ಒಣಗುತ್ತಿದೆ ವಿಳ್ಯದೆಲೆ ತೋಟ

ಮಂಗಳವಾರ, ಏಪ್ರಿಲ್ 23, 2019
31 °C
ರೋಗ ಬಾಧೆ– ಧಾರಣೆ ಕುಸಿತದಿಂದ ಆತಂಕಕ್ಕೆ ಸಿಲುಕಿದ ರೈತ

ಒಣಗುತ್ತಿದೆ ವಿಳ್ಯದೆಲೆ ತೋಟ

Published:
Updated:
Prajavani

ಕೂಡ್ಲಿಗಿ (ಬಳ್ಳಾರಿ): ತೀವ್ರ ಬರಗಾಲ, ನೀರಿನ ಅಭಾವ, ಒಣಗುತ್ತಿರುವ ವೀಳ್ಯದೆಲೆ ಬಳ್ಳಿಗಳು ಹಾಗೂ ಧಾರಣೆಯ ಕುಸಿತದಿಂದ ತಾಲ್ಲೂಕಿನ ವೀಳ್ಯದೆಲೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ 250 ಎಕರೆಯಷ್ಟು ತೋಟಗಳಿದ್ದು, ಚಿಕ್ಕಜೋಗಿಹಳ್ಳಿ, ಭೀಮಸಮುದ್ರ, ಚಿರಿಬಿ, ಗಂಗಮ್ಮನಹಳ್ಳಿ, ರಾಂಪುರ, ಗುಂಡುಮುಣುಗು, ಕಡೇಕೊಳ, ಕುರಿಹಟ್ಟಿ, ಓಬಿಶೆಟ್ಟಿಹಳ್ಳಿ, ಮಡಗಲಕಟ್ಟೆ, ರಂಪುರ, ಕಕ್ಕುಪ್ಪಿ ಸೇರಿದಂತೆ ಅನೇಕ ಗ್ರಾಮಗಳು ವೀಳ್ಯದೆಲೆಗೆ ಹೆಸರಾಗಿವೆ. ಲಾಭದಾಯದ ಬೆಳೆಯಾಗಿದ್ದ ವೀಳ್ಯದೆಲೆ ಕೃಷಿ ಇಂದು ಅನೇಕ ಕಾರಣಗಳಿಂದ ರೈತರನ್ನು ಸಂಕಷ್ಟಕ್ಕೆ ದೂಡಿವೆ.

ಒಂದು ತೋಟದಲ್ಲಿ ಮುಂಡ ಬೆಳಸಿ, ಬಳ್ಳಿ ಹಾಕಲು ಕನಿಷ್ಟ ಎರಡು ವರ್ಷ ಬೇಕು. ಈ ರೀತಿ ಒಂದು ಎಕರೆ ತೋಟ ಮಾಡಲು ₹1 ಲಕ್ಷ ವೆಚ್ಚ ಮಾಡಬೇಕು. ಇಷ್ಟೆಲ್ಲ ಮಾಡಿದ ಮೇಲೆ ಒಂದೇ ತಿಂಗಳು ನೀರಿಲ್ಲದ್ದಿದ್ದರೆ ಎಲ್ಲಾ ಓಣಗುತ್ತವೆ.

ನಾಲ್ಕೈದು ವರ್ಷಗಳಿಂದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆ ಬೀಳದೆ ಕೊಳವೆ ಬಾವಿಗಳು ಬತ್ತಿದ್ದು, ಎಲೆ ತೋಟಗಳಿಗೂ ಸಂಕಷ್ಟ ಎದುರಾಗಿದೆ. ಕೆಲ ರೈತರು ಟ್ಯಾಂಕರ್ ಮೂಲಕ ನೀರು ಹಾಕಿ ಬೆಳೆ ಉಳಿಸಿಕೊಳ್ಳುವ ಹರ ಸಹಾಸ ಮಾಡುತ್ತಿದ್ದಾರೆ. ನೀರಿಲ್ಲದೆ ಎಲೆ ಬಳ್ಳಿ ಬೆಳವಣಿಗೆಯೂ ಕುಂಠಿತಗೊಂಡಿದ್ದು, ಇಳುವರಿಯೂ ಕೈಕೊಟ್ಟಿದೆ.

‘ಎರಡು ವರ್ಷದ ಹಿಂದೆಯಷ್ಟೆ ಸುಮಾರು ₹30 ಸಾವಿರ ವೆಚ್ಚ ಮಾಡಿ 700 ಕುಣಿಯಲ್ಲಿ ಮುಂಡ ಬೆಳೆಸಿ, ಎಲೆ ಬಳ್ಳಿ ನಾಟಿ ಮಾಡಿದ್ದೆ.  ಬೇಸಿಗೆಯಲ್ಲಿ ನೀರಿಲ್ಲದೆ ಬಳ್ಳಿ ಒಣಗಿದೆ. ಮುಂಡವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದ್ದು, ಹೊಸ ಕೊಳವೆ ಬಾವಿ ಕೊರೆಸಿದರೂ ನೀರು ಬಂದಿಲ್ಲ, ಏನು ಮಾಡಬೇಕೆಂದು ತಿಳಿಯುತ್ತಿಲ್ಲ’ ಎಂದು ಭೀಮಸಮುದ್ರ ಗ್ರಾಮದ ರೈತ ಕೆ. ಜಗದೀಶ್ ಅಸಹಾಯಕತೆ ವ್ಯಕ್ತಪಡಿಸಿದರು.

‘₹6 ಸಾವಿರಕ್ಕೂ ಹೆಚ್ಚು ಮೌಲ್ಯ ಹೊಂದಿದ್ದ ಒಂದು ಪೆಂಡೆ ವೀಳ್ಯದೆಲೆ ಈಗ ₹3 ಸಾವಿರಕ್ಕೆ ಬಂದು ನಿಂತಿದೆ. ಒಂದು ಎಕರೆಗೆ 15ರಿಂದ 20 ಪೆಂಡೆ ಎಲೆ ಬೆಳೆಯುತ್ತಿದ್ದ ರೈತ ಈ ಬಾರಿ 10-12 ಪೆಂಡೆಯಷ್ಟು ಮಾತ್ರ ಎಲೆ ಬೆಳೆಯುವಂತಾಗಿದೆ. ತೋಟದಲ್ಲಿ ಕೆಲಸ ಮಾಡುವವರಿಗೆ ನಿತ್ಯ ₹300ರಿಂದ ₹350 ಕೂಲಿ ನೀಡಬೇಕು. ತೋಟಕ್ಕೆ ಕೊಟ್ಟಿಗೆ ಗೊಬ್ಬರ ಮಾತ್ರ ಹಾಕಬೇಕಾಗಿದ್ದು, ಅದರ ದರವೂ ಕೈಗೆಟುದಂತಾಗಿದೆ’ ಎಂದು ಬೆಳೆಗಾರರಾದ ಬಸವರಾಜ್, ಅಜ್ಜಯ್ಯ, ಕೆ.ಎಂ. ಶಿವರಾಜ್ ಹೇಳಿದರು.

ಮಾರಾಟ ಕೇಂದ್ರ

ತಾಲ್ಲೂಕಿನ ಕಾನಹೊಸಹಳ್ಳಿಯಲ್ಲಿ ಮಾತ್ರ ವೀಳ್ಯದೆಲೆ ಮಾರಾಟ ಮಾಡುವ ಕೇಂದ್ರವಿದೆ. ನೂರಾರು ಎಕರೆಯಲ್ಲಿ ಬೆಳೆದ ವೀಳ್ಯದೆಲೆಯನ್ನು ಅನೇಕ ರೈತರು ಚಿತ್ರದುರ್ಗ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡುತ್ತಾರೆ. ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಸಾಗಣೆ ವೆಚ್ಚವೂ ಅವರಿಗೆ ಮತ್ತಷ್ಟು ಪೆಟ್ಟು ಕೊಟ್ಟಿದೆ.

‘ಉತ್ತಮ ಗುಣಮಟ್ಟದ ಎಲೆ ತೆಗೆದುಕೊಂಡು ಹೋದರೂ ದಲ್ಲಾಳಿಗಳ ಮಧ್ಯಸ್ಥಿಕೆಯಿಂದ ಆದಾಯಕ್ಕೆ ಕತ್ತರಿ ಬೀಳುತ್ತಿದೆ’ ಎಂಬುದು ರೈತರ ಸಂಕಟ.

ಕಾಡುವ ಕರಿದಳ..

‘ಎಲೆ ಬಳ್ಳಿಗೆ 'ಕರಿದಳ' ರೋಗ ಸಾಮಾನ್ಯವಾಗಿದ್ದು, ಬಳ್ಳಿಯ ದಿಂಡು ಕಪ್ಪಾಗಿ ಕ್ರಮೇಣ ಒಣಗಿ ಹೋಗುತ್ತದೆ. ಈ ರೋಗ ಕಾಣಿಸುತ್ತಿದ್ದಂತೆ ಅನೇಕ ಬಗೆಯ ಔಷಧಿಗಳನ್ನು ಸಿಂಪಡಣೆ ಮಾಡಿದ್ದರೂ ಹತೋಟಿಗೆ ಬರುತ್ತಿಲ್ಲ. ತೋಟಗಾರಿಗೆ ಇಲಾಖೆಯ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು’ ಎನ್ನುತ್ತಾರೆ ರೈತ ಶಿವರಾಜ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !