ಮಂಗಳವಾರ, ಸೆಪ್ಟೆಂಬರ್ 28, 2021
22 °C

ಹೂವಿನಹಡಗಲಿ: ಬೆಟ್ಟದ ಮಲ್ಲೇಶ್ವರಕ್ಕೆ ಹಸಿರಿನ ಚಾದರ

ಕೆ. ಸೋಮಶೇಖರ್ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಮಳೆಯ ಸಿಂಚನದಿಂದ ಬೆಟ್ಟದ ತುಂಬೆಲ್ಲ ಹಸಿರ ಸಿರಿ, ಮುಂಜಾವಿನಲ್ಲಿ ಮಂಜು ಮುಸುಕಿ ಸ್ವರ್ಗದಂತೆ ಕಾಣಿಸುವ ಬೆಟ್ಟದ ಪರಿಸರ, ಗುಡ್ಡಗಳಿಗೆ ಮುತ್ತಿಕ್ಕುವ ಮೋಡಗಳು, ಹಿತಾನುಭವ ನೀಡುವ ತಂಗಾಳಿ.… ಇದು ತಾಲ್ಲೂಕಿನ ಬೆಟ್ಟದ ಮಲ್ಲೇಶ್ವರ ನಿಸರ್ಗದ ಚೆಲುವು.

ನಿರಂತರ ಸುರಿಯುವ ತುಂತುರು ಮಳೆಗೆ ಮಲ್ಲೇಶ್ವರ ಬೆಟ್ಟವು ಹಸಿರಿನಿಂದ ಕಂಗೊಳಿಸುತ್ತಿದೆ. ಭೂ ಲೋಕದ ಸ್ವರ್ಗದಂತಿರುವ ಬೆಟ್ಟದ ಪರಿಸರವು ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಅವಿಭಜಿತ ಬಳ್ಳಾರಿ ಜಿಲ್ಲೆಯ ಮೂರನೇ ಅತಿ ಎತ್ತರದ ಬೆಟ್ಟ ಎಂಬ ಹೆಗ್ಗಳಿಕೆ ಹೊಂದಿರುವ ಈ ಗುಡ್ಡ ಚಾರಣಪ್ರಿಯರ ನೆಚ್ಚಿನ ತಾಣ.

ಬೆಟ್ಟದ ಮಲ್ಲೇಶ್ವರ ಸುಕ್ಷೇತ್ರ ತಾಲ್ಲೂಕು ಕೇಂದ್ರದಿಂದ 16 ಕಿ.ಮೀ. ದೂರದಲ್ಲಿದೆ. ಹಡಗಲಿ-ಹರಪನಹಳ್ಳಿ ಮುಖ್ಯರಸ್ತೆಯಲ್ಲಿ ಬರುವ ಕೊಮಾರನಹಳ್ಳಿ ತಾಂಡಾದಿಂದ 4 ಕಿ.ಮೀ. ಕ್ರಮಿಸಿದರೆ ಸುಕ್ಷೇತ್ರ ತಲುಪಬಹುದು. ಮಲ್ಲೇಶ್ವರ ಸ್ವಾಮಿಯ ಐತಿಹಾಸಿಕ ದೇಗುಲ ಪ್ರಕೃತಿಯ ಮಡಿಲಲ್ಲಿ ಅರಳಿ ನಿಂತಿದೆ. ನಾನಾ ಭಾಗಗಳ ಭಕ್ತರು ಸ್ವಾಮಿಯನ್ನು ಮನೆದೇವರಾಗಿ ಪೂಜಿಸುತ್ತಾರೆ. ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಭಕ್ತರಿಗೆ ಇದು ಶಾಖಾ ದೇಗುಲ.

ಬೆಟ್ಟದ ತುತ್ತ ತುದಿಯಲ್ಲಿ ಮುದಿ ಮಲ್ಲಪ್ಪ ದೇವಸ್ಥಾನ ಇದೆ. ಪುರಾತನ ಗವಿಯಲ್ಲಿ ಶತಮಾನಗಳ ಹಿಂದೆ ಪ್ರತಿಷ್ಠಾನೆಗೊಂಡಿರುವ ಈಶ್ವರ, ಬಸವಣ್ಣನ ಮೂರ್ತಿಗಳು ಪೂಜೆಗೊಳ್ಳುತ್ತವೆ. ಕೆಳಗಿನ ಮಲ್ಲೇಶ್ವರ ದೇವಸ್ಥಾನ ಹಿಂಭಾಗದಿಂದ ನೈಸರ್ಗಿಕ ಮೆಟ್ಟಿಲು, ಕಾಲುದಾರಿ ಮೂಲಕ ಅಲ್ಲಿಗೆ ಹೋಗಬಹುದು. ಸೋಗಿ ಕಡೆಯಿಂದ ವಾಹನಗಳಲ್ಲಿಯೂ ಮೇಲಿನ ಬೆಟ್ಟ ತಲುಪಬಹುದು. ನಾಗತಿಬಸಾಪುರ ಕಡೆಯಿಂದ ಕಾಲುದಾರಿಯಲ್ಲಿ ಸಾಗಿ ಮೇಲಿನ ದೇವಸ್ಥಾನ ತಲುಪಬಹುದು.

ದಟ್ಟ ಅರಣ್ಯದ ನಡುವೆ ಕಾಲ್ನಡಿಗೆಯಲ್ಲಿ ಬೆಟ್ಟ ಏರಿದವರು ಇದನ್ನು ಪಶ್ಚಿಮ ಘಟ್ಟದ ಸಹ್ಯಾದ್ರಿ ಎಂದೇ ವರ್ಣಿಸುತ್ತಾರೆ. ವಾರಂತ್ಯ ಹಾಗೂ ರಜಾ ದಿನಗಳಲ್ಲಿ ನೂರಾರು ಜನರು ಬೆಟ್ಟ ಏರಿ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ.

ಬೆಟ್ಟದ ಮಲ್ಲೇಶ್ವರ ಸುತ್ತಲೂ 2,000 ಹೆಕ್ಟೇರ್ ಗೂ ಹೆಚ್ಚು ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಕಮರ, ಕಕ್ಕೆ, ಹಾರೆ, ದಿಂಡಲ್, ಮಸವಾಳ ಪ್ರಬೇಧದ ಗಿಡಗಳು ದಟ್ಟವಾಗಿ ಬೆಳೆದಿವೆ. ಕವಳೆ, ಕಾರೆ, ಕಕ್ಕಿ, ಬಿಕ್ಕಿ, ಅಡವಿ ನೆಲ್ಲಿ, ಬೇಲ ಮುಂತಾದ ಕಾಡು ಫಲದ ಗಿಡಗಳು ಹೇರಳವಾಗಿವೆ. ಗಂಭೀರ ಕಾಯಿಲೆಗಳಿಗೆ ಮದ್ದಾಗಿ ಬಳಸುವ ಔಷಧಿ ಸಸ್ಯಗಳು ಬೆಳೆದಿವೆ. ಮಳೆಗಾಲದ ಈ ದಿನಗಳಲ್ಲಿ ಹಸಿರಾಗಿರುವ ಬೆಟ್ಟದ ಪರಿಸರ ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿಗೆ ಚಾರಣಕ್ಕೆ ಹೋಗುವವರು ಕುಡಿಯುವ ನೀರು, ಆಹಾರ, ಮಳೆ-ಚಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ಪರಿಕಗಳೊಂದಿಗೆ ತೆರಳಬೇಕು.

ಮಳೆ ದೇವರು ಮಲ್ಲಯ್ಯ: 

ಈ ಭಾಗದ ರೈತರು ಬೆಟ್ಟದ ಮಲ್ಲೇಶ್ವರ ಸ್ವಾಮಿಯನ್ನು ಮಳೆ ತರುವ ದೇವರು ಎಂದೇ ನಂಬಿದ್ದಾರೆ. ಮುಂಗಾರು ಬಿತ್ತನೆಗೆ ಮುನ್ನ ರೈತರು ಸ್ವಾಮಿಗೆ ಹೋಳಿಗೆ ನೈವೇದ್ಯ ಅರ್ಪಿಸಿ ಮಳೆ, ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸುವುದು ವಾಡಿಕೆ. ನಾಡಿಗೆ ಕೆಟ್ಟ ಬರಗಾಲ ಬಂದರೂ ಇಲ್ಲಿನ ಬೆಟ್ಟದ ಸುತ್ತಮುತ್ತಲ ಪರಿಸರದಲ್ಲಿ ಉತ್ತಮ ಮಳೆ ಸುರಿದು ಸಮೃದ್ಧ ಫಸಲು ಕೈ ಸೇರುತಿತ್ತು ಎಂದು ರೈತರು ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಬೆಟ್ಟದ ನೆತ್ತಿಯ ಮೇಲೆಲ್ಲಾ ಪವನ ವಿದ್ಯುತ್ ಉತ್ಪಾದನೆಗಾಗಿ ಗಾಳಿ ಯಂತ್ರ ಅಳವಡಿಕೆಯ ಬಳಿಕ ಮೋಡಗಳು ಚದುರಿ ಇಲ್ಲಿಯೂ ಮಳೆಯ ಕೊರತೆ ಉಂಟಾಗಿದೆ ಎಂದು ಸ್ಥಳೀಯರು ಬೇಸರದಿಂದ ಹೇಳುತ್ತಾರೆ.

ಪ್ರವಾಸಿಗರಿಗೆ ಬೇಕು ಮೂಲಸೌಕರ್ಯ:

ಬೆಟ್ಟದ ಮಲ್ಲೇಶ್ವರ ಸುಕ್ಷೇತ್ರದಲ್ಲಿ ಮಾತ್ರ ಕುಡಿಯುವ ನೀರು, ರಸ್ತೆ, ಕೊಠಡಿ ವ್ಯವಸ್ಥೆ ಇದೆ. ಬೆಟ್ಟ ಏರುವ ಚಾರಣಿಗರಿಗೆ ಯಾವುದೇ ಸೌಲಭ್ಯ ಇಲ್ಲ. ಪ್ರವಾಸಿಗರ ಅನುಕೂಲಕ್ಕೆ ಸರ್ಕಾರ ಒಂದಿಷ್ಟು ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಿದರೆ ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ.

ಗಾಳಿ ವಿದ್ಯುತ್ ಉತ್ಪಾದನಾ ಕಂಪೆನಿ ಬೆಟ್ಟವನ್ನು ಸೀಳಿ ತಿರುವುಗಳಾಗಿ ಮಾಡಿರುವ ತಾತ್ಕಾಲಿಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೆಟ್ಟದ ತುದಿಯಲ್ಲಿ ಪಾಳು ಬಿದ್ದ ಸ್ಥಿತಿಯಲ್ಲಿರುವ ಪುರಾತನ ಬಾವಿಗಳನ್ನು ಜೀರ್ಣೊದ್ಧಾರಗೊಳಿಸಿ, ಸುತ್ತಲೂ ರಕ್ಷಣಾ ವ್ಯವಸ್ಥೆ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು