ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತುತ್ತಿರುವ ಕೆರೆಗೆ ಪಕ್ಷಿಗಳ ಹಿಂಡು!

ಕೇಸರಿನಲ್ಲಿ ಯಥೇಚ್ಛ ಆಹಾರ ಲಭ್ಯ; 50ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಲಗ್ಗೆ
ಅಕ್ಷರ ಗಾತ್ರ

ಹೊಸಪೇಟೆ: ಪ್ರಖರವಾದ ಬಿಸಿಲಿನಿಂದ ಜಲಮೂಲಗಳು ಬತ್ತಿ ಹೋಗುತ್ತಿರುವುದಕ್ಕೆ ಜನ ಚಿಂತಕ್ರಾಂತರಾಗಿದ್ದಾರೆ. ಆದರೆ ಕೆರೆ, ಕಟ್ಟೆಗಳು ಬತ್ತುತ್ತಿರುವುದರಿಂದ ಪಕ್ಷಿಗಳು ಸಂಭ್ರಮಿಸುತ್ತಿವೆ!

ಅಚ್ಚರಿ ಅನಿಸಿದರೂ ಇದು ನಿಜ. ಕೆರೆಗಳು ಬತ್ತುವ ಹಂತಕ್ಕೆ ಬರುತ್ತಿದ್ದಂತೆ ಪಕ್ಷಿಗಳಿಗೆ ಯಥೇಚ್ಛವಾಗಿ ಆ ಪ್ರದೇಶದಲ್ಲಿ ಆಹಾರ ಸಿಗುತ್ತದೆ. ಈ ಕಾರಣಕ್ಕಾಗಿ ಅವುಗಳು ಹಿಂಡು ಹಿಂಡಾಗಿ ಅಂತಹ ಕೆರೆಗಳ ಅಂಗಳಕ್ಕೆ ಲಗ್ಗೆ ಇಡುತ್ತವೆ.

ತಾಲ್ಲೂಕಿನ ಕಮಲಾಪುರ ಕೆರೆ, ಅಳ್ಳಿಕೆರೆ, ಡಣಾಯನಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ಬತ್ತುವ ಸ್ಥಿತಿಗೆ ಬಂದಿವೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ನೂರಾರು ಪಕ್ಷಿಗಳು ಈ ಕೆರೆಗಳಿಗೆ ಲಗ್ಗೆ ಇಟ್ಟಿವೆ. ಬಿಳಿ ಕತ್ತಿನ ಕೊಕ್ಕರೆ, ನೀರು ಕಾಗೆ, ಬೂದು ಬಕಾ, ದಾಸ ಕೊಕ್ಕರೆ, ತೆರೆದ ಕೊಕ್ಕಿನ ಕೊಕ್ಕರೆ, ಚಮಚ ಕೊಕ್ಕು, ಬಿಳಿನಾಮದ ನೀರು ಕೋಳಿ, ಚುಕ್ಕೆ ಬಾತುಕೋಳಿ, ಶಿಳ್ಳೆಬಾತು, ಕೆನ್ನೀಲಿ ಬಕ, ಕೊಳದ ಬಕ, ನಾಲ್ಕು ಜಾತಿಯ ಬೆಳ್ಳಕ್ಕಿಗಳು, 50 ಬಗೆಯ ಜಲಪಕ್ಷಿಗಳು ಕೆರೆಯ ಅಂಗಳವನ್ನು ಆಕ್ರಮಿಸಿಕೊಂಡಿವೆ.

ಕಪ್ಪೆಚಿಪ್ಪು, ಶಂಕು ಹುಳು, ಏಡಿ, ಮಣ್ಣಿನ ಹುಳು ಯಥೇಚ್ಛ ಪ್ರಮಾಣದಲ್ಲಿ ಕೆಸರಿನಲ್ಲಿ ಸಿಗುತ್ತವೆ. ಹೀಗಾಗಿ ದಿನವಿಡೀ ಹಕ್ಕಿಗಳು ಕೆರೆಯ ಅಂಗಳದಲ್ಲಿ ಕಳೆದು, ಹೊತ್ತಾಗುತ್ತಿದ್ದಂತೆ ಗೂಡಿನತ್ತ ಮುಖ ಮಾಡುತ್ತವೆ. ಮತ್ತೆ ಬೆಳಕು ಹರಿಯುತ್ತಿದ್ದಂತೆ ಕೆರೆಯ ಅಂಗಳಕ್ಕೆ ಬರುತ್ತವೆ. ಕೆರೆಯಲ್ಲಿನ ಕೆಸರು ಒಣಗುವವರೆಗೆ ಇದು ನಡೆಯುತ್ತಿರುತ್ತದೆ.

‘ಕೆರೆಗಳು ಒಣಗುವ ಹಂತಕ್ಕೆ ಬಂದಾಗ ಪಕ್ಷಿಗಳಿಗೆ ಯಥೇಚ್ಛವಾಗಿ ಆಹಾರ ಸಿಗುತ್ತದೆ. ಅವುಗಳು ಸಂಭ್ರಮಿಸುವ ಕಾಲವಿದು’ ಎನ್ನುತ್ತಾರೆ ಪಕ್ಷಿ ತಜ್ಞ ಸಮದ್‌ ಕೊಟ್ಟೂರು.

‘ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ಪಕ್ಷಿಗಳು ಅಲ್ಲಲ್ಲಿ ಬೀಡು ಬಿಟ್ಟಿರುತ್ತವೆ. ಎಲ್ಲಿ ಕೆರೆಗಳು ಒಣಗುತ್ತವೆ. ಅಲ್ಲಿಗೆ ಗುಂಪು ಗುಂಪಾಗಿ ಲಗ್ಗೆ ಇಡುತ್ತವೆ. ಕೆರೆಯ ನೀರು ಖಾಲಿಯಾದಾಗ, ಕೆಸರಿನಲ್ಲಿರುವ ಹುಳುಗಳು ಪಕ್ಷಿಗಳಿಗೆ ಗೋಚರಿಸುತ್ತವೆ. ಓಡಾಡುತ್ತ ಹೆಕ್ಕಿ ತಿನ್ನುತ್ತವೆ. ನೀರಿದ್ದರೆ ಸುಲಭವಾಗಿ ಅವುಗಳಿಗೆ ಆಹಾರ ಸಿಗುವುದಿಲ್ಲ’ ಎಂದು ಹೇಳಿದರು.

‘ಪಕ್ಷಿಗಳು ಅಲ್ಪ ಪ್ರಮಾಣದಲ್ಲಿ ನೀರು ಸೇವಿಸುತ್ತವೆ. ಸ್ವಲ್ಪ ನೀರಿದ್ದರೂ ಹೇಗೋ ಅದರಲ್ಲಿ ಜೀವಿಸುತ್ತವೆ. ಆದರೆ, ಆಹಾರ ಯಥೇಚ್ಛವಾಗಿ ಬೇಕು. ಎಲ್ಲಿ ಹೆಚ್ಚು ಆಹಾರ ಸಿಗುತ್ತದೆ ಅಂತಹ ಕಡೆಗಳಿಗೆ ಲಗ್ಗೆ ಇಡುತ್ತವೆ. ಮಳೆಗಾಲ ಆರಂಭವಾಗಿ, ಕೆರೆಗಳಿಗೆ ನೀರು ಬರುತ್ತಿದ್ದಂತೆ ಅವುಗಳ ಮೂಲಸ್ಥಾನಕ್ಕೆ ಹಿಂತಿರುಗುತ್ತವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT