ಭಾನುವಾರ, ಜುಲೈ 25, 2021
25 °C

ಬಳ್ಳಾರಿ ಲಾಕ್ ಡೌನ್ ಸದ್ಯಕ್ಕಿಲ್ಲ- ಸಚಿವ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: 'ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜಿಲ್ಲೆಯಲ್ಲಿ ಸದ್ಯ ಮತ್ತೆ ಲಾಕ್ ಡೌನ್ ಜಾರಿಗೊಳಿಸುವುದಿಲ್ಲ‌' ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದರು.

ಕೊರೊನಾ ನಿಯಂತ್ರಣ ಕುರಿತು ನಗರದಲ್ಲಿ ಶನಿವಾರ ಅಧಿಕಾರಿಗಳ ಸಭೆಯ ಬಳಿಕ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಸೋಂಕು ಹೆಚ್ಚಿರುವ ಹಲವು ಜಿಲ್ಲೆಗಳಲ್ಲಿ ಮತ್ತೆ ಲಾಕ್ ಡೌನ್‌ ಜಾರಿಗೊಳಿಸಲಾಗಿದ್ದು ಅಲ್ಲಿನ ಫಲಿತಾಂಶವನ್ನು ಗಮನಿಸಿ, ಉಪಯುಕ್ತ ಎನ್ನಿಸಿದರೆ ಮಾತ್ರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಕುರಿತು ನಿರ್ಧರಿಸಲಾಗುವುದು' ಎಂದು ಹೇಳಿದರು.

'ಇಡೀ ವಿಶ್ವವೇ ಸೋಂಕಿನಿಂದ ತಲ್ಲಣಗೊಂಡಿದೆ. ಇಂಥ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸಬೇಕು ಎಂಬ ಆಗ್ರಹ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವುದನ್ನು ಸರ್ಕಾರದ‌ ಪ್ರತಿನಿಧಿಯಾಗಿ ಗಮನಿಸಿದ್ದೇನೆ. ಲಾಕ್ ಡೌನ್ ಜಾರಿಗೊಳಿಸುವುದರಿಂದ ನಿಜಕ್ಕೂ‌ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ದೃಢವಾಗಿ ಹೇಳುವ‌ ಪರಿಸ್ಥಿತಿ ಎಲ್ಲೂ ಇಲ್ಲ. ಆದರೂ ನಿಯಂತ್ರಿಸಬಹುದು ಎಂದಾದರೆ ಖಂಡಿತ ಜಿಲ್ಲೆಯಲ್ಲೂ ಲಾಕ್ ಡೌನ್ ಜಾರಿಗೊಳಿಸಲಾಗುವುದು. ಇಲ್ಲವಾದರೆ ಜಾರಿಗೊಳಿಸುವುದಿಲ್ಲ. ಈಗಾಗಲೇ ಲಾಕ್ ಡೌನ್ ನಿಂದಾಗಿ ಬಡ ಜನ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ' ಎಂದರು.

'ಜಿಲ್ಲೆಯ ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಜಿಂದಾಲ್ ಕೂಡ ಇದಕ್ಕೆ ಕಾರಣ ಎಂಬುದೂ ಗೊತ್ತಿದೆ. ಈ ಸನ್ನಿವೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಇರುವ ಇತರೆ ದಾರಿಗಳ ಕುರಿತೂ ಜಿಲ್ಲಾಡಳಿತ ಗಂಭೀರ ಗಮನ ಹರಿಸಿದೆ. ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರ ಪತ್ತೆ ಕಾರ್ಯವನ್ನು ಇನ್ನಷ್ಟು‌ ಚುರುಕುಗೊಳಿಸಲಾಗಿದೆ' ಎಂದು ಹೇಳಿದರು.

'ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟ 54 ಮಂದಿ ಪೈಕಿ ಬಹುತೇಕರು ಇತರೆ ಗಂಭೀರ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಸೋಂಕಿನಿಂದಾಗಿಯೇ ಮೃತಪಟ್ಟವರ ಸಂಖ್ಯೆ ಅತಿ‌ಕಡಿಮೆ ಇದೆ. ಮೃತರಲ್ಲಿ ವೃದ್ಧರೇ ಹೆಚ್ಚಿದ್ದಾರೆ.ಹೀಗಾಗಿ ಸೋಂಕಿನ ಕುರಿತು ಸಾರ್ವಜನಿಕರು ಅನಗತ್ಯ ಆತಂಕ ಪಡಬಾರದು' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು