ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ದಿನಗಳಲ್ಲಿ 50 ಟಿಎಂಸಿ ನೀರು!

Last Updated 11 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ:ರೈತರ ಜೀವನಾಡಿಯಾಗಿರುವ ಇಲ್ಲಿನ ತುಂಗಭದ್ರಾ ಜಲಾಶಯ ಈ ಸಲ ತುಂಬುವುದರ ಬಗ್ಗೆ ಯಾರಿಗೂ ಸಣ್ಣ ಭರವಸೆ ಇರಲಿಲ್ಲ. ಆದರೆ, ಐದು ದಿನಗಳಲ್ಲಿ ಎಲ್ಲವೂ ಬದಲಾಗಿ ಹೋಗಿದೆ. ಇದಕ್ಕೆ ಪ್ರಕೃತಿಯ ಆಟ ಎನ್ನಬಹುದೊ ಏನೋ.

ಈಗ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿರುವುದಷ್ಟೇ ಅಲ್ಲ, ತುಂಗಭದ್ರೆ ಮೈದುಂಬಿಕೊಂಡು ಹರಿಯುತ್ತಿದ್ದಾಳೆ. ತನ್ನ ಒಡಲಲ್ಲಿ ನೀರು ಶೇಖರಿಸಿ ಇಟ್ಟುಕೊಳ್ಳಲಾಗದೆ ಅಪಾರ ಪ್ರಮಾಣದ ನೀರು ಹೊರಗೆ ಹಾಕುತ್ತಿದ್ದಾಳೆ.

ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಬಳ್ಳಾರಿ ಜಿಲ್ಲೆಯಲ್ಲಿ ಸಮರ್ಪಕವಾಗಿ ವರ್ಷಧಾರೆಯಾಗಿಲ್ಲ. ನದಿ ಪಾತ್ರ ಸಂಪೂರ್ಣ ಬತ್ತು ಹೋಗಿತ್ತು. ಜಲಾಶಯದಲ್ಲಿ ನೀರಿನ ಸಂಗ್ರಹವಿಲ್ಲದೆ ಭಣಗುಡುತ್ತಿತ್ತು. ಜೂನ್‌, ಜುಲೈನಿಂದ ಆಗಸ್ಟ್‌ 6ರ ವರೆಗೆ ಅಲ್ಪ ಸ್ವಲ್ಪ ನೀರು ಹರಿದು ಬಂದು, ಅಣೆಕಟ್ಟೆಯಲ್ಲಿ 50 ಟಿ.ಎಂ.ಸಿ. ವರೆಗೆ ನೀರು ಸಂಗ್ರಹವಾಯಿತು. ಬೇಸಿಗೆಯಲ್ಲಿ ಕುಡಿಯುವ ನೀರಿಗಾದರೂ ನೀರು ಬಂತು ಎಂದು ಎಲ್ಲರೂ ಸಮಾಧಾನ ಪಟ್ಟುಕೊಂಡಿದ್ದರು. ಆದರೆ, ಆಗಸ್ಟ್‌ 7ರಿಂದ ಭಾನುವಾರದ ವರೆಗೆ 50 ಟಿ.ಎಂ.ಸಿ. ಅಡಿಗೂ ಹೆಚ್ಚು ನೀರು ಹರಿದು ಬಂದಿದ್ದು, ಈಗ ಜಲಾಶಯ ಭರ್ತಿಯಾಗಿದೆ. ಶಿವಮೊಗ್ಗದ ಸುತ್ತಮುತ್ತ ಅಪಾರ ಮಳೆಯಾಗಿ, ತುಂಗಾ ಮತ್ತು ಭದ್ರಾ ಅಣೆಕಟ್ಟೆಗಳಿಂದ ನೀರು ಹರಿಸುತ್ತಿರುವುದರಿಂದ ತುಂಗಭದ್ರೆಗೆ ಜೀವ ಕಳೆ ಬಂದಿದೆ. ನದಿ ಪಾತ್ರದಲ್ಲಿ ನೀರು ಹರಿಯುತ್ತಿರುವ ಕಾರಣ ಜಲಚರಗಳು ಉಸಿರಾಡುವಂತಾಗಿದೆ.

ಭತ್ತ ಬೆಳೆಯುವ ರೈತರುಒಂದು ಬೆಳೆ ಕೂಡ ತೆಗೆಯುವುದು ಕಷ್ಟ ಎಂದು ಭಾವಿಸಿದ್ದರು. ಈಗ ಎರಡು ಬೆಳೆ ಬೆಳೆಯಬಹುದು ಎಂಬ ಸಂತಸದಲ್ಲಿದ್ದಾರೆ. ಈಗಾಗಲೇ ಜಲಾಶಯದ ಎಲ್ಲ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಗೆ ಸಾವಿರ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

’ಉತ್ತಮ ರೀತಿಯಲ್ಲಿ ಮಳೆಯಾಗಿ, ಜಲಾಶಯ ತುಂಬಲಿ ಎಂದು ಏನೆಲ್ಲ ಪೂಜೆ ಪುನಸ್ಕಾರ ಮಾಡಿದೆವು. ಆದರೆ, ಫಲ ಕೊಟ್ಟಿರಲಿಲ್ಲ. ಈಗ ನಾಲ್ಕೈದು ದಿನಗಳಲ್ಲೇ ಜಲಾಶಯ ತುಂಬಿರುವುದು ನೋಡಿದರೆ ಆಶ್ಚರ್ಯವಾಗುತ್ತಿದೆ. ಏನೇ ಆಗಲಿ ಭರವಸೆ ಕಳೆದುಕೊಂಡಿದ್ದ ರೈತರೀಗ ಸಂಭ್ರಮದಲ್ಲಿದ್ದಾರೆ‘ ಎಂದು ಹೊಸೂರಿನ ರೈತ ಉಜ್ಜಿನಪ್ಪ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT