ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಜನಪ್ರತಿನಿಧಿಗಳಿಗೆ ಸಕ್ಕರೆ ಕಾರ್ಖಾನೆ ಆರಂಭಿಸುವ ಮನಸ್ಸಿಲ್ಲ

ಶಾಸಕ, ಸಚಿವರ ಕಾರ್ಯವೈಖರಿಗೆ ರೈತ ಸಂಘದ ಮುಖಂಡ ಕಾಳಿದಾಸ್‌ ಅಸಮಾಧಾನ
Last Updated 7 ಡಿಸೆಂಬರ್ 2018, 9:22 IST
ಅಕ್ಷರ ಗಾತ್ರ

ಹೊಸಪೇಟೆ: ‘ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಿರುಗುಪ್ಪ ಹಾಗೂ ನಗರದ ಇಂಡಿಯನ್‌ ಶುಗರ್‌ ರಿಫೈನರಿ (ಐ.ಎಸ್‌.ಆರ್‌.) ಸಕ್ಕರೆ ಕಾರ್ಖಾನೆಗಳು ಆರಂಭವಾಗುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ರಾಜ್ಯ ಸಮಿತಿ ಸದಸ್ಯ ಜೆ.ಎನ್‌. ಕಾಳಿದಾಸ್‌ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಖಾನೆಗಳು ಆರಂಭವಾಗದ ಕಾರಣ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ದೊಡ್ಡ ರೈತರು ನೆರೆಯ ಜಿಲ್ಲೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ. ಆದರೆ, ಸಣ್ಣ ಹಾಗೂ ಅತಿ ಸಣ್ಣ ರೈತರ ಗೋಳು ಯಾರು ಕೇಳುವವರು ಇಲ್ಲದಂತಾಗಿದೆ’ ಎಂದು ಪರಿಸ್ಥಿತಿ ವಿವರಿಸಿದರು.

‘ಸಿರುಗುಪ್ಪ ಕಾರ್ಖಾನೆಯವರು ಕಬ್ಬು ಬೆಳೆಯಲು ಜುಲೈ ವರೆಗೆ ರೈತರಿಗೆ ಬೀಜ ಕೊಟ್ಟಿದ್ದಾರೆ. ಈಗ ಕಾರ್ಖಾನೆ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಕೂಡ ಕಾರ್ಖಾನೆ ಪರ ವಕಾಲತ್ತು ಮಾಡುತ್ತಿದ್ದಾರೆ. ಅವರಿಗೆ ರೈತರ ಹಿತ ಬೇಕಿಲ್ಲ. ಹೀಗಾಗಿ ಕಾರ್ಖಾನೆ ಆರಂಭಗೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ’ ಎಂದರು.

‘ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ₹8ರಿಂದ ₹10 ಕೋಟಿ ಬಾಕಿ ಉಳಿಸಿಕೊಂಡಿದೆ. ರಾಜ್ಯದ ಇತರೆ ಕಾರ್ಖಾನೆಗಳಿಗೆ ಹೋಲಿಸಿದರೆ ಈ ಬಾಕಿ ಮೊತ್ತ ದೊಡ್ಡದೇನಲ್ಲ. ಕೆಲ ಕಾರ್ಖಾನೆಗಳು ₹40ರಿಂದ ₹50 ಕೋಟಿ ಬಾಕಿ ಉಳಿಸಿಕೊಂಡಿವೆ. ಹೀಗಿದ್ದರೂ ಆ ಕಾರ್ಖಾನೆಗಳು ನಡೆಯುತ್ತಿವೆ. ಪ್ರತಿ ಟನ್‌ ಕಬ್ಬಿಗೆ ₹3,000 ಸಾವಿರಕ್ಕೂ ಅಧಿಕ ಬೆಲೆ ಕೊಡಲಾಗುತ್ತಿದೆ. ಹೀಗಿದ್ದರೂ ಐ.ಎಸ್‌.ಆರ್‌. ಕಾರ್ಖಾನೆ ಆರಂಭಿಸುತ್ತಿಲ್ಲ. ಜನಪ್ರತಿನಿಧಿಗಳಿಗೆ ಕಾರ್ಖಾನೆ ಆರಂಭಿಸುವ ಮನಸ್ಸು ಇದ್ದರೂ ಸಹ ಅದಕ್ಕೆ ಮುಂದಾಗುತ್ತಿಲ್ಲ’ ಎಂದು ಹೇಳಿದರು.

‘ಅಧಿಕಾರಕ್ಕೆ ಬಂದ ನಂತರ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಈಗ ಸಾಲ ಮನ್ನಾಕ್ಕೆ ಅನೇಕ ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಅವರ ಷರತ್ತುಗಳ ಪಟ್ಟಿ ನೋಡಿದರೆ ಒಬ್ಬ ರೈತನ ಸಾಲ ಕೂಡ ಮನ್ನಾ ಆಗುವುದಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಇದೇ 10ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯಿಂದ ಇದೇ 9ರಂದು ಮಧ್ಯಾಹ್ನ 1ಕ್ಕೆ ಬಳ್ಳಾರಿ ರೈಲು ನಿಲ್ದಾಣದ ಮೂಲಕ ಬೆಳಗಾವಿಗೆ ಪಯಣ ಬೆಳೆಸಲು ಸಿದ್ಧರಾಗಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಬೆಳಗಾವಿಯ ಹೋರಾಟದ ನಂತರ ಹಂತ ಹಂತವಾಗಿ ಐ.ಎಸ್.ಆರ್‌. ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತೇವೆ. ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮುಂದುವರಿಸುತ್ತೇವೆ. ಈ ಕುರಿತು ಎಲ್ಲ ರೈತ ಸಂಘದ ಮುಖಂಡರೊಂದಿಗೆ ಚರ್ಚಿಸಿ, ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು. ತುಂಗಭದ್ರಾ ಕಾಲುವೆಗಳಿಗೆ ರಾಜ್ಯ ಹಾಗೂ ಆಂಧ್ರ ಪ್ರದೇಶದ ಪಾಲಿನ ನೀರು ಒಟ್ಟಿಗೆ ಬಿಡುಗಡೆ ಮಾಡಬೇಕು. ಹೀಗೆ ಮಾಡಿದರಷ್ಟೇ ಕಾಲುವೆ ಕೊನೆಯ ಭಾಗದ ರೈತರಿಗೆ ನೀರು ಸಿಗಲು ಸಾಧ್ಯ’ ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ, ಕಂಪ್ಲಿ ಘಟಕದ ಅಧ್ಯಕ್ಷ ಗಂಗಾಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT