ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಹೊಟ್ಟೆಗಾಗಿ...

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಹಿರಿಯ ನಟ ಅನಂತ್ ನಾಗ್ ಅವರು ಅಂದು ತಮ್ಮ ಕಿಸೆಯಲ್ಲಿ ಒಂದು ಟಿಪ್ಪಣಿಯನ್ನು ಇಟ್ಟುಕೊಂಡಿದ್ದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಯಾವೆಲ್ಲ ವಿಚಾರಗಳನ್ನು ಮರೆಯದೆ ಹೇಳಬೇಕು ಎಂಬುದನ್ನು ಅದರಲ್ಲಿ ಗುರುತು ಮಾಡಿಕೊಂಡಿದ್ದರು.

ಅದು ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಪತ್ರಿಕಾಗೋಷ್ಠಿ. ಅನಂತ್ ನಾಗ್ ಅವರಲ್ಲದೆ ಈ ಚಿತ್ರದಲ್ಲಿ ರಾಧಿಕಾ ಚೇತನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನರೇಂದ್ರ ಬಾಬು ನಿರ್ದೇಶನದ ಚಿತ್ರ ಇದು. ಈ ಶುಕ್ರವಾರ (ಮೇ 25) ಇದು ತೆರೆಗೆ ಬರುತ್ತಿದೆ.

‘ಪತ್ರಕರ್ತರು ನನ್ನ ಎದುರು ಇದ್ದಾಗ ಕೆಲವು ವಿಷಯಗಳನ್ನು ಹೇಳುವುದನ್ನು ಮರೆಯಬಾರದು. ಹಾಗಾಗಿಯೇ ನೋಟ್ಸ್‌ ಸಿದ್ಧ ಮಾಡಿಕೊಂಡು ಬಂದಿದ್ದೇನೆ’ ಎನ್ನುತ್ತ ಮಾತು ಆರಂಭಿಸಿದರು ಅನಂತ್. ‘ಈ ಚಿತ್ರಕ್ಕೆ ಈ ಶೀರ್ಷಿಕೆಯನ್ನು ಏಕೆ ಇಟ್ಟಿದ್ದಾರೆ ಎಂಬುದು ಚಿತ್ರ‌ ವೀಕ್ಷಿಸಿದ ನಂತರ ಗೊತ್ತಾಗುತ್ತದೆ. ಈ ಚಿತ್ರದಲ್ಲಿ ನಾನು ಜನಾರ್ದನನ ಭಕ್ತ’ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕರು ಚೆನ್ನಾಗಿ ಬರೆಯುತ್ತಾರೆ ಎನ್ನುವ ಮೆಚ್ಚುಗೆಯ ಮಾತುಗಳು ಅನಂತ್ ನಾಗ್ ಅವರಿಂದ ಬಂದವು. ‘ಈ ಚಿತ್ರ ಮಾಡುವ ಸಂದರ್ಭದಲ್ಲಿ ಚಿತ್ರತಂಡಕ್ಕೆ ತುಸು ಆರ್ಥಿಕ ಸಂಕಷ್ಟ ಎದುರಾಯಿತು. ಆಗ ನಾನು ಹರೀಶ್ ಶೇರಿಗಾರ್ (ಇವರು ದುಬೈನಲ್ಲಿ ಉದ್ಯಮಿ) ಅವರ ಜೊತೆ ಮಾತನಾಡಿದೆ. ಅವರು ಸಿನಿಮಾ ನಿರ್ಮಾಣದಲ್ಲಿ ಜೊತೆಯಾದರು. ದುಬೈನಲ್ಲಿ ಚಿತ್ರೀಕರಣ ಮಾಡೋಣ ಎಂದು ಕರೆದರು. ಹರೀಶ್ ಅವರು ಸಿಕ್ಕಿದ್ದು ನನಗೆ ಒಬ್ಬ ತಮ್ಮ ಸಿಕ್ಕಿದಂತೆ ಆಗಿದೆ’ ಎಂದರು ಅನಂತ್ ನಾಗ್.

ಈ ಸಿನಿಮಾದ ವಿತರಣೆ ಚೆನ್ನಾಗಿ ಆಗಬೇಕು ಎಂಬ ಉದ್ದೇಶದಿಂದ ಅನಂತ್ ನಾಗ್ ಅವರೇ ಜಯಣ್ಣ ಅವರ ಜೊತೆ ಮಾತನಾಡಿದ್ದಾರಂತೆ.

‘ಬುರ್ಜ್ ಕಲೀಫಾದಲ್ಲಿ ಚಿತ್ರೀಕರಣ ನಡೆದಿರುವ ಮೊದಲ ಕನ್ನಡ ಸಿನಿಮಾ ಇದು’ ಎಂದರು ಹರೀಶ್ ಶೇರಿಗಾರ್. ‘ಕುಟುಂಬದ ಎಲ್ಲರೂ ಜೊತೆಯಾಗಿ ಕುಳಿತು ನೋಡಬಹುದಾದ ಸಿನಿಮಾ ಇದು. ಜನರೇಷನ್ ಗ್ಯಾಪ್ ಬಗ್ಗೆ ಇದು ಮಾತನಾಡುತ್ತದೆ‌’ ಎಂದರು.

‘ಇದು ನನಗೆ ಅತ್ಯಂತ ತೃಪ್ತಿ ಕೊಟ್ಟ ಚಿತ್ರ. ಚಿತ್ರೀಕರಣದಲ್ಲಿ ತೊಡಗಿದ್ದಾಗ ನನಗೆ ಅನಂತ್ ನಾಗ್ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿಯಲು ಸಾಧ್ಯವಾಯಿತು. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯ’ ಎಂದರು ರಾಧಿಕಾ. ನಟಿ ಸ್ಮಿತಾ ಕುಲಕರ್ಣಿ ಅವರೂ ಇದರಲ್ಲಿ ಒಂದು ಪಾತ್ರ ನಿಭಾಯಿಸಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ನಿರ್ದೇಶಕ ಬಾಬು, ‘ಅನಂತ್ ನಾಗ್ ಅವರ ಜೊತೆ ಪೂರ್ಣ ಪ್ರಮಾಣದಲ್ಲಿ ಒಂದು ಸಿನಿಮಾ ಮಾಡುವುದು ನನ್ನ ಬಹುದಿನಗಳ ಆಸೆ. ಅನಂತ್ ಅವರ ಸಂಯಮ ಮತ್ತು ಶಿಸ್ತನ್ನು ಸ್ಮರಿಸಲೇಬೇಕು. ಇದು ಮಾಮೂಲಿ ಸಿನಿಮಾಗಳಂತೆ ಅಲ್ಲ. ಮೊದಲು, ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಶೀರ್ಷಿಕೆ‌ಯನ್ನು ಇದಕ್ಕೆ ಕೊಟ್ಟಿದ್ದೆವು. ಅದು ಸರಿಯಾಗುವುದಿಲ್ಲ. ಸಿನಿಮಾಕ್ಕೆ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಹೆಸರು ನೀಡಿದವರು ಕೂಡ ಅನಂತ್ ನಾಗ್ ಅವರೇ’ ಎಂದರು.


-ರಾಧಿಕಾ ಚೇತನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT