ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮುಲು ನೇತೃತ್ವದಲ್ಲಿ ರೋಡ್‌ ಷೋ, ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನ

ಕೇಸರಿಮಯವಾದ ನಗರ
Last Updated 20 ಏಪ್ರಿಲ್ 2019, 14:14 IST
ಅಕ್ಷರ ಗಾತ್ರ

ಹೊಸಪೇಟೆ: ಶನಿವಾರ ಸಂಜೆ ನಗರದಲ್ಲಿ ನಡೆದ ರೋಡ್‌ ಷೋ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಬಿಜೆಪಿ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿಕೊಂಡಿದ್ದರು. ‘ಮತ್ತೊಮ್ಮೆ ಮೋದಿ’ ಎಂಬ ಬರಹ ಹೊಂದಿದ್ದ ಟೀ ಶರ್ಟ್‌ಗಳನ್ನು ಧರಿಸಿದ್ದರು. ಕೇಸರಿ ವರ್ಣದ ಛತ್ರಿಗಳನ್ನು ಹಿಡಿದುಕೊಂಡಿದ್ದರು. ಆಂಜನೇಯ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರವಿರುವ ಕೇಸರಿ ಧ್ವಜಗಳು ರಾರಾಜಿಸಿದವು. ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ರೋಡ್‌ ಷೋನಲ್ಲಿ ಹೆಜ್ಜೆ ಹಾಕಿದರು.

‘ಮತ್ತೊಮ್ಮೆ ಮೋದಿ.. ಮೋದಿ..’, ‘ನಾನು ಈ ದೇಶದ ಚೌಕಿದಾರ’, ‘ರಾಹುಲ್‌ ಗಾಂಧಿ ಚೋರ್‌ ಹೈ’ ಘೋಷಣೆಗಳನ್ನು ಕೂಗಿದರು. ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ರೋಡ್‌ ಷೋ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ರೋಟರಿ ವೃತ್ತ, ಬಸ್‌ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ಮೇನ್‌ ಬಜಾರ್‌ ಮೂಲಕ ಹಾದು ಬಳ್ಳಾರಿ ವೃತ್ತದಲ್ಲಿ ಕೊನೆಗೊಂಡಿತು. ರೋಡ್‌ ಷೋನಿಂದ ಪ್ರಮುಖ ರಸ್ತೆಗಳು ಕೇಸರಿಮಯವಾಗಿದ್ದವು.

ಇದಕ್ಕೂ ಮುನ್ನ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಲ್ಲಿ ಶಾಸಕ ಬಿ. ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ, ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಕವಿರಾಜ್‌ ಅರಸ್‌, ಮೃತ್ಯುಂಜಯ ಜಿನಗಾ, ಗುದ್ಲಿ ಪರಶುರಾಮ, ಸಾಲಿ ಸಿದ್ದಯ್ಯ ಸ್ವಾಮಿ, ಕಟಗಿ ರಾಮಕೃಷ್ಣ, ರಾಮಚಂದ್ರಗೌಡ ತೆರೆದ ವಾಹನದಲ್ಲಿ ನಿಂತು, ಜನರತ್ತ ಕೈ ಮುಗಿದು ಬೆಂಬಲಿಸುವಂತೆ ಕೋರಿದರು. ಮೆರವಣಿಗೆ ಹಾದು ಹೋಗುವ ವೇಳೆ ಜನ ಮುಖಂಡರ ಕೈಕುಲುಕಿ ಶುಭಾಶಯ ಕೋರಿದರು. ಯುವಕರು ಸೆಲ್ಫಿ ತೆಗೆದುಕೊಂಡರು.

ಬಿ. ಶ್ರೀರಾಮುಲು ಮಾತನಾಡಿ, ‘ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಡೀ ದೇಶವೇ ತುದಿಗಾಲ ಮೇಲೆ ನಿಂತಿದೆ. ನಗರದ ಮತದಾರರು ದೇವೇಂದ್ರಪ್ಪನವರನ್ನು ಗೆಲ್ಲಿಸಿ, ಮೋದಿಯವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT