ಶುಕ್ರವಾರ, ಮೇ 27, 2022
23 °C
ರದ್ದುಗೊಳಿಸುವಂತೆ ಬಳ್ಳಾರಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸೂಚನೆ

ನೀರಿನ ಘಟಕಕ್ಕೆ ವಾಣಿಜ್ಯ ವಿದ್ಯುತ್ ಶುಲ್ಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ’ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಶುದ್ಧ ನೀರಿನ ಘಟಕಗಳಿಂದ ವಾಣಿಜ್ಯ ಶುಲ್ಕವನ್ನು ಜೆಸ್ಕಾಂ ವಸೂಲು ಮಾಡುವುದುನ್ನು ಕೂಡಲೇ ನಿಲ್ಲಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯ್ತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ರೂಪನಗುಡಿ ಕ್ಷೇತ್ರದ ಸದಸ್ಯ ಗೋವಿಂದಪ್ಪ ಅವರ ದೂರು ಮನವಿಗೆ ಸ್ಪಂದಿಸಿದ ಅವರು, ‘ಜೆಸ್ಕಾಂ ಕೂಡಲೇ ಸಾಮಾನ್ಯ ಶುಲ್ಕವನ್ನಷ್ಟೇ ನೀರಿನ ಘಟಕಗಳಿಂದ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಪಷ್ಟಪಡಿಸಿದರು.

‘ನೀರಿನ ಘಟಕಗಳ ನಿರ್ವಹಣೆಗೆ ಮಾಸಿಕ ₨ 3 ಸಾವಿರವನ್ನಷ್ಟೇ ಏಜೆನ್ಸಿಗಳಿಗೆ ಪಾವತಿಸಲಾಗುತ್ತಿದೆ. ವಿದ್ಯುತ್‌ ಶುಲ್ಕದ ಮೊತ್ತವೇ ₨ 3 ಸಾವಿರ ದಾಟಿದರೆ ಘಟಕಗಳ ನಿರ್ವಹಣೆ ಕಷ್ಟಕರವಾಗುತ್ತದೆ. ನೀರಿನ ಘಟಕಗಳಿಂದ ಸರ್ಕಾರಕ್ಕೆ ಲಾಭವಿಲ್ಲ ಎಂಬುದನ್ನು ಜೆಸ್ಕಾಂ ಅರಿಯಬೇಕು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕೊಳಗಲ್ಲು ಕ್ಷೇತ್ರದ ಸದಸ್ಯ ಭೋಗರಾಜ್‌, ‘ನೀರಿನ ಘಟಕಗಳ ನಿರ್ವಹಣೆಯನ್ನು ಪಂಚಾಯ್ತಿಗೆ ಅಥವಾ ಸ್ಥಳೀಯ ಏಜೆನ್ಸಿಗಳಿಗೆ ನೀಡಬೇಕು. ಕೊಳಗಲ್ಲು ಗ್ರಾಮದಲ್ಲಿ ನೀರಿನ ಘಟಕ ಪದೇಪದೇ ಕೆಟ್ಟುನಿಲ್ಲುತ್ತಿದೆ’ ಎಂದು ದೂರಿದರು. ಅವರಿಗೆ ಸ್ಪಷ್ಟನೆ ನೀಡಿದ ಬಸಪ್ಪ, ‘ತಾಲ್ಲೂಕಿನ ನೀರಿನ ಘಟಕಗಳ ನಿರ್ವಹಣೆಯನ್ನು ನಗರದಲ್ಲಿರುವ ಏಜೆನ್ಸಿಗೇ ನೀಡಲಾಗಿದೆ’ ಎಂದರು.

3 ತಿಂಗಳಾದರೂ ನೀರಿಲ್ಲ: ‘ದಿನಬಳಕೆ ನೀರಿಗಾಗಿ ಕೊಳವೆಬಾವಿ ಕೊರೆಸಿ ಮೂರು ತಿಂಗಳಾದರೂ ವಿದ್ಯುತ್‌ ಸಂಪರ್ಕವನ್ನೂ ನೀಡಿಲ್ಲ. ಪೈಪ್‌ಲೈನ್‌ ಅನ್ನೂ ಅಳವಡಿಸಿಲ್ಲ. ಕುಡಿಯುವ ನೀರಿನ ಸ್ವಂತ ಕೆರೆ ಇದ್ದರೂ ನೀರಿನ ಸಮಸ್ಯೆ ನೀಗಿಲ್ಲ’ ಎಂದು ಕೊರ್ಲಗುಂದಿ ಕ್ಷೇತ್ರದ ಸದಸ್ಯ ತಿಮ್ಮಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿಯ ಶೇ 85ರಷ್ಟು ಮಕ್ಕಳು ಹಾಜರಾಗುತ್ತಿದ್ದು, ಉಳಿದ ಶೇ 15ರಷ್ಟು ಮಕ್ಕಳನ್ನು ಕರೆತರಲು ಶಿಕ್ಷಕರು ಮನೆಗಳಿಗೆ ಭೇಟಿ ನೀಡಲಿದ್ದಾರೆ’ ಎಂದು ಬಳ್ಳಾರಿ ಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಲಿಂಗಮೂರ್ತಿ ಮಾಹಿತಿ ನೀಡಿದರು.

‘ಅಂಗನವಾಡಿಗಳನ್ನು ಆರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದರಂತೆ, ಬೆಳಿಗ್ಗೆ 10.30ರಿಂದ 12.30ರವರೆಗೆ ಆರೋಗ್ಯವಂತರಾದ ಕೇವಲ 5 ಮಕ್ಕಳು ಹಾಜರಾಗಲು ಅವಕಾಶ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರೆಲ್ಲರಿಗೂ ಕೋವಿಡ್ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ತಿಳಿಸಿದರು.

ಅನುದಾನ ದುರ್ಗಮ್ಮನಿಗೇ ಗೊತ್ತು!

’ಗ್ರಾಮಗಳಲ್ಲಿ ದಿಢೀರನೆ ಅಭಿವೃದ್ಧಿ ಕಾರ್ಯಗಳು ನಡೆಯಲಾರಂಭಿಸುತ್ತವೆ. ಆದರೆ ಆ ಬಗ್ಗೆ ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ, ಜಿಲ್ಲಾ ಪಂಚಾಯ್ತಿ ಸದಸ್ಯರಿಗೇ ಮಾಹಿತಿ ಕೊಟ್ಟಿರುವುದಿಲ್ಲ. ಒಮ್ಮೊಮ್ಮೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ಇರುವುದಿಲ್ಲ. ಕಾಮಗಾರಿ ಅನುದಾನ ಯಾವುದು ಎಂಬುದು ದುರ್ಗಮ್ಮದೇವಿಗೇ ಗೊತ್ತಿರುತ್ತದೆ’ ಎಂದು ಸದಸ್ಯ ಭೋಗರಾಜ್‌ ವ್ಯಂಗ್ಯವಾಡಿದರು.

ಅವರಿಗೆ ಪ್ರತಿಕ್ರಿಯಿಸಿದ ಇ,ಒ. ಬಸಪ್ಪ, ‘ಎಲ್ಲ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಕಡ್ಡಾಯವಾಗಿ ಮಾಹಿತಿ ಕೊಡಬೇಕು. ಅಕ್ರಮ ಅಕ್ಕಿ ದಾಸ್ತಾನು ಪ್ರಕರಣ ದಾಖಲಿಸಲು ಪಿಡಿಓ ಬೇಕು. ಬೇರೆ ವಿಷಯಗಳಿಗೆ ಬೇಡ ಎನ್ನುವ ಧೋರಣೆ ಸರಿಯಲ್ಲ’ ಎಂದರು.

ಕ್ಯೂರಿಂಗ್‌ ಇಲ್ಲದೆ ಶೌಚಾಲಯ ನಿರ್ಮಾಣ

‘ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಾಲಯ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಕ್ಯೂರಿಂಗ್‌ ಮಾಡದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ’ ಎಂದು ಕಪ್ಪಗಲ್ಲು ಕ್ಷೇತ್ರದ ರಂಜಾನ್‌ ಸಾಬ್ ಅಸಮಾಧಾನ ವ್ಯಕ್ತಪಡಿಸಿದರು.
‘ಗ್ರಾಮೀಣ ನೀರು ಪೂರೈಕೆ ಯೋಜನೆ ಅಡಿ ಶಾಲೆ, ಅಂಗನವಾಡಿಗಳಿಗೆ ನೀರು ಹಾಗೂ ಶೌಚಾಲಯ ಸೌಕರ್ಯ ಕಲ್ಪಿಸುತ್ತಿದ್ದು, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಬಗ್ಗೆ ಗಮನ ಹರಿಸಬೇಕು’ ಎಂದು ಇಒ ಬಸಪ್ಪ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷತೆ ಪುಷ್ಪಾವತಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು