ಮಂಗಳವಾರ, ನವೆಂಬರ್ 19, 2019
29 °C

ನಗರ ಅಭಿವೃದ್ಧಿಗೆ ಆಸಕ್ತಿ ತೋರದ ಶಾಸಕ ಸೋಮಶೇಖರ ರೆಡ್ಡಿ- ಮೇಕಲ ಈಶ್ವರ ಆರೋಪ

Published:
Updated:

ಬಳ್ಳಾರಿ: 'ಗಣೇಶ್ ಕಾಲೊನಿ ಮನೆಗಳಿಗೆ ನೀರು ನುಗ್ಗಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ, ಕಲ್ಯಾಣ ಕರ್ನಾಟಕ‌ ಅಭಿವೃದ್ಧಿ ಮಂಡಳಿ ಮುಂದೆ ಧರಣಿ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅದಕ್ಕೂ ‌ಮೊದಲು ಶಾಸಕರಾಗಿ ಅವರು ಸರಿಯಾಗಿ‌ ಕೆಲಸ ಮಾಡಲಿ ಎಂದು ಯುವಸೇನಾ ಸೋಶಿಯಲ್ ಆಕ್ಷನ್ ಕ್ಲಬ್ ಅಧ್ಯಕ್ಷ ಮೇಕಲ ಈಶ್ವರ ರೆಡ್ಡಿ ಆಗ್ರಹಿಸಿದರು.

'ಒಳಚರಂಡಿ‌ ಅವ್ಯವಸ್ಥೆ ಕುರಿತು ಶಾಸಕರು ವಿರೋಧ ಪಕ್ಷದವರಂತೆ ಮಾತನಾಡಿದರೇ ಹೊರತು ಆಡಳಿತದಲ್ಲಿರುವ ಸರ್ಕಾರದ ಪ್ರತಿನಿಧಿಯಾಗಿ ವರ್ತಿಸಲಿಲ್ಲ. ಅವರಿಗೆ ನಗರದ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲ' ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

'ನಗರದ ಕಲ್ಯಾಣ ದುರ್ಗ ರಸ್ತೆ ‌ಅಭಿವೃದ್ಧಿ ಅನುದಾನ ನಾಲ್ಕು ಬಾರಿ ವಾಪಸ್ ಹೋಗಿದೆ. ಅಲ್ಲಿ‌ ಹಿಂದೆ ಧರಣಿ ಮಾಡಿದ್ದ ರೆಡ್ಡಿ ಈಗ ಶಾಸಕರಾಗಿ ಅಭಿವೃದ್ಧಿಪಡಿಸಲಿ ಎಂದು ಆಗ್ರಹಿಸಿದರು.

ನಗರದ ಗಡಿಗಿ ಚೆನ್ನಪ್ಪ‌ವೃತ್ತದಿಂದ ಸಂಗಂ ವೃತ್ತದವರೆಗೆ ರಾಜಕುಮಾರ್ ರಸ್ತೆ ಅಭಿವೃದ್ಧಿ ಕೆಲಸ ನನೆಗುದಿಗೆ ಬಿದ್ದಿದೆ. ಅಲ್ಲಿನ ವ್ಯಾಪಾರಸ್ಥರೊಂದಿಗೆ ಶಾಸಕರು ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ರಸ್ತೆ ಒತ್ತುವರಿ‌ ತೆರವುಗೊಳಿಸುವುದರ ಕಡೆಗೂ ಶಾಸಕರು ಗಮನ‌ ಹರಿಸಿಲ್ಲ ಎಂದು ದೂರಿದರು.

'ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನದಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ನಿಗದಿಯಾಗಿದೆ.  ಅದು ಸರಿಯಾಗಿ ಬಳಕೆಯಾಗುವಂತೆ ಶಾಸಕರು ಪಾಲಿಕೆಯ ಗಮನ ಸೆಳೆಯಲಿ ಎಂದರು.

ಧರಣಿ: ನಗರದ ರಸ್ತೆ ಮತ್ತು ಒಳಚರಂಡಿ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಪಾಲಿಕೆಗೆ ಮನವಿ ಸಲ್ಲಿಸಲಾಗಿದೆ. ಹದಿನೈದು ದಿನ ಕಾದು ನೋಡಿ ಪಾಲಿಕೆಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಮುಖಂಡರಾದ ಎಸ್.ಕೃಷ್ಣ, ಜಿ.ಎಂ.ಭಾಷಾ, ಸಲಾವುದ್ದೀನ್, ಜಗನ್ನಾಥ, ನಾರಾಯಣ, ಶಿವಾನಂದ, ತೇಜು ಪಾಟೀಲ್ ಇದ್ದರು.

ಪ್ರತಿಕ್ರಿಯಿಸಿ (+)