ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಹಳ್ಳಿಯಲ್ಲೂ ಬಿಜೆಪಿ ಬಲಗೊಳಿಸಿ: ಡಿಸಿಎಂ ಸವದಿ

ಪಂಚಾಯ್ತಿ ಚುನಾವಣೆಗಾಗಿ ಗ್ರಾಮ ಸ್ವರಾಜ್‌ ಅಭಿಯಾನಕ್ಕೆ ಚಾಲನೆ
Last Updated 29 ನವೆಂಬರ್ 2020, 10:23 IST
ಅಕ್ಷರ ಗಾತ್ರ
ADVERTISEMENT
""

ಬಳ್ಳಾರಿ: ‘ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲೂ ಬಿಜೆಪಿಯನ್ನೇ ಅಧಿಕಾರಕ್ಕೆ ತರಲು ಸಚಿವರು, ಸಂಸದರು, ಶಾಸಕರು ಕಾರ್ಯಕರ್ತರಂತೆ ದುಡಿಯಲಿದ್ದಾರೆ. ಬರಲಿರುವ ಚುನಾವಣೆಗೆ ಸ್ಪರ್ಧಿಸುವ ಕಾರ್ಯಕರ್ತರ ಪರವಾಗಿ ಇದೇ ಮೊದಲ ಬಾರಿಗೆ ಗ್ರಾಮಮಟ್ಟದಲ್ಲಿ ಪ್ರಚಾರ ನಡೆಸಲಿದ್ದಾರೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಪಂಚಾಯ್ತಿ ಚುನಾವಣೆಗೆ ಸಿದ್ಧತೆ ನಡೆಸಲೆಂದೇ ಪಕ್ಷ ರೂಪಿಸಿರುವ ಗ್ರಾಮ ಸ್ವರಾಜ್‌ ಅಭಿಯಾನದ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಮಂಡಲ ಪ್ರಮುಖರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಾಮಾನ್ಯ ಕಾರ್ಯಕರ್ತರಿಗೆ ಉನ್ನತ ಸ್ಥಾನಗಳನ್ನು ನೀಡಿದ ಏಕೈಕ ಪಕ್ಷವಾದ ಬಿಜೆಪಿಯು ಈಗ ದಿಲ್ಲಿಯಿಂದ ಹಳ್ಳಿಯವರೆಗೂ ಅಧಿಕಾರವನ್ನು ಪಡೆಯಲು ಎಲ್ಲ ಹಂತದ ಕಾರ್ಯಕರ್ತರ ಸರಪಳಿಯನ್ನು ಬಿಗಿಗೊಳಿಸುತ್ತಿದೆ’ ಎಂದರು.

‘ರಾಜ್ಯದ ಎಲ್ಲ 32 ಜಿಲ್ಲೆಗಳಲ್ಲೂ 62 ಅಭಿಯಾನ ಸಭೆಗಳನ್ನುಡಿ.3ರ ಒಳಗೆ ನಡೆಸಲೆಂದೇ ಆರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಲ್ಲಿರುವ ಮೇಲ್ಮಟ್ಟದ ಎಲ್ಲ ಜನಪ್ರತಿನಿಧಿಗಳೂ ತಮ್ಮ ಗೆಲುವಿಗಾಗಿ ಇದುವರೆಗೂ ಶ್ರಮಿಸಿರುವ ಸಾಮಾನ್ಯ ಕಾರ್ಯಕರ್ತರ ಪರವಾಗಿ ಪಾಲ್ಗೊಳ್ಳಲಿದ್ದಾರೆ. ಇದು ಕಾರ್ಯಕರ್ತರು ಹೊರಿಸಿರುವ ಋಣಭಾರವನ್ನು ಇಳಿಸಿಕೊಳ್ಳುವ ಪ್ರಯತ್ನವೂ ಹೌದು’ ಎಂದರು.

‘ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ನಿಜ ಮಾಡುವ ಪ್ರಯತ್ನ ಇದು. ಎಲ್ಲ ಅನುದಾನಗಳೂ ಪಂಚಾಯ್ತಿಯಲ್ಲಿ ಸದ್ಬಳಕೆಯಾಗಬೇಕೆಂದರೆ ಬಿಜೆಪಿ ಕಾರ್ಯಕರ್ತರು ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಬೇಕು’ ಎಂದು ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಪ್ರತಿಪಾದಿಸಿದರು.

ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಬಿಜೆಪಿಯ ವಿವಿಧ ಮಂಡಳಗಳ ನೂರಾರು ಪ್ರಮುಖರು ಪಾಲ್ಗೊಂಡಿದ್ದರು

‘ಪಕ್ಷ ಒಡೆಯಲು ವಿರೋಧಿಗಳಿಗೆ ಅವಕಾಶ ನೀಡಬಾರದು. ಭಿನ್ನಾಭಿಪ್ರಾಯಗಳಿದ್ದರೆ ಗ್ರಾಮ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಚರ್ಚಿಸಿ ಬಗೆಹರಿಸಿಕೊಂಡರೆ ಮಾತ್ರ ಪಂಚಾಯ್ತಿಗಳಲ್ಲಿ ಗೆಲುವು ಸಾಧ್ಯವಾಗುತ್ತದೆ’ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸಲಹೆ ನೀಡಿದರು.

‘ಹಳ್ಳಿಯಿಂದ ದಿಲ್ಲಿಗೆ ಎಂಬ ಮಾತನ್ನು ಬದಲಾಯಿಸಿ ದಿಲ್ಲಿಯಿಂದ ಹಳ್ಳಿವರೆಗೆ ಪಕ್ಷವನ್ನು ಸಂಘಟಿಸುವ ಪ್ರಯತ್ನವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಂಸದ ವೈ.ದೇವೇಂದ್ರಪ್ಪ ಕೋರಿದರು.

’ವಾರ್‌ ರೂಂ ಸಿದ್ಧವಾಗಲಿ’

ಪ್ರಾಸ್ತಾವಿಕ ಮಾತನಾಡಿದ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ನವೀನ್‌ಕುಮಾರ್‌, ‘ಪ್ರತಿ ಪಂಚಾಯ್ತಿಯ ಪ್ರತಿ ವಾರ್ಡ್‌ನಲ್ಲೂ ವಾರ್‌ ರೂಂ ಸಿದ್ಧವಾಗಬೇಕು. ಆ ವಾರ್ಡ್‌ಗೆ ಸಂಬಂಧಿಸಿದ ಎಲ್ಲ ಮತದಾರರು, ವಿವಿಧ ಜಾತಿ ಸಮುದಾಯಗಳ ಸ್ಥಳೀಯ ಮುಖಂಡರು, ಪ್ರಭಾವಿಗಳ ಮಾಹಿತಿಯೂ ಸಂಗ್ರಹವಾಗಬೇಕು. ಕಾಲ್‌ಸೆಂಟರ್‌ ಆರಂಭಿಸಬೇಕು. ಪ್ರತಿ ಮತದಾರರಿಗೂ ಕರೆ ಮಾಡಬೇಕು. ಮತದಾರರ ಪಟ್ಟಿಯ ಪ್ರತಿ ಪುಟದ ಪೇಜ್‌ ಪ್ರಮುಖರ ಪಟ್ಟಿ ಸಿದ್ಧವಾಗಬೇಕು’ ಎಂದರು.

‘ಪ್ರತಿ ವಾರ್ಡ್‌ನಲ್ಲೂ ಕಾರ್ಯಕರ್ತರನ್ನು ಭಾವನಾತ್ಮಕವಾಗಿ ಬೆಸೆಯಲು ಎಲ್ಲರ ಕುಟುಂಬ ಮಿಲನ ಕಾರ್ಯಕ್ರಮಗಳು ನಡೆಯಬೇಕು. ಪ್ರತಿ ಬೂತ್‌ಗೂ ಮಹಿಳೆ, ಪರಿಶಿಷ್ಟ ಜಾತಿ, ಪಂಗಡ, ಓಬಿಸಿಯ ತಲಾ ಒಬ್ಬರುಳ್ಳ ಪಂಚರತ್ನ ಸಮಿತಿಯನ್ನೂ ರಚಿಸಬೇಕು. ಶಕ್ತಿ ಕೇಂದ್ರಗಳೆಲ್ಲವೂ ಸೇರಿ ಮಹಾಶಕ್ತಿ ಕೇಂದ್ರಗಳನ್ನೂ ರಚಿಸಬೇಕು’ ಎಂದು ಸೂಚಿಸಿದರು.

ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಚ್‌.ಹನುಮಂತಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮುಖಂಡರಾದ ಎಸ್‌.ಪಕ್ಕೀರಪ್ಪ, ಜೆ.ಶಾಂತಾ, ನೇಮರಾಜ ನಾಯ್ಕ, ಅನಿಲ್‌ ನಾಯ್ಡು, ಎಸ್‌.ಗುರುಲಿಂಗನಗೌಡ, ಸಿದ್ದೇಶ್‌ ಯಾದವ್, ಡಾ.ಮಹಿಪಾಲ್, ಡಾ.ಅರುಣಾ ಕಾಮಿನೇನಿ, ರಾಮಚಂದ್ರಪ್ಪ, ವಿಜಯಲಕ್ಷ್ಮಿ, ಕಪ್ಪಗಲ್ ಪ್ರಭುದೇವ‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT