‘ಕುಮಾರಸ್ವಾಮಿ ಬಣ್ಣ ಬಯಲು ಮಾಡಿ’

7
ನೈತಿಕತೆ ಮರೆತ ಕಾಂಗ್ರೆಸ್‌–ಜೆಡಿಎಸ್‌: ಯಡಿಯೂರಪ್ಪ

‘ಕುಮಾರಸ್ವಾಮಿ ಬಣ್ಣ ಬಯಲು ಮಾಡಿ’

Published:
Updated:
Deccan Herald

ಬಳ್ಳಾರಿ: ‘ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಹೋರಾಟ ಮಾಡದೇ ಇದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ. ಸಾಲ ಮನ್ನಾ ಭರವಸೆಯನ್ನು ಹುಸಿಗೊಳಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಣ್ಣ ಬಯಲು ಮಾಡಬೇಕು. ಅವರು ರಾಜೀನಾಮೆ ನೀಡಿ ಮನೆಗೆ ಹೋಗುವವರೆಗೂ ಕಾರ್ಯಕರ್ತರು ಹೋರಾಟ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.

ನಗರದ ಬಸವ ಭವನದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ‘ಸಭೆ, ಸಮಾರಂಭಗಳನ್ನು ನಡೆಸಿ, ಸುದ್ದಿಗೋಷ್ಠಿ ಏರ್ಪಡಿಸಿ ತೃಪ್ತಿಪಡುವ ಕಾಲ ಇದಲ್ಲ. ಕುಮಾರಸ್ವಾಮಿ ಅವರ ವೈಫಲ್ಯಗಳ ವಿರುದ್ಧ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಬೇಕು’ ಎಂದರು.

‘ಕಾಂಗ್ರೆಸ್ ಸರ್ಕಾರದ ಎಲ್ಲ ಭ್ರಷ್ಟಾಚಾರಗಳನ್ನು ತನಿಖೆಗೆ ಒಳಪಡಿಸುವ ಮಾತನಾಡಿದ್ದ ಕುಮಾರಸ್ವಾಮಿಯವರಿಗೆ ನೈತಿಕ ಹಕ್ಕಿಲ್ಲ. ಬೇಷರತ್‌ ಆಗಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್‌ಗೂ ಮುಖ್ಯಮಂತ್ರಿ ವೈಫಲ್ಯಗಳ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ. ಆ ಪಕ್ಷದಲ್ಲಿ ಕುಮಾರಸ್ವಾಮಿಯವರ ಬಗ್ಗೆ ಯಾರಿಗೂ ತೃಪ್ತಿ ಇಲ್ಲ’ ಎಂದು ಪ್ರತಿಪಾದಿಸಿದರು.

‘ಜೆಡಿಎಸ್‌ ವಿರುದ್ಧ ದನಿ ಎತ್ತದ ಕಾಂಗ್ರೆಸ್‌ಗೆ ಶಕ್ತಿ ಇಲ್ಲದಂತಾಗಿದೆ. ರಾಜ್ಯದಲ್ಲಿ ಬದಲಾವಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಕಾರ್ಯಕರ್ತರು ಪಕ್ಷವನ್ನು ಬಲಪಡಿಸಬೇಕು’ ಎಂದು ಕೋರಿದರು.

‘ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಆರ್ಥಿಕವಾಗಿ ಇಡೀ ವಿಶ್ವದಲ್ಲೇ 6ನೇ ಸ್ಥಾನ ಪಡೆದಿದೆ. ಇನ್ನು ಹತ್ತು ವರ್ಷ ಮೋದಿ ಅಧಿಕಾರದಲ್ಲಿ ಇದ್ದರೆ ಮೊದಲನೇ ಸ್ಥಾನಕ್ಕೆ ಬರುತ್ತದೆ. ಇಂಥ ಸನ್ನಿವೇಶದಲ್ಲಿ ಅವರ ವಿರುದ್ಧ ಅವಿಶ್ವಾಸ ಮಂಡಿಸಿದ ಕಾಂಗ್ರೆಸ್‌ ಮುಖಭಂಗ ಅನುಭವಿಸಿತು’ ಎಂದು ಟೀಕಿಸಿದರು.

‘ಕೇಂದ್ರದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳನ್ನು ಬಿಟ್ಟರೆ ರಾಜ್ಯದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಜಾರಿಯಾಗಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು 24*7 ಕುಡಿಯುವನೀರು ಪೂರೈಕೆ ಯೋಜನೆಯೂ ಸ್ಥಗಿತಗೊಂಡಿದೆ’ ಎಂದು ಆರೋಪಿಸಿದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಮತ್ತು ಬಿ.ಶ್ರೀರಾಮುಲು ಮಾತನಾಡಿದರು. ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ, ಶಾಸಕ ಎಂ.ಎಸ್‌.ಸೋಮಲಿಂಗಪ್ಪ, ಸಂಸದ ಕರಡಿ ಸಂಗಣ್ಣ, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಚನ್ನಬಸನವಗೌಡ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !