ಸೋಮವಾರ, ನವೆಂಬರ್ 18, 2019
28 °C
ಕಾಂಗ್ರೆಸ್, ಜೆ.ಡಿ.ಎಸ್‌.ಗೆ ಶಕ್ತಿ ವೃದ್ಧಿಸಿಕೊಳ್ಳುವ ಸವಾಲು

ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿಗೆ ಶಾಸಕರ ಬಲ

Published:
Updated:
prajavani

ಕೂಡ್ಲಿಗಿ: ಹಿಂದಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲದ ಬಿಜೆಪಿಗೆ ಈ ಸಲ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರ ಬಲ ಇರುವುದು ಆ ಪಕ್ಷದ ಆತ್ಮವಿಶ್ವಾಸ ಹೆಚ್ಚಿಸಿದೆ.

2007ರಲ್ಲಿ ಮೂರು ವಾರ್ಡ್‌ಗಳಲ್ಲಿ ಗೆದ್ದಿದ್ದ ಬಿಜೆಪಿ, 2013ರಲ್ಲಿ ಒಂದೇ ಒಂದು ಸ್ಥಾನದಲ್ಲಿ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ. 2013ರಲ್ಲಿ ಬಿಜೆಪಿ ತೊರೆದಿದ್ದ ಶಾಸಕ ಬಿ. ನಾಗೇಂದ್ರ ಬೆಂಬಲಿತ ಹತ್ತು ಜನ ಪಕ್ಷೇತರರು ಆಯ್ಕೆಯಾಗಿದ್ದರು. ಅವರೇ ಅಧಿಕಾರದ ಚುಕ್ಕಾಣಿ ಕೂಡ ಹಿಡಿದಿದ್ದರು. ಬಿ. ಶ್ರೀರಾಮುಲು ಕಟ್ಟಿದ್ದ ಬಿ.ಎಸ್‌.ಆರ್‌. ಕಾಂಗ್ರೆಸ್‌ನಿಂದ ಇಬ್ಬರು ಆಯ್ಕೆಯಾಗಿದ್ದರು. ಹೀಗೆ ಬಿಜೆಪಿಯ ಇಬ್ಬರು ಪ್ರಮುಖ ಮುಖಂಡರು ಪಕ್ಷ ತೊರೆದಿದ್ದರಿಂದ ಅದಕ್ಕೆ ಹಿನ್ನಡೆಯಾಗಿತ್ತು.

ಈ ಸಲ ಹಾಲಿ ಶಾಸಕ ಗೋಪಾಲಕೃಷ್ಣ ಅವರು ಬಿಜೆಪಿಗೆ ಗೆಲುವಿನ ದಡ ಸೇರಿಸುವ ಸವಾಲು ಇದ್ದು, ಅದರಲ್ಲಿ ಅವರು ಎಷ್ಟರಮಟ್ಟಿಗೆ ಯಶಸ್ಸು ಸಾಧಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ. ಪಕ್ಷವನ್ನು ಗೆಲ್ಲಿಸಲು ಅವರು ಅವಿರತ ಶ್ರಮಿಸುತ್ತಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ದೊಡ್ಡ ಅಂತರದಿಂದ ಗೆಲುವು ಸಾಧಿಸಿರುವುದರಿಂದ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ.

2007ರಲ್ಲಿ 12 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಿದ್ದ ಕಾಂಗ್ರೆಸ್‌ 2013ರಲ್ಲಿ ಸೋಲು ಅನುಭವಿಸಿತು. ಅದರ ಶಕ್ತಿ ಐದು ಸ್ಥಾನಗಳಿಗೆ ಕುಗ್ಗಿತ್ತು. ಈ ಸಲ ಅದು ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪ್ರಮುಖ ನಾಯಕರ ಕೊರತೆ ಆ ಪಕ್ಷ ಎದುರಿಸುತ್ತಿದ್ದು, ಸ್ಥಳೀಯ ನಾಯಕರೇ ಅದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತಿದ್ದಾರೆ.

2007ರಲ್ಲಿ ಐದರಲ್ಲಿ ಗೆದ್ದಿದ್ದ ಜೆ.ಡಿ.ಎಸ್‌. 2013ರಲ್ಲಿ ಕೇವಲ ಒಂದು ಸ್ಥಾನಕ್ಕೆ ಸೀಮಿತಗೊಂಡಿತು. ಈ ಸಲ ಪಕ್ಷದ ಜಿಲ್ಲಾ ಅಧ್ಯಕ್ಷ ಎನ್‌.ಟಿ. ಬೊಮ್ಮಣ್ಣ, ಮಾಜಿಶಾಸಕ ಎಂ.ಎನ್‌. ನಬಿ ಪಕ್ಷವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಮೂರೂ ಪಕ್ಷಗಳು 18 ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಒಟ್ಟು 20 ವಾರ್ಡುಗಳ ಪೈಕಿ ಎಂಟು ವಾರ್ಡುಗಳಲ್ಲಿ ಪಕ್ಷೇತರರು ಸ್ಪರ್ಧಿಸುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. 18ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಬಿ. ಸರಸ್ವತಿ ಅವಿರೋಧ ಆಯ್ಕೆಯಾಗಿದ್ದಾರೆ. ಒಟ್ಟು 19 ವಾರ್ಡುಗಳಿಗೆ ಚುನಾವಣೆ ನಡೆಯಬೇಕಿದ್ದು, ಮತದಾರರು ಯಾರಿಗೆ ಅಧಿಕಾರ ಕೊಡುತ್ತಾರೆ ಕಾದು ನೋಡಬೇಕಿದೆ.

ಪ್ರತಿಕ್ರಿಯಿಸಿ (+)