ಶುಕ್ರವಾರ, ನವೆಂಬರ್ 22, 2019
25 °C
ಖಾಲಿ ಹುದ್ದೆಗಳ ಭರ್ತಿಗೆ ಮೀನಮೇಷ ಎಣಿಸುತ್ತಿರುವ ಸರ್ಕಾರ

149 ಹೆಕ್ಟೇರ್‌ ಪ್ರದೇಶದ ವಿಶಾಲ ಮೃಗಾಲಯಕ್ಕೆ ಬೆರಳೆಣಿಕೆ ಸಿಬ್ಬಂದಿ!

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಬಿಳಿಕಲ್‌ ಸಂರಕ್ಷಿತ ಅರಣ್ಯದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಶನಿವಾರದಿಂದ (ನ.2) ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಆದರೆ, ಅದರ ಕಾರ್ಯನಿರ್ವಹಣೆಗೆ ಎಷ್ಟು ಸಿಬ್ಬಂದಿಯ ಅಗತ್ಯವಿದೆಯೋ ಅಷ್ಟು ಇದುವರೆಗೆ ತುಂಬಿಲ್ಲ.

ಉದ್ಯಾನದಲ್ಲಿ ಈಗಾಗಲೇ ಹುಲಿ, ಸಿಂಹ ಸಫಾರಿ ಆರಂಭಗೊಂಡಿದೆ. ಇಂದಿರಾ ಪ್ರಿಯದರ್ಶಿನಿ ಜಿಂಕೆ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಂಡಿದೆ. ಕೊನೆಯ ಹಂತದಲ್ಲಿ ಪ್ರಾಣಿ ಸಂಗ್ರಹಾಲಯ ಶನಿವಾರ ಉದ್ಘಾಟನೆಗೊಳ್ಳಲಿದೆ.

149 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಉದ್ಯಾನದ ನಿರ್ವಹಣೆಗೆ ಸರ್ಕಾರದಿಂದ ಮಂಜೂರಾದ ಒಟ್ಟು ಹುದ್ದೆಗಳ ಪೈಕಿ ಅರ್ಧದಷ್ಟು ಇದುವರೆಗೆ ತುಂಬಿಲ್ಲ. 166 ಮಂಜೂರಾದ ಹುದ್ದೆಗಳಲ್ಲಿ ಏಳು ಕಾಯಂ ಇದ್ದು, ಮಿಕ್ಕುಳಿದದ್ದೆಲ್ಲವೂ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದು ಸೇರಿದೆ.

ಸದ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ ಹುದ್ದೆಗಳನ್ನು ತುಂಬಲಾಗಿದೆ. ವೈದ್ಯ, ಸಿವಿಲ್‌ ಎಂಜಿನಿಯರ್‌ ಹಾಗೂ ತೋಟಗಾರಿಕೆ ಅಧಿಕಾರಿಯ ಕಾಯಂ ಹುದ್ದೆ ಇನ್ನಷ್ಟೇ ತುಂಬಬೇಕಿದೆ. ತಾತ್ಕಾಲಿಕವಾಗಿ ಆ ಹುದ್ದೆಗಳನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ.

ಸದ್ಯ 18 ಜನ ಹೊರಗುತ್ತಿಗೆ ಮೇಲೆ ಉದ್ಯಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಬಳ್ಳಾರಿಯ ಕಿರು ಮೃಗಾಲಯದಿಂದ ಎಂಟು ಜನ ಕಾಯಂಅಲ್ಲದ ನೌಕರರನ್ನು ಇಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳು, ಸಫಾರಿ ವೀಕ್ಷಣೆಗೆ ಕರೆದೊಯ್ಯುವ ವಾಹನಗಳನ್ನು ಓಡಿಸಲು ಆರು ಜನ ಚಾಲಕರಿದ್ದಾರೆ. ಇನ್ನುಳಿದ ಹನ್ನೆರಡು ಜನರಲ್ಲಿಯೇ ಎಲ್ಲ ರೀತಿಯ ಕೆಲಸ ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

‘ವಾಜಪೇಯಿ ಉದ್ಯಾನ ಆರಂಭಗೊಂಡ ನಂತರ ಸ್ಥಳೀಯರಿಗೆ ಉದ್ಯೋಗಗಳು ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಹುಸಿಯಾಗಿದೆ. ಬೆರಳೆಣಿಕೆಯಷ್ಟು ಸಿಬ್ಬಂದಿಯೊಂದಿಗೆ ಉದ್ಯಾನ ನಡೆಸುತ್ತಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ’ ಎಂದು ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ ತಿಳಿಸಿದರು.

‘ಮೃಗಾಲಯ ನಿರ್ವಹಣೆ ಸುಲಭವಾದ ವಿಷಯವಲ್ಲ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಗತ್ಯ ಸಿಬ್ಬಂದಿಯನ್ನು ತುರ್ತಾಗಿ ನೇಮಿಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)