ಬಿಜೆಪಿಗೆ ಕಾಂಗ್ರೆಸ್‌ನವರೇ ಬೇಕಿತ್ತಾ?

ಮಂಗಳವಾರ, ಏಪ್ರಿಲ್ 23, 2019
31 °C
ಜಲಸಂಪನ್ಮೂಲ ಸಚಿವ ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನೆ

ಬಿಜೆಪಿಗೆ ಕಾಂಗ್ರೆಸ್‌ನವರೇ ಬೇಕಿತ್ತಾ?

Published:
Updated:
Prajavani

ಸಂಡೂರು: ‘ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಸ್ಪರ್ಧಿಸಲು ಬಿಜೆಪಿಯವರಿಗೆ ಕಾಂಗ್ರೆಸ್‌ನವರೇ ಬೇಕಿತ್ತಾ? ದೇವೇಂದ್ರಪ್ಪನವರು ಕೆಲ ದಿನಗಳ ಹಿಂದೆ ನನ್ನ ಬಳಿ ಬಂದು ಟಿಕೆಟ್‌ ಕೇಳಿದ್ದರು. ನಂತರ ಅವಸರದಲ್ಲಿ ಶ್ರೀರಾಮುಲು ಅವರನ್ನು ಭೇಟಿಯಾಗಿ ಬಿಜೆಪಿ ಸೇರಿದ್ದಾರೆ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಬಿಜೆಪಿ ಸ್ನೇಹಿತರಿಗೆ ಒಂದು ಪ್ರಶ್ನೆ ಕೇಳ ಬಯಸುವೆ. ಕಾಂಗ್ರೆಸ್‌ನ ಉಗ್ರಪ್ಪ ಅವರನ್ನು ಎದುರಿಸಲು ನಿಮ್ಮ ಬಳಿ ಯಾರೂ ಇರಲಿಲ್ಲವೇ? ಇಲ್ಲದರಿಂದ ನಮ್ಮ ಪಕ್ಷದ ದೇವೇಂದ್ರಪ್ಪನವರನ್ನು ಕಣಕ್ಕಿಳಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ದೇವೇಂದ್ರಪ್ಪನವರು ಯಾರಿಂದಲೋ ಬಾರ್‌ ಮಾಲೀಕರಿಗೆ ಹಫ್ತಾ ವಸೂಲಿಗೆ ದೂರವಾಣಿ ಕರೆ ಮಾಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಮಿಷನ್‌, ಹಫ್ತಾ ವಸೂಲಿಗೆ ಅವಕಾಶ ಕೊಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

’ಲೋಕಸಭಾ ಉಪಚುನಾವಣೆಗೆ ನಾನು ಇಲ್ಲಿಗೆ ಬಂದಾಗ, ಕ‌ನಕಪುರದ ಗೌಡರಿಗೆ ಇಲ್ಲೇನು ಕೆಲಸ. ಫಲಿತಾಂಶದ ನಂತರ ಶಾಂತ ಅವರು ಪಾರ್ಲಿಮೆಂಟಿಗೆ. ಡಿ.ಕೆ. ಶಿವಕುಮಾರ್ ‌ಜೈಲಿಗೆ ಹೋಗುತ್ತಾರೆ ಎಂದು ಶ್ರೀರಾಮುಲು ಅಣ್ಣನವರು ಹೇಳಿದ್ದರು. ಶಾಂತಕ್ಕನವರು ಪಾರ್ಲಿಮೆಂಟಿಗೆ ಹೋಗಲಿಲ್ಲ. ನಾನು ಜೈಲಿಗೆ ಹೋಗಲಿಲ್ಲ. ನಾನು ನಿಮ್ಮ ಮುಂದೆಯೇ ಇದ್ದೇನೆ’ ಎಂದು ಶ್ರೀರಾಮುಲುಗೆ ಕುಟುಕಿದರು.

‘ಉಗ್ರಪ್ಪನವರನ್ನು ಜಿಲ್ಲೆಯ ಜನ ಗೆಲ್ಲಿಸಿಕೊಟ್ಟಿದ್ದಕ್ಕೆ ಬಜೆಟ್‌ನಲ್ಲಿ ಜಿಲ್ಲೆಗೆ ₹5,000 ಕೋಟಿ ವೆಚ್ಚದ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಕ್ರಮ ಕೈಗೊಂಡಿದ್ದೇವೆ. ಎಂಟು ಸಾವಿರ ಮನೆಗಳನ್ನು ಬಡವರಿಗೆ ನಿರ್ಮಿಸುತ್ತಿದ್ದೇವೆ. ಕೆರೆ ತುಂಬಿಸುವ ಯೋಜನೆ ಹಾಕಿಕೊಂಡಿದ್ದೇವೆ. ಉಗ್ರಪ್ಪನವರ ಜಿಲ್ಲೆಯ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ’ ಎಂದರು. 

ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ’ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಚುನಾವಣೆ ನಡೆಯುತ್ತಿದೆ. ಒಂದೆಡೆ ಬಿಜೆಪಿಯ ಕೋಮುವಾದ ಸಿದ್ಧಾಂತ, ಇನ್ನೊಂದೆಡೆ ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್‌. ಮೋದಿ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ರಕ್ಷಣಾ ಇಲಾಖೆಯ ದಾಖಲೆಗಳನ್ನೇ ರಕ್ಷಿಸಲು ಕೇಂದ್ರಕ್ಕೆ ಸಾಧ್ಯವಾಗಿಲ್ಲ. ಇನ್ನು ಜನರಿಗೆ ಹೇಗೆ  ರಕ್ಷಣೆ ಕೊಡುತ್ತಾರೆ’ ಎಂದು ಪ್ರಶ್ನಿಸಿದರು. 

ಸಚಿವರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಸಂಸದ ನಾಸೀರ್‌ ಹುಸೇನ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಆಶಾಲತಾ, ಮಾಜಿ ಶಾಸಕ ಅನಿಲ್‌ಲಾಡ್, ಮುಖಂಡರಾದ ಎನ್.ಟಿ. ಬೊಮ್ಮಣ್ಣ, ಸಿರಾಜ್‌ ಶೇಖ್‌, ಗುಜ್ಜಲ್‌ ರಘು, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಿವಪ್ಪ, ದೀಪಕ್‌ ಸಿಂಗ್‌, ಟಿ.ಆರ್‌. ಶ್ರೀನಿವಾಸ್‌ ಇದ್ದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !