ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ: ಶಿಸ್ತು ಕ್ರಮಕ್ಕೆ ಶಿಫಾರಸು

Last Updated 11 ಮಾರ್ಚ್ 2021, 16:18 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅವರು ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ಮುಖ್ಯಶಿಕ್ಷಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ದೂರಿನ ಮೇರೆಗೆ ಮೂವರು ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಬಿಒ ರಚಿಸಿದ್ದರು. ಅವರ ವರದಿ ಆಧರಿಸಿ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ.

‘ಮುಖ್ಯಶಿಕ್ಷಕ ಅಸಭ್ಯವಾಗಿ ನಡೆದುಕೊಂಡು ಹಲವು ದಿನಗಳಾಗಿದ್ದವು. ಯಾರೂ ದೂರು ಕೊಡಲು ಮುಂದೆ ಬಂದಿರಲಿಲ್ಲ. ಇತ್ತೀಚೆಗೆ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಅವರು ಮಕ್ಕಳ ಸ್ನೇಹಿ ಜಾಗೃತಿ ಕಾರ್ಯಕ್ರಮ ಸಂಘಟಿಸಿದ್ದರು. ಅದರಿಂದ ಧೈರ್ಯ ತಂದುಕೊಂಡು ವಿದ್ಯಾರ್ಥಿನಿಯರು ಪೋಷಕರೊಂದಿಗೆ ಬಂದು ದೂರು ಕೊಟ್ಟಿದ್ದರು. ಬಳಿಕ ಸಮಿತಿ ರಚಿಸಲಾಗಿತ್ತು. ಸಮಿತಿಯು ಮುಖ್ಯಶಿಕ್ಷಕ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಹೀಗಾಗಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಸುನಂದಾ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದ್ದಾರೆ.

‘ಬೇರೊಂದು ತಾಲ್ಲೂಕಿನಲ್ಲಿ ಕರ್ತವ್ಯದಲ್ಲಿದ್ದಾಗ ಇದೇ ರೀತಿಯ ನಡವಳಿಕೆಗೆ ಮುಖ್ಯಶಿಕ್ಷಕನಿಗೆ ಕೆಲಸದಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಅಲ್ಲಿಂದ ನಮ್ಮ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿತ್ತು. ಇಲ್ಲೂ ಕೂಡ ಅದೇ ಚಾಳಿ ಮುಂದುವರೆಸಿದ್ದಾರೆ’ ಎಂದು ಹೇಳಿದ್ದಾರೆ.

‘ಮುಖ್ಯಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕವಾಗಿ ಕಿರುಕುಳ ಕೊಡುತ್ತಿದ್ದಾನೆ’ ಎಂದು ಪಾಲಕರು, ಗ್ರಾಮಸ್ಥರು ಮಂಗಳವಾರ ಬಿಒ ಅವರಿಗೆ ಲಿಖಿತ ದೂರು ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT