ಮಂಗಳವಾರ, ಆಗಸ್ಟ್ 20, 2019
27 °C
ನಗರಕ್ಕೆ ಸೌಕರ್ಯ ಬೇಕೋ? ಸೌಂದರ್ಯ ಬೇಕೋ? ಎಂಬ ಜಿಜ್ಞಾಸೆಯಲ್ಲಿ ನಗರ ಜನತೆ

ಹೊಟ್ಟೆಗೆ ಹಿಟ್ಟಿಲ್ಲ; ಜುಟ್ಟಿಗೆ ಮಲ್ಲಿಗೆ ಹೂವು ಬೇಕೆ...?!

Published:
Updated:
Prajavani

ಬಳ್ಳಾರಿ: ‘ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯಿ ಬಡ್ಕೋಬೇಕು’ ಎಂಬುದು ನಾಣ್ಣುಡಿ. ಅಲಂಕಾರದಲ್ಲಿ ವಿಜೃಂಭಿಸುವ ವ್ಯಕ್ತಿಯ ಬಾಳು ಅದಕ್ಕೆ ತದ್ವಿರುದ್ಧವಾಗಿ, ಸೌಕರ್ಯವಿಲ್ಲದೆ ಸೊರಗಿರುತ್ತದೆ ಎಂದು ಇದರ ಅರ್ಥ.

ಬಳ್ಳಾರಿ ನಗರವೂ ಇತ್ತೀಚೆಗೆ ಈ ನಾಣ್ಣುಡಿಗೆ ಸರಿಹೊಂದುವ ರೀತಿಯಲ್ಲೇ ಕಾಣುತ್ತಿದೆ ಎಂಬುದು ಬಹುತೇಕರ ಅಭಿ
ಪ್ರಾಯ. ನಗರಕ್ಕೆ ಸೌಕರ್ಯ ಮೊದಲು ಕಲ್ಪಿಸಬೇಕೋ? ಅಥವಾ ಅದನ್ನು ಚೆಂದ ಗಾಣಿಸಬೇಕೋ ಎಂಬ ವಿಷಯದಲ್ಲಿ ಪಾಲಿಕೆ ಇನ್ನೂ ಗಂಭೀರವಾಗಿ ಚಿಂತಿಸಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳಿವೆ.

ವರ್ಗಾವಣೆಯಾದ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಅವರು ಎರಡು ವರ್ಷಗಳ ಹಿಂದೆ ನಗರದಲ್ಲಿ ಗೋಡೆ ಚಿತ್ರಕಲಾ ಉತ್ಸವವವನ್ನು ಆಯೋಜಿಸಿದ ಬಳಿಕ ನಗರದ ಸಾರ್ವಜನಿಕ ಕಟ್ಟಡದ ಗೋಡೆಗಳ ಮೇಲೆ ಬಣ್ಣಗಳೆದ್ದವು. ನಂತರ ಮಸುಕಾದವು.

ಈಗ, ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದು ಮುಂದುವರಿದಿರುವ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ನಗರದ ಕನಕದುರ್ಗಮ್ಮ ಗುಡಿ ಸೇತುವೆ ಎರಡೂ ಬದಿಯ ಗೋಡೆಗಳು ಹಾಗೂ ರೈಲು ನಿಲ್ದಾಣ ಕಾಂಪೌಂಡ್‌ ಗೋಡೆಗೆ ರಜೆ ದಿನಗಳಲ್ಲಿ ಮುಂಜಾನೆಯಿಂದ ಸಂಜೆವರೆಗೂ ಜನರೊಂದಿಗೆ ಬಣ್ಣ ಬಳಿಯುವ ಮೂಲಕ ಮತ್ತೆ ಚೆಂದಗಾಣಿಸುವ ಪ್ರಯತ್ನ ಮಾಡಿದ್ದಾರೆ.

ಇದು ಮೇಲ್ನೋಟಕ್ಕೆ ಶ್ಲಾಘನೀಯ ಕಾರ್ಯವೇ. ಆದರೆ, ನಗರದ ಸಮಸ್ಯೆಗಳನ್ನು ಒಮ್ಮೆ ನೆನಪಿಸಿಕೊಂಡರೆ, ಸೌಂದರ್ಯಕ್ಕಿಂತ ಸೌಕರ್ಯವೇ ಮುಖ್ಯವಾಗಿ ಬೇಕಿತ್ತಲ್ಲವೇ ಎಂದೆನಿಸದಿರದು.

ಉದಾಹರಣೆಗೆ, ನೀಲಿ ಮತ್ತು ಬಿಳಿಬಣ್ಣದ ಪಟ್ಟೆಗಳುಳ್ಳ ಗೋಡೆಗಳಿಂದ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿರುವ ದುರ್ಗಮ್ಮ ಗುಡಿ ಸೇತುವೆಯಲ್ಲಿ ಮಳೆನೀರು ನಿಂತು ಜನ ಪರದಾಡುವ ಸಮಸ್ಯೆ ಪರಿಹರಿಸುವ ಕಡೆ ಪಾಲಿಕೆ ಇನ್ನೂ ಗಮನ ಹರಿಸಿಲ್ಲ.

ಜೋರು ಮಳೆ ಬಂದರೆ ಅಲ್ಲಿ ನಿಲ್ಲುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಹಿಂದಿನ ವರ್ಷ ನಗರ ಸಾರಿಗೆ ಬಸ್‌ ಅಲ್ಲಿಯೇ ನೀರಿನಲ್ಲಿ ಸಿಲುಕಿಕೊಂಡ ದೃಶ್ಯವನ್ನು ಇಂದಿಗೂ ಜನ ಮರೆತಿಲ್ಲ. ಆದರೆ, ಪಾಲಿಕೆ ಆ ಸಮಸ್ಯೆಯನ್ನು ಪರಿಹರಿಸುವುದನ್ನು ಮರೆತಿದೆ.

ಹಿಂದಿನ ವಾರ, ನಗರದ ದುರ್ಗಮ್ಮಗುಡಿ ವೃತ್ತದ ನಡುವೆಯೇ ಪೈಪ್‌ಲೈನ್‌ ಒಡೆದು ನೀರು ಸೋರಿಕೆ ಆಗುತ್ತಿದ್ದರೂ, ಅದನ್ನು ಸರಿಪಡಿಸುವ ಕಾರ್ಯ ಶುರುವಾಗಿದ್ದು ಎರಡು–ಮೂರು ದಿನಗಳಾದ ಮೇಲೆ. ಅದನ್ನು ಸರಿಪಡಿಸಿದ ಬಳಿಕ ಸುಗಮ ವಾಹನ ಸಂಚಾರಕ್ಕೆ ಅನುವಾಗುವ ರೀತಿಯಲ್ಲಿ ಸ್ಥಳವನ್ನು ಸಮತಟ್ಟು ಮಾಡದೇ ಒಂದು ಬ್ಯಾರಿಕೇಡ್‌ ಅನ್ನು ಇಡಲಾಗಿತ್ತು. ಈಗಲೂ ಅದು ಅಲ್ಲಿಯೇ ಇದೆ!

ನಗರದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಹೋಗುವವರಿಗೆ ಅದರ ಪ್ರವೇಶ ದ್ವಾರದ ಸೊಗಸು ತಕ್ಷಣ ಕಣ್ಮನ ಸೆಳೆಯುತ್ತದೆ. ಕೃತಕ ಮರದ ದಿಮ್ಮಿಗಳನ್ನು ಹೋಲುವ ಎರಡು ಪಿಲ್ಲರ್‌ಗಳ ತುದಿಯಲ್ಲಿ ಫಲಕ, ಗೇಟಿಗೂ ಮರದ ಬಣ್ಣ. ವಾಹ್‌ ಎಂದುಕೊಂಡು ಮುಂದುವರಿದರೆ, ಹಳ್ಳಕ್ಕೆ ಬೀಳುತ್ತೀರಿ. ಏಕೆಂದರೆ ಕಚೇರಿ ಮೂಲೆಯಲ್ಲೇ ದೊಡ್ಡ ಹಳ್ಳಬಾಯ್ತೆರೆದಿದೆ.

ಅಲ್ಲಿಯೂ ಪೈಪ್‌ಲೈನ್‌ ದುರಸ್ತಿ ಕಾರ್ಯ ನಡೆದಿದೆ. ಹಲವು ದಿನಗಳಿಂದ ಅಲ್ಲಿಯೂ ಸುಗಮ ಸಂಚಾರ ಕಷ್ಟ. ಇದು ಪಾಲಿಕೆ ಆಯುಕ್ತರ ನಿವಾಸಕ್ಕೆ ಕೂಗಳತೆ ದೂರದಲ್ಲಿದೆ.

ಇವೆರಡೂ ಸಣ್ಣ ಉದಾಹರಣೆಗಳು. ಇಂಥ ಹಲವು ಉದಾಹರಣೆಗಳೂ ಇವೆ. ಪಾಲಿಕೆ ಆಯುಕ್ತರು ರಜಾ ದಿನಗಳ ಬೆಳಿಗ್ಗೆ ನಗರವನ್ನು ಅಂದಗಾಣಿಸುವ ಕೆಲಸದ ಜೊತೆಗೆ, ಮುಖ್ಯರಸ್ತೆ ಬಿಟ್ಟು ಇನ್ನಿತರ ನಿರ್ಲಕ್ಷ್ಯಿತ ರಸ್ತೆ, ಪ್ರದೇಶಗಳಿಗೂ ಭೇಟಿ ಕೊಡಬೇಕು ಎಂಬ ಒತ್ತಾಸೆ ನಗರದ ನಿವಾಸಿಗಳದ್ದಾಗಿದೆ.

ಈ ನಡುವೆಯೇ, ಪಾಲಿಕೆಯಲ್ಲಿ ಮೊದಲ ಬಾರಿಗೆ ಎಂಬಂತೆ, ಕುಂದು ಕೊರತೆ ಸಭೆಯೂ ನಡೆದಿದ್ದು ವಿಶೇಷ. ನೀರು, ಚರಂಡಿ ಸೌಕರ್ಯಗಳಿಗಾಗಿ ಜನಹೆಚ್ಚು ಅಹವಾಲು ಸಲ್ಲಿಸಿದರು. ಅವರ ಪೈಕಿ ಯಾರೊಬ್ಬರೂ ನಗರವನ್ನು ಅಂದಗಾಣಿಸಿ ಎಂದು ಮನವಿ ಸಲ್ಲಿಸಲಿಲ್ಲ ಎಂಬುದೇ ವಿಶೇಷ.

ಉದ್ದನೆಯ ಮಾರುಕಟ್ಟೆ–ಬೆಂಗಳೂರು ರಸ್ತೆ!
ನಗರದ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾದ ಬೆಂಗಳೂರು ರಸ್ತೆಯ ಒಟ್ಟಂದವೇ ನಾಶವಾಗಿದೆ. ಸುಮಾರು ಎರಡು ಕಿ.ಮೀ.ಗಿಂತಲೂ ಹೆಚ್ಚು ಉದ್ದದ ಆ ರಸ್ತೆಯುದ್ದಕ್ಕೂ ಮಾರುಕಟ್ಟೆಯ ಚಟುವಟಿಕೆಗಳೇ ಢಾಳಾಗಿ ಕಾಣುತ್ತವೆ. ಜನ ನಿರಾಳವಾಗಿ ತಮಗೆ ಬೇಕಾದ್ದನ್ನು ಖರೀದಿಸುವ ಅನುಕೂಲ–ಅವಕಾಶ ಎರಡೂ ಅಲ್ಲಿ ಇಲ್ಲ. ಎಲ್ಲವೂ ಗಿಜಿ ಗಿಜಿ. ಇಕ್ಕಟ್ಟು. ತಳ್ಳಾಟ. ಕೊಂಚ ಹೊತ್ತು ನಿಲ್ಲಲೂ ಆಗದ ಪರಿಸ್ಥಿತಿ.

‘ಪೊಲೀಸರು ಮತ್ತು ಪಾಲಿಕೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾದಚಾರಿ ರಸ್ತೆಯ ಒತ್ತುವರಿ ತೆರವನ್ನು ಮಾಡಬೇಕಾದ ಕೆಲಸ ಇನ್ನೂ ನಡೆದಿಲ್ಲ. ಕಾಟಾಚಾರಕ್ಕೆ ಆಗೊಮ್ಮೆ, ಈಗೊಮ್ಮೆ ನಡೆದರೂ ಪರಿಣಾಮವಿಲ್ಲ. ಪಾದಚಾರಿ ರಸ್ತೆಯನ್ನು ಸಂಪೂರ್ಣ ಒತ್ತುವರಿ ಮಾಡಿರುವ ಅಂಗಡಿ ಮಾಲೀಕರಿಗೆ ಪಾಠ ಹೇಳುವವರೇ ಇಲ್ಲ’ ಎನ್ನುತ್ತಾರೆ ಅಲ್ಲಿನ ನಿವಾಸಿ ರಾಜಶೇಖರ್.

ಮಳೆಗಾಲಕ್ಕೆ ಸಜ್ಜಾಗಿಲ್ಲ...
ಮಳೆಗಾಲಕ್ಕೆ ಪಾಲಿಕೆ ಸಜ್ಜಾಗಿಲ್ಲ ಎಂಬುದೂ ಪ್ರತಿ ಮಳೆಗಾಲದಲ್ಲೂ ಜನರಿಗೆ ಅನುಭವಕ್ಕೆ ಬರುವ ಸತ್ಯ. ಸಣ್ಣಮಳೆ ಬಿದ್ದರೂ ನಗರದ ಪ್ರಮುಖ ರಸ್ತೆಗಳಲ್ಲಿ ಚರಂಡಿ ನೀರು ಹರಿಯುತ್ತದೆ. ಅದನ್ನು ಸರಿಪಡಿಸುವ ಕೆಲಸ ಆಗಿಲ್ಲ.

ಲಿಕೆ ಮುಂದೆಯೇ ನೀರು ನಿಲ್ಲುತ್ತದೆ. ಅಲ್ಲಿಯೇ ಪಾದಚಾರಿ ರಸ್ತೆ ಒತ್ತುವರಿಯಾಗಿದೆ. ಸಂಚಾರ ವ್ಯವಸ್ಥೆ ದಿಕ್ಕು ತಪ್ಪಿದೆ. ‘ಕಣ್ಣ ಮುಂದಿನ ಸಮಸ್ಯೆಗಳಿಗೇ ಪಾಲಿಕೆ ಕುರುಡಾಗಿದೆ’ ಎನ್ನುತ್ತಾರೆ ಮಿಲ್ಲರ್‌ಪೇಟೆಯ ವಿನಯ್‌.

‘ಮಳೆನೀರು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಸಾಮಾನ್ಯ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಇದೆಲ್ಲ ಮಳೆಗಾಲಕ್ಕೆ ಮುನ್ನವೇ ಆಗಬೇಕು. ಆದರೆ ಆಗುವುದಿಲ್ಲ’ ಎಂಬುದು ಅವರ ವಿಷಾದ.

Post Comments (+)