ಸೋಮವಾರ, ಜನವರಿ 18, 2021
21 °C
ಮದ್ರಾಸ್‌ ಸರ್ಕಾರದಿಂದ ಬಿಜೆಪಿ ಸರ್ಕಾರದವರೆಗೆ ಜಿಲ್ಲೆ ವಿಭಜನೆ ಯಾತ್ರೆ

ಬಳ್ಳಾರಿ: ಅಂದು 15, ಇಂದು 5 ತಾಲ್ಲೂಕು!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಜ್ಯ ಸರ್ಕಾರವು ಬಳ್ಳಾರಿ ಜಿಲ್ಲೆಯ ವಿಭಜನೆಗೆ ಶುಕ್ರವಾರ ಅಂತಿಮ ಒಪ್ಪಿಗೆ ನೀಡಿದ ಬಳಿಕ, ಈಗ ಬಳ್ಳಾರಿ ಜಿಲ್ಲೆಯಲ್ಲಿ 5 ತಾಲ್ಲೂಕುಗಳು ಉಳಿದಿವೆ. ವಿಜಯನಗರ ಜಿಲ್ಲೆಗೆ 6 ತಾಲ್ಲೂಕುಗಳಿವೆ. 11ರಿಂದ 5 ತಾಲ್ಲೂಕುಗಳಿಗೆ ಇಳಿದು ವಿಜಯನಗರ ಜಿಲ್ಲೆಗಿಂತಲೂ ಕ್ಷೇತ್ರ ಮತ್ತು ವಿಸ್ತೀರ್ಣದಲ್ಲಿ ಬಳ್ಳಾರಿ ಕಿರಿದಾಗಿದೆ.

ರಾಜರ ಆಡಳಿತ ಮುಗಿದು, ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿದ ಬಳಿಕ ಈ ಜಿಲ್ಲೆಯಲ್ಲಿ 15 ತಾಲ್ಲೂಕುಗಳಿದ್ದವು. ಈಗ ಐದಕ್ಕೆ ಇಳಿಯುವವರೆಗೆ ತನ್ನ ವ್ಯಾಪ್ತಿಯ ತಾಲ್ಲೂಕುಗಳನ್ನು ಆಡಳಿತದ ಅನುಕೂಲಕ್ಕಾಗಿ ಬಿಟ್ಟುಕೊಡುತ್ತಾ ಬಳ್ಳಾರಿಯು ಹಲವು ಬಾರಿ ವಿಭಜನೆಗೊಂಡ ಚರಿತ್ರೆಯೂ ದಾಖಲಾಗಿದೆ.

15 ತಾಲ್ಲೂಕು: ‘ಸರ್‌ ಥಾಮಸ್‌ ಮನ್ರೋ ಮದ್ರಾಸ್‌ ಪ್ರಾಂತ್ಯದ ಗವರ್ನರ್ ಆಗಿದ್ದ ಸಂದರ್ಭದಲ್ಲಿ, 1808ರಲ್ಲಿ ಕಡಪ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಪ್ರತ್ಯೇಕಗೊಳಿಸಲಾಗಿತ್ತು. ಬಳ್ಳಾರಿಯಲ್ಲಿ ಆಗ ಧರ್ಮಾವರಂ, ಪೆನುಕೊಂಡ, ಹಿಂದೂಪುರ, ಮಡಕಶಿರ, ಗುತ್ತಿ, ತಾಡಪತ್ರಿ, ಅನಂತಪುರ, ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ, ರಾಯದುರ್ಗ, ಆಲೂರು ಮತ್ತು ಆದೋನಿ ತಾಲ್ಲೂಕುಗಳು ಸೇರ್ಪಡೆಯಾಗಿದ್ದವು’ ಎಂದು ಬಳ್ಳಾರಿ ಜಿಲ್ಲಾ ಗೆಜೆಟಿಯರ್‌ನಲ್ಲಿ ದಾಖಲಾಗಿದೆ.

ಗೆಜೆಟಿಯರ್‌ ಪ್ರಕಾರ, ’1882ರಲ್ಲಿ ಮತ್ತೆ ಬಳ್ಳಾರಿಯನ್ನು ವಿಭಜಿಸಿ ಧರ್ಮಾವರಂ, ಪೆನುಕೊಂಡ, ಹಿಂದೂಪುರ, ಮಡಕಶಿರ, ಗುತ್ತಿ, ತಾಡಪತ್ರಿ, ಅನಂತಪುರವನ್ನು ಸೇರಿಸಿ ಅನಂತಪುರ ಜಿಲ್ಲೆಯನ್ನು ರಚಿಸಲಾಗಿತ್ತು. ಉಳಿದ ಎಂಟು ತಾಲ್ಲೂಕುಗಳನ್ನು ಬಳ್ಳಾರಿಯಲ್ಲಿ ಉಳಿಸಲಾಗಿತ್ತು. ಆಗ ರಾಯದುರ್ಗ, ಬಳ್ಳಾರಿ, ಆದೋನಿ, ಹೊಸಪೇಟೆ ಉಪವಿಭಾಗಗಳನ್ನು ರಚಿಸಲಾಗಿತ್ತು’

1910ರಲ್ಲಿ ಸಿರುಗುಪ್ಪ: ಬಳ್ಳಾರಿ ತಾಲ್ಲೂಕಿನ 46 ಗ್ರಾಮ, ಆಲೂರಿನ 29, ಆದೋನಿಯ 23 ಗ್ರಾಮಗಳನ್ನು ಬೇರ್ಪಡಿಸಿ 1919ರ ಅ.1ರಂದು ಸಿರುಗುಪ್ಪ ತಾಲ್ಲೂಕನ್ನು ರಚಿಸಲಾಯಿತು. ಆ ಮೂಲಕ 9 ತಾಲ್ಲೂಕುಗಳು ಆಗ ಅಸ್ತಿತ್ವದಲ್ಲಿದ್ದವು’.

‘ಮತ್ತೆ 1923ರ ಏಪ್ರಿಲ್‌ 1ರಂದು ಸಿರುಗುಪ್ಪ ತಾಲ್ಲೂಕನ್ನು ರದ್ದುಗೊಳಿಸಿ ಬಳ್ಳಾರಿಗೆ 46 ಗ್ರಾಮ, ಆದೋನಿಗೆ 42 ಗ್ರಾಮ ಮತ್ತು ಆಲೂರಿಗೆ 6 ಗ್ರಾಮಗಳನ್ನು ವಾಪಸು ನೀಡಲಾಗಿತ್ತು. ಅದೇ ಸಮಯದಲ್ಲೇ ಬಳ್ಳಾರಿಯ 10 ಗ್ರಾಮಗಳನ್ನು ರಾಯದುರ್ಗ ತಾಲ್ಲೂಕಿಗೆ ವರ್ಗಾಯಿಸಲಾಗಿತ್ತು. 1929ರ ಏಪ್ರಿಲ್‌ 15ರಂದು ಮತ್ತೆ, ಬಳ್ಳಾರಿ, ಆದೋನಿ, ಆಲೂರಿನ ಹಲವು ಗ್ರಾಮಗಳನ್ನು ಸೇರಿಸಿ ಸಿರುಗುಪ್ಪ ತಾಲ್ಲೂಕನ್ನು ರಚಿಸಲಾಯಿತು’.

‘ಹಡಗಲಿಯ 24 ಗ್ರಾಮಗಳನ್ನು ಹರಪನಹಳ್ಳಿಗೆ ವರ್ಗಾಯಿಸಿ 1931ರಲ್ಲಿ ಹಡಗಲಿಯನ್ನು ಉಪತಾಲ್ಲೂಕಾಗಿ ಪರಿವರ್ತಿಸಲಾಯಿತು. ಒಂದು ದಶಕದ ಬಳಿಕ ಮತ್ತೆ ಅದೇ ಗ್ರಾಮಗಳನ್ನು ಸೇರಿಸಿ ಹಡಗಲಿ ತಾಲ್ಲೂಕನ್ನು ಮತ್ತೆ ರಚಿಸಲಾಯಿತು’.

‘ತುಂಗಭದ್ರಾ ಜಲಾಶಯದಿಂದ ಮುಳುಗಡೆ ಭೀತಿಯಲ್ಲಿದ್ದ ಹೊಸಪೇಟೆ ಮತ್ತು ಹಡಗಲಿಯ ಗ್ರಾಮಗಳನ್ನು ಸೇರಿಸಿ ಮಲ್ಲಾಪುರ ಉಪತಾಲ್ಲೂಕು ರಚಿಸಲಾಗಿತ್ತು. ಆ ಅವಧಿಯಲ್ಲಿ ಜಿಲ್ಲೆಯಲ್ಲಿ (ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ, ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಆದೋನಿ, ಆಲೂರು ಮತ್ತು ರಾಯದುರ್ಗ) 10 ತಾಲ್ಲೂಕುಗಳಿದ್ದವು’ ಎಂದು ಗೆಜೆಟಿಯರ್‌ ಹೇಳುತ್ತದೆ.

1950ರಲ್ಲಿ ಸಂಡೂರು ಅಸ್ತಿತ್ವಕ್ಕೆ
ದೇಶಕ್ಕೆ ಸ್ವಾತಂತ್ರ್ಯ ದೊರಕುವವರೆಗೂ ಸಂಡೂರು ರಾಜಸಂಸ್ಥಾನಕ್ಕೆ ಸೇರಿತ್ತು. ರಾಜವಂಶಸ್ಥರು 1950ರಲ್ಲಿ ಸೇರ್ಪಡೆ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಕೂಡ್ಲಿಗಿಯ ಚೋರನೂರು ಹಾಗೂ ಹೊಸಪೇಟೆಯ ತೋರಣಗಲ್‌ ಹೋಬಳಿಯನ್ನು ಸೇರಿಸಿ ಸಂಡೂರನ್ನು ಬಳ್ಳಾರಿ ಜಿಲ್ಲೆಯ ಹತ್ತನೇ ತಾಲ್ಲೂಕಾಗಿ ರಚಿಸಲಾಯಿತು.

ಆಂಧ್ರಕ್ಕೆ ಸೇರ್ಪಡೆ ವಿರುದ್ಧ ಹೋರಾಟ
ತೆಲುಗು ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ರಚನೆಯಾಗಬೇಕು ಎಂಬ ಆಗ್ರಹ ಎದ್ದ ಬಳಿಕ, ಬಳ್ಳಾರಿಯಲ್ಲೂ ಕನ್ನಡಿಗರನ್ನು ಆಂಧ್ರಕ್ಕೆ ಸೇರಿಸಬಾರದು ಎಂದು ಹೋರಾಟ ಶುರುವಾಗಿತ್ತು.

ನಂತರ, ಆಂಧ್ರ ರಾಜ್ಯದ ರಚನೆಗೆ 1953ರ ಮಾರ್ಚ್‌ 25ರಂದು ಸಮ್ಮತಿ ಸೂಚಿಸಿದ್ದ ಕೇಂದ್ರ ಸರ್ಕಾರವು, ‘ಸೇರ್ಪಡೆ ಉದ್ದೇಶದಿಂದ ಬಳ್ಳಾರಿಯನ್ನು ಒಂದು ಪೂರ್ಣ ಘಟಕವಾಗಿ ಆಂಧ್ರವಾಗಲೀ, ಮೈಸೂರು ಸರ್ಕಾರವಾಗಲೀ ಪರಿಗಣಿಸುವಂತಿಲ್ಲ. ಆದೋನಿ, ಆಲೂರು, ರಾಯದುರ್ಗವನ್ನು ಆಂಧ್ರಕ್ಕೆ ಸೇರಿಸಬೇಕು. ಕನ್ನಡಿಗರು ಹೆಚ್ಚಿರುವ ಉಳಿದವುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಬೇಕು’ ಎಂದು ಸೂಚಿಸಿತ್ತು. ಕನ್ನಡಿಗರು ನಡೆಸಿದ್ದ ಒಗ್ಗಟ್ಟಿನ ಹೋರಾಟದಲ್ಲಿ ಪೈಲ್ವಾನ್‌ ರಂಜಾನ್‌ ಸಾಬ್‌ ಹುತಾತ್ಮರಾಗಿದ್ದರು.

ಆಂಧ್ರ ರಾಜ್ಯ ರಚನೆಯಾದ 1953ರ ಅಕ್ಟೋಬರ್‌ 1ರಂದು ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳಾದ ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ, ಹರಪನಹಳ್ಳಿ, ಹಡಗಲಿ ಮತ್ತು ಕೂಡ್ಲಿಗಿ ಹಾಗೂ ಮಲ್ಲಾಪುರ ಉಪತಾಲ್ಲೂಕು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದವು. ನಂತರದ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ಕಂಪ್ಲಿ, ಕುರುಗೋಡು, ಕೊಟ್ಟೂರು ತಾಲ್ಲೂಕುಗಳು ರಚನೆಯಾಗಿ 11 ತಾಲ್ಲೂಕುಗಳಿದ್ದವು. ಈಗ 5ಕ್ಕೆ ಇಳಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು