ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ವಿಶ್ವಾಸದ ಪುಗ್ಗ ಬಿಜೆಪಿಯ ಸೂಜಿಮೊನೆ!

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ದಾವಣಗೆರೆ ಜಿಲ್ಲೆ ರಚನೆಯಾಗಿದ್ದು 1997ರಲ್ಲಿ. ಅದರ ನಂತರ 1999ರಲ್ಲಿ ಚುನಾವಣೆ. ಮುಖ್ಯಮಂತ್ರಿ ಗಾದಿ ಮೇಲೆ ಕುಳಿತಿದ್ದ ಜೆ.ಎಚ್. ಪಟೇಲರನ್ನು ಚನ್ನಗಿರಿಯ ಮತದಾರರು ಮೂರನೇ ಸ್ಥಾನಕ್ಕಿಳಿಸಿಬಿಟ್ಟರು.

ಬಿಜೆಪಿಯ ಎಸ್‌.ಎ.ರವೀಂದ್ರನಾಥ್ ಆಗ ಮಾಯಕೊಂಡ ಕ್ಷೇತ್ರದಿಂದ ಗೆದ್ದು, ಬಿಜೆಪಿಗೆ ಒಂದೇ ಒಂದು ಸೀಟು ದಕ್ಕಿಸಿಕೊಟ್ಟಿದ್ದರು. ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಅಷ್ಟೇ ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ವಿಜಯದ ಸಂಕೇತ ತೋರಿದ್ದರು.

ಗದ್ದುಗೆ ಏರುವವರು ಎಷ್ಟರಮಟ್ಟಿಗೆ ಕೈಗೆ ಸಿಗುತ್ತಾರೆ, ಹಳ್ಳಿ ಹಳ್ಳಿಗಳಲ್ಲಿ ಹೇಗೆಲ್ಲ ಸುತ್ತುತ್ತಾರೆ ಎನ್ನುವುದರ ಮೇಲೆ ಮತದಾರ ಇಲ್ಲಿನ ಸ್ಪರ್ಧಿಗಳ ಹಣೆಬರಹ ಬರೆಯುತ್ತಾ ಬಂದಿದ್ದಾನೆ. ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದವರು ವಿರಳ ಎನ್ನುವುದಕ್ಕೆ ಪಕ್ಷಗಳು ಗಿಟ್ಟಿಸುತ್ತಾ ಬಂದಿರುವ ಶೇಕಡಾವಾರು ಮತಗಳೇ ಸಾಕ್ಷಿ.

ಬಳ್ಳಾರಿ ವ್ಯಾಪ್ತಿಯಲ್ಲಿದ್ದ ಹರಪನಹಳ್ಳಿ, ಶಿವಮೊಗ್ಗದ ಅರೆ ಮಲೆನಾಡಾಗಿದ್ದ ಚನ್ನಗಿರಿ ಎರಡೂ ದಾವಣಗೆರೆ ಜಿಲ್ಲೆಗೆ ಒಳಪಟ್ಟ ಮೇಲೆ ಗಮನಾರ್ಹ ರಾಜಕೀಯ ಸ್ಥಿತ್ಯಂತರವಾಗುತ್ತಾ ಬಂದಿತು. ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಶೇಕಡಾವಾರು ಮತ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದು, 2013ರಲ್ಲಿ ‘ಠುಸ್’ ಆಯಿತು. ಅದಕ್ಕೆ ಮುಖ್ಯ ಕಾರಣ ಪಕ್ಷ ಕೆಜೆಪಿ ಹಾಗೂ ಬಿಎಸ್ ಆರ್ ಕಾಂಗ್ರೆಸ್ ಆಗಿ ಹೋಳಾಗಿದ್ದು. ಆ ಚುನಾವಣೆಯಲ್ಲಿ ಕೆಜೆಪಿ ಪ್ರತಿನಿಧಿಸಿದ್ದ ಸ್ಪರ್ಧಿಗಳು ಶೇ 23.30ರಷ್ಟು ಮತಗಳನ್ನು ಜೋಳಿಗೆಗೆ ಹಾಕಿಕೊಂಡರೆ, ಬಿಜೆಪಿ ಪ್ರಮಾಣ ಅದರ ಅರ್ಧವಷ್ಟೆ.

2004ರ ಚುನಾವಣೆಯಿಂದ ಬಿಜೆಪಿ ಜಿಗಿತ ಶುರುವಾಯಿತೆನ್ನಬೇಕು. ಆಗ ಪಕ್ಷ ಮೂರು ಸ್ಥಾನಗಳಲ್ಲಿ ಗೆದ್ದು, ಹಿಂದಿನ ಚುನಾವಣೆಗಿಂತ ಶೇ 9ರಷ್ಟು ಹೆಚ್ಚಿನ ಮತಗಳನ್ನು ಗಿಟ್ಟಿಸಿಕೊಂಡಿತ್ತು. ಟ್ವೆಂಟಿ-20 ಸರ್ಕಾರ ರಚನೆಯಾಗಿ, ವಚನಭ್ರಷ್ಟತೆ ಆಯಿತಲ್ಲ; ಅದರ ಅನುಕಂಪದ ಅಲೆ ಬಿಜೆಪಿಗೆ 2008ರ ಚುನಾವಣೆಯಲ್ಲಿ ವರದಾನವಾಯಿತು. ಒಂಬತ್ತು ವರ್ಷದ ಹಿಂದೆ ಜಿಲ್ಲೆಯ ಬರೀ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ, ಏಳು ಸ್ಥಾನಗಳನ್ನು ತನ್ನದಾಗಿಸಿಕೊಂಡು ಬೀಗಿತು.

2004 ಹಾಗೂ 2008ರಲ್ಲಿ ಮತ ಗಳಿಕೆಯ ಪ್ರಮಾಣದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕಾಂಗ್ರೆಸ್ ಮುಳ್ಳಿನ ಮೇಲೆ ತಿರುಗಣಿ ನಿಂತಿದ್ದು 2013ರಲ್ಲಿ. ಏಳು ಶಾಸಕರನ್ನು ಜಿಲ್ಲೆ ಪಕ್ಷಕ್ಕೆ ಕೊಟ್ಟಿತು. ಅದರ ಮತ ಗಳಿಕೆಯ ಪ್ರಮಾಣ 16 ಪ್ರತಿಶತದಷ್ಟು ಹೆಚ್ಚಾಗಲು ಬಿಜೆಪಿ ಹೋಳುಗಳಾದದ್ದೇ ಕಾರಣ. ಜೆಡಿಎಸ್ ಮಾತ್ರ ಮತ ಗಳಿಕೆಯ ಪ್ರಮಾಣದಲ್ಲಿ ಇಲ್ಲಿ ಆರಕ್ಕೇರಲು ಆಗಲೇ ಇಲ್ಲ.

ಈಗ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಮಗ ಎಸ್. ಎಸ್. ಮಲ್ಲಿಕಾರ್ಜುನ ಕ್ರಮವಾಗಿ ದಾವಣಗೆರೆ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಿಂತು, ಆತ್ಮವಿಶ್ವಾಸದಿಂದ ಎದೆಯುಬ್ಬಿಸಿದ್ದಾರೆ. ರವೀಂದ್ರನಾಥ್ ಪರವಾಗಿ ಓಡಾಡುತ್ತಿರುವ ಬಿಜೆಪಿಯ ಹುಡುಗರನ್ನು ನೋಡಿ ಮಲ್ಲಿಕಾರ್ಜುನ ಅವರ ಹಣೆಮೇಲೆ ಬೆವರ ಹನಿಗಳು ಮೂಡುತ್ತಿವೆ ಎಂಬ ಅಭಿಪ್ರಾಯವಿದೆ.

ದಾವಣಗೆರೆ ನಗರದ ಗಲ್ಲಿ ಗಲ್ಲಿಗಳಿಗೂ ಹಾಸಿರುವ ಕಾಂಕ್ರೀಟ್ ರಸ್ತೆಗಳನ್ನು ಕಾಂಗ್ರೆಸ್ ತೋರಿಸಿ, ಅದು ಸಾಧನೆ ಎನ್ನುತ್ತಿದೆ. ಹಳೆ ದಾವಣಗೆರೆಯ ದೊಡ್ಡಮೋರಿಗಳಿಂದ ಹೊಮ್ಮುವ ದುರ್ನಾತದ ಕಡೆ ಬೆರಳು ಮಾಡಿ, ‘ನೋಡಿ ನಮ್ಮ ಸ್ಮಾರ್ಟ್ ಸಿಟಿ’ ಎಂದು ಬಿಜೆಪಿ ಕಾರ್ಯಕರ್ತರು ಛೇಡಿಸುತ್ತಾರೆ.

ಜಿಲ್ಲೆಯ ಕಡೆಭಾಗಗಳಿಗೆ ಭದ್ರಾ ನದಿ ನೀರು ತಲುಪಿಲ್ಲವೆಂಬ ಜನರ ಅಸಮಾಧಾನದ ಬಿಸಿಗಾಳಿಯನ್ನು ಬಿಜೆಪಿ ತನ್ನ ಬಲೂನಿಗೆ ತುಂಬಿಸಿಕೊಂಡಿದೆ. ಆ ಬಲೂನಿಗೆ ತಾಕಿಸಲು ‘ಜಲಸಿರಿ’ ಯೋಜನೆಯ ಸೂಜಿಮೊನೆಯನ್ನು ಕಾಂಗ್ರೆಸ್ ಮುಂದುಮಾಡಿದೆ.

ಅಪ್ಪನ ನಾಮಬಲದಿಂದಲೇ ದಶಕದ ಹಿಂದೆ ಗೆದ್ದು ಬೀಗಿದ್ದ ಎಂ.ಪಿ.ರವೀಂದ್ರ ಈಗ ಹರಪನಹಳ್ಳಿಯಲ್ಲಿ ಹೈರಾಣು. ಅನಾರೋಗ್ಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ಅವರಿಗೆ 371 ‘ಜೆ’ ಸೌಕರ್ಯದ ಬೆಳ್ಳಿಗೆರೆಯ ನಿರೀಕ್ಷೆ. ಬಿಜೆಪಿಯ ಹಳೆಯ ಹುಲಿ ಜಿ.ಕರುಣಾಕರ ರೆಡ್ಡಿ ಹಳೆಯ ಫಾರ್ಮ್‌ಗೆ ಮರಳಿರುವ ಉತ್ಸಾಹ ತುಳುಕಿಸಲು ‘ಮೋದಿ ಫ್ಯಾಕ್ಟರ್’ ಬಳಸಿಕೊಳ್ಳುತ್ತಿದ್ದಾರೆ. ಹೊನ್ನಾಳಿ, ಹರಿಹರದಲ್ಲೂ ಬಿಜೆಪಿಗೆ ಮೋದಿ ಅವರೇ ಬಲ. ಮಾಯಕೊಂಡದಲ್ಲಿ ಕಾಂಗ್ರೆಸ್ ಒಳಬಂಡಾಯದ ಕೆಂಡದ ಮೇಲೆ ನಡೆಯಬೇಕಿರುವುದೂ ಬಿಜೆಪಿಗೆ ಅವಕಾಶವೆಂಬಂತೆ ಕಾಣುತ್ತಿದೆ. ಅಮಿತ್ ಶಾ ದಾವಣಗೆರೆಯಲ್ಲಿ ವಾರದ ಹಿಂದೆ ನಡೆಸಿದ ರೋಡ್ ಷೋಗೆ ಸೇರಿದ್ದ ಜನ ಪಕ್ಷದವರ ಉತ್ಸಾಹಕ್ಕೆ ಕನ್ನಡಿ ಹಿಡಿದರು.

ತರಳಬಾಳು ಸಿರಿಗೆರೆ ಸ್ವಾಮೀಜಿ ಜಗಳೂರು ಹಾಗೂ ಚನ್ನಗಿರಿಯಲ್ಲಿ ಚುನಾವಣಾ ಪ್ರಯೋಗಕ್ಕೆ ಆಹ್ವಾನ ನೀಡಿದ್ದರು. ಎಲ್ಲ ಅಭ್ಯರ್ಥಿಗಳೂ ಮಠದಲ್ಲೇ ಉಳಿದುಕೊಂಡು, ಹಣ-ಹೆಂಡ ಹಂಚದೆ ನ್ಯಾಯಿಕ ಚುನಾವಣೆ ನಡೆಯಲಿ ಎನ್ನುವ ಸದಾಶಯ ಅವರದ್ದಾಗಿತ್ತು. ಆದರೆ, ಇದಕ್ಕೆ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅದು ಬಿಜೆಪಿಗೇ ಹೆಚ್ಚು ಅನುಕೂಲವಾಗುತ್ತದೆ ಎಂಬ ಅನ್ಯ ಪಕ್ಷಗಳ ಅಂದಾಜು ಪ್ರಯೋಗಕ್ಕೆ ಒಪ್ಪದಿರಲು ಕಾರಣ ಎನ್ನಲಾಗುತ್ತಿದೆ.

ಜಗಳೂರಿನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ವೋಲ್ವೊ ಬಸ್ ಮಾಡಿಕೊಂಡು ಪ್ರಚಾರ ನಡೆಸಿರುವ ಪುಷ್ಪಾ ಲಕ್ಷ್ಮಣಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಗೆ ತಲೆನೋವಾಗಬಹುದು.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಪರ್ಯಾಯ ಶಕ್ತಿಯಾಗಿ ಹೊಮ್ಮಲು 197 ಹಳ್ಳಿಗಳನ್ನು ಸುತ್ತಿರುವುದನ್ನು ಜಿಲ್ಲೆಯ ಮುಸ್ಲಿಂ ಮತದಾರರು ಗಂಭೀರವಾಗಿ ಪರಿಗಣಿಸಿದ್ದಾರೆ. ಚನ್ನಗಿರಿಯಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಹೆಚ್ಚಾಗಿರುವುದರಿಂದ ಇದು ನಿರ್ಣಾಯಕವೂ ಆದೀತು. ಒಂದೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸುತ್ತ ಇರುವ ಯುವಬಲವನ್ನೂ ನಿರ್ಲಕ್ಷಿಸಲಾಗದು.

ಮತದಾರರು ಯಾರೂ ವೀರಶೈವ-ಲಿಂಗಾಯತ ವಿವಾದ ಈ ಚುನಾವಣೆ ಮೇಲೆ ಪರಿಣಾಮ ಬೀರೀತು ಎನ್ನುತ್ತಿಲ್ಲ. ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸರ್ಕಾರದ ವಿರುದ್ಧವೇ ಮಾತನಾಡಿದರೂ ಶಾಮನೂರು ಶಿವಶಂಕರಪ್ಪ ಅದು ಚುನಾವಣೆಯ ನಂಜಾಗದಂತೆ ಎಚ್ಚರ ವಹಿಸಿರುವುದು ಜಾಣ್ಮೆ.

ಚುನಾಯಿತ ಪ್ರತಿನಿಧಿಗಳು, ಅಭ್ಯರ್ಥಿಗಳ ಹಿನ್ನೆಲೆಯಷ್ಟೇ ಚುನಾವಣೆಯಲ್ಲಿ ಮುಖ್ಯ ಮಾನದಂಡವಾಗಿ ಪರಿಣಮಿಸುತ್ತವೆ

-ನಜೀರ್, ಹಿರಿಯ ಪತ್ರಕರ್ತ

*****

ಜಿಲ್ಲೆಯ ಕ್ಷೇತ್ರಗಳಲ್ಲಿ ಗೆದ್ದವರು

ಕ್ಷೇತ್ರ 2008 2013
ಜಗಳೂರು ಎಸ್.ವಿ. ರಾಮಚಂದ್ರ (ಕಾಂಗ್ರೆಸ್) ಎಚ್.ಪಿ. ರಾಜೇಶ್ (ಕಾಂಗ್ರೆಸ್)
ಹರಪನಹಳ್ಳಿ ಜಿ. ಕರುಣಾಕರರೆಡ್ಡಿ (ಬಿಜೆಪಿ) ಎಂ.ಪಿ. ರವೀಂದ್ರ (ಕಾಂಗ್ರೆಸ್)
ಹರಿಹರ ಬಿ.ಪಿ. ಹರೀಶ್ (ಬಿಜೆಪಿ) ಎಚ್.ಎಸ್. ಶಿವಶಂಕರ್ (ಜೆಡಿಎಸ್)
ದಾವಣಗೆರೆ ಉತ್ತರ ಎಸ್.ಎ. ರವೀಂದ್ರನಾಥ್ (ಬಿಜೆಪಿ), ಎಸ್.ಎಸ್. ಮಲ್ಲಿಕಾರ್ಜುನ (ಕಾಂಗ್ರೆಸ್)
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್) ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್)
ಮಾಯಕೊಂಡ ಎಂ. ಬಸವರಾಜನಾಯ್ಕ (ಬಿಜೆಪಿ) ಕೆ. ಶಿವಮೂರ್ತಿ (ಕಾಂಗ್ರೆಸ್)
ಚನ್ನಗಿರಿ ಮಾಡಾಳ್ ವಿರೂಪಾಕ್ಷಪ್ಪ (ಬಿಜೆಪಿ) ವಡ್ನಾಳ್ ರಾಜಣ್ಣ (ಕಾಂಗ್ರೆಸ್)
ಹೊನ್ನಾಳಿ ಎಂ.ಪಿ. ರೇಣುಕಾಚಾರ್ಯ (ಬಿಜೆಪಿ) ಡಿ.ಜಿ. ಶಾಂತನಗೌಡ (ಕಾಂಗ್ರೆಸ್)

ಹೊಸ ಮತದಾರರ ಸಂಖ್ಯೆ 32,436

ಜಿಲ್ಲೆಯಲ್ಲಿ ಶೇಕಡಾವಾರು ಮತ ಹಂಚಿಕೆ

ಪಕ್ಷ 1999 2004 2008 2013
ಕಾಂಗ್ರೆಸ್ 34.22 32.70 31.74 46.26
ಬಿಜೆಪಿ 19 27.93 45.71 12
ಜೆಡಿಎಸ್ 12 17.33 14 12.35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT