ಹೊಸಪೇಟೆ: ಬಂದ್ ಪ್ರತಿಭಟನೆ, ಬಿಜೆಪಿ ಹಠಾವೋ, ದೇಶ್ ಬಚಾವೋ ಘೋಷಣೆ

7
ಕಾರ್ಪೊರೇಟ್ ಕುಳಗಳ ಬೂಟು ನೆಕ್ಕುತ್ತಿರುವ ಕೇಂದ್ರ: ಸಿಪಿಐಎಂ ಮುಖಂಡ ಕರುಣಾನಿಧಿ

ಹೊಸಪೇಟೆ: ಬಂದ್ ಪ್ರತಿಭಟನೆ, ಬಿಜೆಪಿ ಹಠಾವೋ, ದೇಶ್ ಬಚಾವೋ ಘೋಷಣೆ

Published:
Updated:
Deccan Herald

ಹೊಸಪೇಟೆ: ತೈಲ ಬೆಲೆ ಏರಿಕೆ ವಿರುದ್ಧ ‘ಭಾರತ್‌ ಬಂದ್‌’ಗೆ ಕರೆ ಕೊಟ್ಟಿದ್ದರಿಂದ ಸಿಪಿಐಎಂ ಕಾರ್ಯಕರ್ತರು ಸೋಮವಾರ ಇಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ರೋಟರಿ ವೃತ್ತದವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ನಂತರ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿದರು. ಈ ವೇಳೆ ‘ನರೇಂದ್ರ ಮೋದಿ ಸತ್ತಾನಪ್ಪೋ ಅಯ್ಯಯೋ’, ‘ಅಚ್ಛೆ ದಿನ್‌ ಬರಲಿಲ್ಲ ಅಯ್ಯಯೋ’ ಘೋಷಣೆಗಳನ್ನು ಕೂಗಿ, ಆಕ್ರೋಷ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಹಾಕಿದರು.

ಬಳಿಕ ಮಾತನಾಡಿದ ಪಕ್ಷದ ಮುಖಂಡ ಕೆ. ಕರುಣಾನಿಧಿ, ‘ಮುಂದಿನ 50 ವರ್ಷಗಳ ವರೆಗೆ ದೇಶದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇರುತ್ತದೆ ಎಂದು ಆ ಪಕ್ಷದ ಮುಖಂಡರು ಹೇಳಿಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀತಿಗಳಿಂದ ಜನಸಾಮಾನ್ಯರ ಬದುಕು ಹಾಳಾಗಿದೆ. ಇನ್ನೈದು ತಿಂಗಳ ನಂತರ ಅವರನ್ನು ಮನೆಗೆ ಕಳಿಸಿಕೊಡುವುದು ನಿಶ್ಚಿತ’ ಎಂದು ಭವಿಷ್ಯ ನುಡಿದರು.

‘ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗುವುದರ ಬದಲು ಕಡಿಮೆಯಾಗುತ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಗನ ಆಸ್ತಿ ನೂರಾರು ಕೋಟಿ ಹೆಚ್ಚಾಗಿದೆ. ₹4 ಲಕ್ಷ ಕೋಟಿ ಕಾರ್ಪೊರೇಟ್‌ ಸಾಲವನ್ನು ಕೇಂದ್ರ ಮನ್ನಾ ಮಾಡಿದೆ. ಇದೇ ವೇಳೆ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ ಏರುತ್ತಿದ್ದರೂ ನಿಯಂತ್ರಿಸುತ್ತಿಲ್ಲ. ಕಾರ್ಪೊರೇಟ್‌ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿರುವುದು ತಪ್ಪಲ್ಲ ಎಂದು ಲಜ್ಜೆಗೆಟ್ಟವರಂತೆ ಮೋದಿ ಹೇಳುತ್ತಿದ್ದಾರೆ. ಇದು ಕಾರ್ಪೊರೇಟ್‌ ಕುಳಗಳ ಬೂಟು ನೆಕ್ಕುವ ಸರ್ಕಾರ’ ಎಂದರು.

‘ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೆ ತಂದಿಲ್ಲ. ಇವರ ಆಡಳಿತ ವೈಖರಿ ನೋಡಿ ಜನ ಬೇಸತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಕಾರಣ ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನಕ್ಕೆ ಅಪಚಾರವೆಸಗುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ ಮಾತನಾಡಿ, ‘ನಾಲ್ಕೂವರೆ ವರ್ಷಗಳಲ್ಲಿ ದೇಶದಾದ್ಯಂತ 50 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ ಹತ್ತು ಸಾವಿರ ರೈತರು ಜೀವ ತ್ಯಜಿಸಿದ್ದಾರೆ. ಕಾರ್ಪೊರೇಟ್‌ ಕುಳಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿರುವ ಕೇಂದ್ರ, ರೈತರ ನೆರವಿಗೆ ಬರಲು ಮೀನಮೇಷ ಎಣಿಸುತ್ತಿದೆ’ ಎಂದು ಜರಿದರು.

‘ಬಿಜೆಪಿ ಹಠಾವೋ, ದೇಶ್‌ ಬಚಾವೋ’ ನಿಟ್ಟಿನಲ್ಲಿ ಜನಾಂದೋಲನ ನಡೆಯಬೇಕಿದೆ. ಇಲ್ಲವಾದಲ್ಲಿ ಇಡೀ ದೇಶವನ್ನು ಸಂಪೂರ್ಣ ಹಾಳು ಮಾಡುತ್ತಾರೆ ಎಂದು ಎಚ್ಚರಿಸಿದರು.

ಮುಖಂಡರಾದ ನಾಗರತ್ನಮ್ಮ, ಗೋಪಾಲ್‌, ಯಲ್ಲಾಲಿಂಗ, ರಮೇಶ, ಬಿಸಾಟಿ ಮಹೇಶ್‌, ಕೆ.ಎಂ. ಸಂತೋಷ್‌ ಕುಮಾರ್‌ ಇದ್ದರು.

‘ಪ್ರಶ್ನಿಸುವವರು ದೇಶದ್ರೋಹಿಗಳು’
ಹಿರಿಯ ಮುಖಂಡ ಜಂಬಯ್ಯ ನಾಯಕ ಮಾತನಾಡಿ, ‘ದೇಶಕ್ಕೆ ಒಳ್ಳೆಯ ದಿನಗಳನ್ನು ತಂದುಕೊಡುತ್ತೇವೆ ಎಂದು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯಿಂದ ಇಡೀ ದೇಶ ನಾಶವಾಗುತ್ತಿದೆ. ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸುವವರು, ಟೀಕಿಸುತ್ತಿರುವವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೆವೋ ಅಥವಾ ಸರ್ವಾಧಿಕಾರ ವ್ಯವಸ್ಥೆ ಇದೆಯೋ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !