ಪ್ರಭುತ್ವದ ಕಣ್ತರೆಸಿದ ಹೋರಾಟ

7
ಹೋರಾಟಗಾರ್ತಿಯರ ಮನದಾಳ; ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ವಿಧಿಸಿ, ಹಿಂಪಡೆದ ಕೇಂದ್ರ

ಪ್ರಭುತ್ವದ ಕಣ್ತರೆಸಿದ ಹೋರಾಟ

Published:
Updated:
Deccan Herald

ಹೊಸಪೇಟೆ: ‘ಮಹಿಳೆಯರು ಉಪಯೋಗಿಸುವ ನ್ಯಾಪ್‌ಕಿನ್‌ಗಳ ಮೇಲೆ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ) ಹಾಕುವುದರ ಮೂಲಕ ಸಂವೇದನೆ ಕಳೆದುಕೊಂಡವರಂತೆ ವರ್ತಿಸಿತ್ತು. ಆದರೆ, ಮಹಿಳಾ ಸಂಘಟನೆಗಳಿಂದ ನಡೆದ ದೊಡ್ಡ ಹೋರಾಟಕ್ಕೆ ತಲೆಬಾಗಿ ಕೊನೆಗೂ ತೆರಿಗೆ ಕೈಬಿಟ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಹೋರಾಟಕ್ಕೆ ಸಂದ ದೊಡ್ಡ ಜಯವಿದು’

ಮಹಿಳೆಯರು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಜಿಲ್ಲೆಯ ಹೋರಾಟಗಾರ್ತಿಯರ ಮಾತುಗಳಿವು.

ಎಲ್ಲ ವಿಷಯಗಳಲ್ಲೂ ಸರ್ಕಾರ ವ್ಯಾಪಾರಿ ಮನೋಭಾವ ಪ್ರದರ್ಶಿಸಬಾರದು. ಕೆಲವೊಂದು ವಿಷಯಗಳಲ್ಲಿ ಸೂಕ್ಷ್ಮ ಸಂವೇದನೆ ಹೊಂದಿರಬೇಕು. ಆ ಸಂವೇದನೆ ಕಳೆದುಕೊಂಡರೆ ಪ್ರಮಾದಗಳು ಆಗಿ ಬಿಡುತ್ತವೆ. ಭವಿಷ್ಯದಲ್ಲಿ ಮತ್ತೆ ಅಂತಹ ಪ್ರಮಾದಗಳು ನಡೆಯಬಾರದು ಎಂದರೆ ಹೋರಾಟಗಳು ಅನಿವಾರ್ಯವಾಗಿ ಬಿಡುತ್ತವೆ. ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ಹಾಕಿದಾಗ ನಡೆದದ್ದು ಇದೇ ಎನ್ನುತ್ತಾರೆ ಮಹಿಳಾ ಮಣಿಗಳು.

‘ಅನೇಕ ದೇಶಗಳಲ್ಲಿ ಅಲ್ಲಿನ ಸರ್ಕಾರ ತಮ್ಮ ಪ್ರಜೆಗಳಿಗೆ ಶಿಕ್ಷಣ, ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಹೀಗಿರುವಾಗ ನಮ್ಮ ದೇಶದಲ್ಲಿ ಈ ಎರಡೂ ಕ್ಷೇತ್ರಗಳು ವ್ಯಾಪಾರದ ಸ್ವರೂಪ ಪಡೆದುಕೊಂಡಿವೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಹಿಂದೆ, ಮುಂದೆ ಯೋಚಿಸದೆ ಹೆಣ್ಣು ಮಕ್ಕಳು ಉಪಯೋಗಿಸುವ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ಹಾಕಿತ್ತು’ ಎನ್ನುತ್ತಾರೆ ಹೋರಾಟಗಾರ್ತಿ ನಾಗರತ್ನಮ್ಮ.

‘ಇಂದಿಗೂ ದೇಶದ ಅನೇಕ ಭಾಗಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶಗಳಿಲ್ಲ. ನ್ಯಾಪ್‌ಕಿನ್‌ ಖರೀದಿಸುವುದು ದೂರದ ಮಾತಾಗಿದೆ. ಹೀಗಿರುವಾಗ ಅದರ ಮೇಲೆ ತೆರಿಗೆ ಹಾಕಿದರೆ ಅದು ಉಳ್ಳವರಿಗಷ್ಟೇ ಸೀಮಿತವಾಗಿರುತ್ತಿತ್ತು. ಆದರೆ, ಮಹಿಳಾ ಸಂಘಟನೆಗಳು ಸಕಾಲಕ್ಕೆ ಎಚ್ಚೆತ್ತುಕೊಂಡು ಅದರ ವಿರುದ್ಧ ಧ್ವನಿ ಎತ್ತಿ, ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಚರಿತ್ರಾರ್ಹ ಸಂಗತಿ’ ಎಂದು ಬಣ್ಣಿಸಿದರು.

ಹೋರಾಟಗಳ ಜತೆ ಜತೆಗೆ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಮಂಜಮ್ಮ ಜೋಗತಿ ಪ್ರತಿಕ್ರಿಯಿಸಿ, ‘ಹಳ್ಳಿಗಳಲ್ಲಿ ಈಗಲೂ ಇಡೀ ದಿನ ₨50ಕ್ಕೆ ಮಹಿಳೆಯರು ಕೂಲಿ ಕೆಲಸ ಮಾಡುತ್ತಾರೆ. ಆ ದಿನದ ಕೂಲಿ ಹಣದಲ್ಲಿ ಅವರು ಮನೆ ನಡೆಸುತ್ತಾರೆ. ನ್ಯಾಪ್‌ಕಿನ್‌ ಬಗ್ಗೆ ಯೋಚಿಸುವುದಂತೂ ದೂರದ ವಿಷಯ. ಹೀಗಿರುವಾಗ ಸರ್ಕಾರ ತೆರಿಗೆ ಹಾಕಲು ಹೋಗಿ, ಛೀಮಾರಿ ಹಾಕಿಸಿಕೊಂಡಿತ್ತು. ಹಾಗೆ ನೋಡಿದರೆ ನ್ಯಾಪಕಿನ್‌ ಕೂಡ ಸ್ವಚ್ಛತೆಯ ಒಂದು ಭಾಗ. ಅದರ ಬಗ್ಗೆ ಅರಿವು ಮೂಡಿಸಿ, ಮಹಿಳೆಯರಿಗೆ ಉಚಿತವಾಗಿ ವಿತರಿಸಬೇಕು’ ಎಂದು ಆಗ್ರಹಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !