ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಬೇಡ ಎಂಬುವರಿಗೆ ವಾಲ್ಮೀಕಿ ಏಕೆ ಬೇಕು: ತೇಜಸ್ವಿನಿ ಗೌಡ ಪ್ರಶ್ನೆ

Last Updated 26 ಅಕ್ಟೋಬರ್ 2018, 12:20 IST
ಅಕ್ಷರ ಗಾತ್ರ

ಹೊಸಪೇಟೆ: ‘ರಾಮಮಂದಿರ ಬೇಡ, ರಾಮ ಬೇಡ, ಸೀತೆ ಬೇಡ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಹೇಳುತ್ತಿದ್ದಾರೆ. ಹಾಗಿದ್ದರೆ ನಿಮಗೆ ಮಹರ್ಷಿ ವಾಲ್ಮೀಕಿಯವರು ಏಕೆ ಬೇಕು’ ಎಂದು ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಪ್ರಶ್ನಿಸಿದರು.

ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಪರ ಶುಕ್ರವಾರ ಇಲ್ಲಿ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿಯವರನ್ನು, ಅವರು ಬರೆದ ರಾಮಾಯಣವನ್ನು ಪ್ರಶ್ನಿಸುವ ಮೂಲಕ ಈ ದೇಶದ ಅಸ್ತಿತ್ವವನ್ನು ಅವರು ಪ್ರಶ್ನಿಸಿದ್ದಾರೆ’ ಎಂದರು.

‘ರಾಮಾಯಣ, ಸೀತೆಯ ಅಪ್ಪ– ಅಮ್ಮ ಎಲ್ಲಿದ್ದಾರೆ ಎಂದು ಉಗ್ರಪ್ಪನವರು ಪ್ರಶ್ನೆ ಮಾಡಿದ್ದಾರೆ. ರಾಮಾಯಣ ಭಾರತವಷ್ಟೇ ಅಲ್ಲ ಇಡೀ ಏಷ್ಯಾ ಖಂಡದ ಜನರಿಗೆ ಗೊತ್ತಿದೆ. ಜಾನಪದ, ವಿಮರ್ಶೆ, ಕೃತಿಗಳಲ್ಲಿ ಅದು ಹಾಸು ಹೊಕ್ಕಿದೆ. ‘ರಾಮಾಯಣ ದರ್ಶನಂ’ ಬರೆದುದ್ದಕ್ಕೆ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂತು. ಇಂದಿಗೂ ಶ್ರೇಷ್ಠ ರಾಮಾಯಣವೆಂದರೆ ವಾಲ್ಮೀಕಿ ರಾಮಾಯಣ ಎನ್ನುತ್ತೇವೆ’ ಎಂದು ಹೇಳಿದರು.

‘ಸೀತೆಯ ಅಪ್ಪ, ಅಮ್ಮನ ಬಗ್ಗೆ ಪ್ರಶ್ನಿಸಿರುವ ಉಗ್ರಪ್ಪನವರು ನಾಳೆಯ ದಿನ ವಾಲ್ಮೀಕಿಯವರನ್ನು ಪ್ರಶ್ನಿಸಬಹುದು. ವಾಲ್ಮೀಕಿ ಅವರನ್ನು ಪ್ರಶ್ನಿಸುವವರು ಈ ಮೀಸಲು ಕ್ಷೇತ್ರಕ್ಕೆ ಬಂದು ಏಕೆ ಸ್ಪರ್ಧಿಸುತ್ತಿದ್ದೀರಿ? ವಾಲ್ಮೀಕಿ ಅವರು ಬರೆದ ಶ್ರೇಷ್ಠ ರಾಮಾಯಣವನ್ನು ಸೂರ್ಯ, ಚಂದ್ರ ಇರುವವರೆಗೆ ಯಾರೂ ಅಳಿಸಿ ಹಾಕಲು ಸಾಧ್ಯವಿಲ್ಲ. ಅದಕ್ಕೆ ಬಿಜೆಪಿ ಆಸ್ಪದ ಕೊಡುವುದಿಲ್ಲ. ವಾಲ್ಮೀಕಿ ಜಯಂತಿಯನ್ನು ಸಮ್ಮಿಶ್ರ ಸರ್ಕಾರ ಯಾವ ರೀತಿ ಆಚರಿಸಿತು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಪ್ರತಿಕ್ರಿಯಿಸಿದರು.

‘ಡಿ.ಕೆ. ಶಿವಕುಮಾರ ಅವರು ಬಳ್ಳಾರಿ ತಿರುವಿ ಹಾಕುತ್ತೇನೆ ಎಂದು ಬಂದಿದ್ದಾರೆ. ಆದರೆ, ಒಕ್ಕಲಿಗರ ಪ್ರಾಬಲ್ಯವಿರುವ ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ಸಿಗೆ ಎಷ್ಟು ಸ್ಥಾನಗಳಲ್ಲಿ ಗೆಲ್ಲಿಸಿ ಕೊಟ್ಟಿದ್ದೀರಿ. ಮೊದಲು ನಿಮ್ಮ ಮನೆಯಲ್ಲಿ ಭೇಷ್‌ ಅನ್ನಿಸಿಕೊಂಡು ಬಳ್ಳಾರಿಗೆ ಬನ್ನಿ. ನಿಮ್ಮನ್ನು ಎದುರಿಸಲು ದಲಿತ ಜನಾಂಗದ ಶಾಂತಾ ಒಬ್ಬರೇ ಸಾಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT