ಭಾನುವಾರ, ಫೆಬ್ರವರಿ 16, 2020
28 °C
ಬುಡಾ ಉದ್ಯಾನದಲ್ಲಿ ಅವಕಾಶ--– ಎಸ್ಪಿ ಪ್ರಸ್ತಾವ; ಜನ, ವಾಹನ ಸಂಚಾರಕ್ಕೆ ತೊಂದರೆ ತಪ್ಪಿಸುವ ಉದ್ದೇಶ

ಬಳ್ಳಾರಿ: ಗಡಿಗಿ ಚೆನ್ನಪ್ಪ ವೃತ್ತದಿಂದ ಪ್ರತಿಭಟನೆ ‘ದೂರ’

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಜನ ಮತ್ತು ವಾಹನದಟ್ಟಣೆಯ ಜೊತೆಗೆ ನಿರಂತರ ಧರಣಿ, ಪ್ರತಿಭಟನೆಗಳಿಂದ ಗಮನ ಸೆಳೆಯುತ್ತಿದ್ದ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಇನ್ನು ಹೆಚ್ಚು ದಿನ ಅಂಥ ಚಟುವಟಿಕೆಗಳಿಗೆ ಅವಕಾಶ ದೊರಕುವುದಿಲ್ಲ. ಆ ವೃತ್ತದ ಬದಲಿಗೆ, ಗವಿಯಪ್ಪ ವೃತ್ತದಲ್ಲಿರುವ ಬುಡಾ ಉದ್ಯಾನದಲ್ಲಿ ಮಾತ್ರ ಧರಣಿ
ನಡೆಸಲು ಪೊಲೀಸರು ಅನುಮತಿ ನೀಡಲಿದ್ದಾರೆ.

ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಸಲ್ಲಿಸಿರುವ ಪ್ರಸ್ತಾವಕ್ಕೆ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅನುಮೋದನೆ ನೀಡುವುದಷ್ಟೇ ಬಾಕಿ ಇದೆ.

ನಾಗರಿಕ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಜನವರಿ 3ರಂದು ಇದೇ ವೃತ್ತದಲ್ಲಿ ನಡೆದಿದ್ದ ಸಭೆಯಲ್ಲಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಮುಸ್ಲಿಮರನ್ನು ಕುರಿತು ನೀಡಿದ್ದ ಹೇಳಿಕೆಯು ದೊಡ್ಡಮಟ್ಟದಲ್ಲಿ ವಿವಾದಕ್ಕೆ ಈಡಾಗಿದ್ದೇ ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಗೊಳ್ಳಲು ಕಾರಣ.

ರೆಡ್ಡಿಯವರ ಹೇಳಿಕೆಯನ್ನು ವಿರೋಧಿಸಿ ಇದೇ ವೃತ್ತದಲ್ಲಿ ಕಾಂಗ್ರೆಸ್ ಕೂಡ ಪ್ರತಿಭಟನೆ ನಡೆಸಿತ್ತು. ನಂತರವೂ ವಿವಿಧ ಸಂಘಟನೆಗಳು ಬೇರೆ ಕಾರಣಗಳಿಗೆ ಧರಣಿ, ಪ್ರತಿಭಟನೆ ನಡೆಸಿದ್ದವು.

ಇದೀಗ, ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಬಳ್ಳಾರಿಯ ಪ್ರಗತಿಪರ ಹೋರಾಟಗಾರರು ಜಂಟಿಯಾಗಿ ಹಮ್ಮಿಕೊಂಡಿದ್ದ ಗುರುವಾರದ ಬಂದ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅಲ್ಲದೆ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಬಂದ್‌ ಬದಲಿಗೆ ನಗರದ ನಗರೂರು ನಾರಾಯಣರಾವ್‌ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯನ್ನು ಮಾಡಿ ಮನವಿ ಸಲ್ಲಿಸಬಹುದಷ್ಟೇ. ಹೀಗಾಗಿ ಬಂದ್‌ ನಡೆಸಲು ಉತ್ಸುಕರಾಗಿದ್ದ ಮುಖಂಡರು ನಿರುತ್ಸಾಹಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಒಕ್ಕೂಟದ ಮುಖಂಡ ಬಿ.ಎಂ.ಪಾಟೀಲ್‌, ‘ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಧರಣಿ, ಪ್ರತಿಭಟನೆಗಳ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗುತ್ತದೆ. ಅನಗತ್ಯವಾಗಿ ಆತಂಕದ ವಾತಾವರಣವೂ ನಿರ್ಮಾಣವಾಗುವುದರಿಂದ ಇನ್ನು ಮುಂದೆ ಅಲ್ಲಿ ಅಂಥ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿದರು. ಹೀಗಾಗಿ ನಾಳೆ ಬಂದ್‌ ಮಾಡುತ್ತಿಲ್ಲ’ ಎಂದರು.

ಜನ– ವಾಹನ ದಟ್ಟಣೆ: ‘ಚೆನ್ನಪ್ಪ ವೃತ್ತದಲ್ಲಿ ಧರಣಿ, ಪ್ರತಿಭಟನೆ, ಮಾನವ ಸರಪಳಿ ರಚನೆ, ಪ್ರತಿಕೃತಿ ದಹನದಂಥ ಚಟುವಟಿಕೆಗಳು ನಡೆದಾಗ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಕೆಲ
ವೊಮ್ಮೆ ಪ್ರಕ್ಷುಬ್ಧ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆಯೂ ಇರುವುದರಿಂದ ಇನ್ನು ಮುಂದೆ ಇಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಯ ಗಮನ ಸೆಳೆದಿರುವೆ’ ಎಂದು ಎಸ್ಪಿ ಸಿ.ಕೆ.ಬಾಬಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೃತ್ತದಲ್ಲಿ ಅನಂತಪುರ ರಸ್ತೆ, ಬೆಂಗಳೂರು ರಸ್ತೆ, ರೈಲು ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಈ ವೃತ್ತದಲ್ಲೇ ಮಹಾನಗರ ಪಾಲಿಕೆ ಕಚೇರಿಯೂ ಇದೆ. ಸಮೀಪದಲ್ಲೇ ನಗರ ಬಸ್‌ ನಿಲ್ದಾಣವೂ ಇದೆ. ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು ಹೆಚ್ಚಿರುವುದರಿಂದ ಜನ–ವಾಹನ ಸಂಚಾರವೂ ಹೆಚ್ಚು’ ಎಂದರು.

*
ಜನರಿಗೆ ತೊಂದರೆಯಾಗದ ಸ್ಥಳದಲ್ಲಿ ಧರಣಿ ನಡೆಸಲು ಅವಕಾಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ ಸೂಚನೆ ಅನ್ವಯ ಕ್ರಮ ಕೈಗೊಳ್ಳಲಾಗುವುದು.
-ಎಸ್‌.ಎಸ್‌.ನಕುಲ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು