಾದ ಮಹೇಶ್, ಮಹೇಂದ್ರ, ಶಂಕರ್ ಇದ್ದರು.

ಪರಿಸರ ಕಾಳಜಿ ಇರಲಿ: ‘ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಪಣತೊಡಬೇಕಿದೆ’ ಎಂದು ಮೈಸೂರು ಆಕಾಶವಾಣಿ ಕಾರ್ಯಕ್ರಮಾಧಿಕಾರಿ ಎಂ.ಜೆ.ಶಿವಸ್ವಾಮಿ ಹೇಳಿದರು.

ನಗರದ ಗುತ್ತಲು ಬಡಾವಣೆಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಪರಿಸರ ಉಳಿವಿಗೆ ಮುಂದಾಗಬೇಕು. ವಿದ್ಯಾರ್ಥಿ ದೆಸೆಯಲ್ಲೇ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ಉತ್ತಮ ವಾತಾವರಣಕ್ಕೆ ನಾವು ಸಾಕ್ಷಿಯಾಗಬೇಕು’ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ರಮೇಶ್ ಮಾತನಾಡಿ ‘ಪ್ಲಾಸ್ಟಿಕ್ ನಿರ್ಮೂಲ ಮಾಡುವುದೇ ನಮ್ಮೆಲ್ಲರ ಧ್ಯೇಯವಾಗಬೇಕು. ಪ್ರತಿಯೊಬ್ಬರೂ ಜಾಗೃತರಾಗಿ, ನಿತ್ಯ ಬಳಸುವ ವಸ್ತುಗಳಲ್ಲಿ ಮತ್ತು ಸಾಗಣೆ ಮಾಡುವ ಕೈಚೀಲಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು’ ಎಂದು ಹೇಳಿದರು.

ವೇದಿಕೆಯಲ್ಲಿ ಎನ್.ವೈ.ಕೆ ಸಮನ್ವಯಾಧಿಕಾರಿ ಸಿದ್ದರಾಮಪ್ಪ, ಪರಿಸರ ಇಲಾಖೆ ಅಧಿಕಾರಿ ಸವಿತಾ, ಅರಣ್ಯ ಅಧಿಕಾರಿ ಚಂದ್ರಶೇಖರ್, ಹರೀಶ್, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ಅನುಪಮಾ, ಉಪನ್ಯಾಸಕ ಡಾ.ಮನುಕುಮಾರ್, ಹನುಮಂತಯ್ಯ, ಮೃತ್ಯುಂಜಯ, ಗೀತಾ, ದಾಕ್ಷಾಯಿಣಿ ಇದ್ದರು.

ಮೊಳೆಕೊಪ್ಪಲು ಶಾಲೆ: ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಯ, ಮೊಳೆಕೊಪ್ಪಲು ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಆರ್‌ಪಿಗಳಾದ ಮಲ್ಲೇಶ್‌ಗೌಡ, ದಾಸೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಕೇಗೌಡ, ಮುಖ್ಯಶಿಕ್ಷಕ ಚಂದ್ರಶೇಖರ್‌ ಹಾಜರಿದ್ದರು.

ಮಾಂಡವ್ಯ ಕಾಲೇಜು: ‘ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿದ್ದು, ಇದು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳಿಗೂ ಹಾನಿಯನ್ನು ಉಂಟುಮಾಡುತ್ತದೆ. ಪ್ಲಾಸ್ಟಿಕ್ ತ್ಯಾಜ್ಯದ ದ್ವೀಪ ನಿರ್ಮಾಣವಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ಸತ್ಯಪ್ರಕಾಶ್ ಮೂರ್ತಿ ಹೇಳಿದರು. ಮಂಡ್ಯ ನಗರದ ಮಾಂಡವ್ಯ ಪಿಯು ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಬಿ.ಎಸ್.ಬೋರೇಗೌಡ, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾಶಿವಲಿಂಗಯ್ಯ, ಪ್ರಚಾರ್ಯ ಪ್ರೊ.ಎಸ್.ಚಂದ್ರಾಜು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ ಹಾಜರಿದ್ದರು.

350 ಸಸಿ ನೆಟ್ಟ ಯುವಕ ಮಿತ್ರರು

ಮಳವಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ವಡ್ಡರಹಳ್ಳಿ ಬಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹೊರ ಆವರಣದಲ್ಲಿ ಒಂದೇ ದಿನ ವಿವಿಧ ಬಗೆಯ 350 ಸಸಿಗಳನ್ನು ಶಾಲಾ ಆವರಣದಲ್ಲಿ ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಮಳವಳ್ಳಿ ಯುವಕ ಮಿತ್ರರು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅರಣ್ಯ ಮತ್ತು ಪೊಲೀಸ್‌ ಇಲಾಖೆ, ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಸಸಿ ನೆಡಲಾಯಿತು.

ತಹಶೀಲ್ದಾರ್ ಚಂದ್ರಮೌಳಿ, ರಾಮನಗರದ ಅರೆಹಳ್ಳಿಯ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ ಚಾಲನೆ ನೀಡಿದರು. ಜಿ.ಪಂ ಸದಸ್ಯರಾದ ಸುಷ್ಮಾರಾಜು, ಸುಜಾತಾ ಸುಂದ್ರಪ್ಪ, ರವಿ, ತಾ.ಪಂ ಸದಸ್ಯ ವಿ.ನಾಗೇಶ್, ಜೆಡಿಎಸ್ ಮುಖಂಡ ನಂದಕುಮಾರ್, ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್, ಕಸ್ತೂರಿ ಜನಪರ ವೇದಿಕೆ ಶ್ರೀನಿವಾಸ್, ಸಾಲುಮರದ ನಾಗರಾಜು, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು, ಸಿದ್ದಾರ್ಥ, ಪೊಲೀಸ್‌ ಇಲಾಖೆಯ ಪ್ರಭು, ಗುಂಡ, ಪ್ರಾಂಶುಪಾಲ ಶಿವಕುಮಾರ್, ವಕೀಲರಾದ ಶ್ರೀಕಂಠಸ್ವಾಮಿ, ಮಹೇಶ್‌ ಪಾಲ್ಗೊಂಡರು. ಸಾಲು ಮರದ ನಾಗರಾಜು ನೇತೃತ್ವದಲ್ಲಿ ರಾಗಿಬೊಮ್ಮನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಸಸಿ ನೆಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT